

ನವದೆಹಲಿ: ಲಖೀಂಪುರ್ ಖೇರಿ ಘಟನೆಯ ಆಧಾರದ ಮೇಲೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವನ್ನು ಪುನಶ್ಚೇತನ ಮಾಡಲು ಬಯಸುತ್ತಿರುವ ಜನರಿಗೆ ದೊಡ್ಡ ನಿರಾಶೆ ಕಾದಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಲಖೀಂಪುರ್ ಘಟನೆಯ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿದ ನಂತರ, ಕಿಶೋರ್, ಈ ಮಾತು ಹೇಳಿದ್ದಾರೆ.
ದೇಶದ ಚುಕ್ಕಾಣಿ ಹಿಡಿದಿರುವ ಬಿಜೆಪಿ ವಿರುದ್ಧ ಚುನಾವಣೆ ಎದುರಿಸಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪ್ರಯತ್ನ ನಡೆಸುತ್ತಲೇ ಇವೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಲಖೀಂಪುರ್ ದುರಂತವು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ವಿರುದ್ಧ ಮಾತನಾಡಲು ಅವಕಾಶ ಮಾಡಿಕೊಟ್ಟಿದೆ. ಇದೇ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆಗಳನ್ನು ಚುನಾವಣಾ ದೃಷ್ಟಿಕೋನದಿಂದ ಅಳೆಯಬಲ್ಲ ಪ್ರಶಾಂತ್ ಕಿಶೋರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಜಿಒಪಿ ಅರ್ಥಾತ್ 'ಗ್ರ್ಯಾಂಡ್ ಓಲ್ಡ್ ಪಾರ್ಟಿ' ಅಥವಾ 'ಗವರ್ನಮೆಂಟ್ ಆಫ್ ಪಂಜಾಬ್' ಎಂದು ಕಾಂಗ್ರೆಸ್ನತ್ತ ಬೆಟ್ಟು ಮಾಡಿರುವ ಕಿಶೋರ್, "ಲಖೀಂಪುರ್ ಖೇರಿ ಘಟನೆಯ ಆಧಾರದ ಮೇಲೆ ಜಿಒಪಿ ನೇತೃತ್ವದ ವಿರೋಧದ ತ್ವರಿತ ಮತ್ತು ದಿಢೀರ್ ಪುನರುಜ್ಜೀವನವನ್ನು ಹುಡುಕುತ್ತಿರುವ ಜನರು ದೊಡ್ಡ ನಿರಾಶೆಗೆ ಮೈಒಡ್ಡುತ್ತಿದ್ದಾರೆ. ದುರದೃಷ್ಟವಶಾತ್ ಆಳವಾಗಿ ಬೇರೂರಿರುವ ಸಮಸ್ಯೆಗಳಿಗೆ ಮತ್ತು ಜಿಒಪಿಯ ರಚನಾತ್ಮಕ ದೌರ್ಬಲ್ಯಕ್ಕೆ ಯಾವುದೇ ತ್ವರಿತ ಪರಿಹಾರಗಳಿಲ್ಲ" ಎಂದು ಬರೆದಿದ್ದಾರೆ. (ಏಜೆನ್ಸೀಸ್)