ಕುಡಿದ ಮತ್ತಿನಲ್ಲಿ ತೂರಾಡಿದ ಅಮೃತಸರದ ಪೊಲೀಸ್ ಪೇದೆ
ಸಮವಸ್ತ್ರದಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಪೊಲೀಸ್ ವಿರುದ್ಧ 12 ವರ್ಷದ ಬಾಲಕಿಗೆ ಕಾರು ಡಿಕ್ಕಿ ಹೊಡೆದ ಆರೋಪ
Amritsar Police: ಪಂಜಾಬ್‌ನ ಅಮೃತಸರದಲ್ಲಿ ಪೊಲೀಸ್ ಸಮವಸ್ತ್ರದಲ್ಲೇ ಮದ್ಯ ಸೇವಿಸಿ ತೂರಾಡುತ್ತಿದ್ದ ಪೇದೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ಹಾಗೂ ಚರ್ಚೆಗೆ ಗ್ರಾಸವಾಗಿದ್ದು, ಕರ್ತವ್ಯ ಲೋಪ ಎಸಗಿದ ಅಮೃತ್‌ಪಾಲ್ ಸಿಂಗ್ ಎಂಬ ಪೇದೆಯನ್ನು ಇಲಾಖೆಯು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
ವಿಶೇಷವೆಂದರೆ, ಪೊಲೀಸ್ ಕಂಟ್ರೋಲ್ ರೂಂನಲ್ಲಿ (PCR) ಕೆಲಸ ಮಾಡುತ್ತಿದ್ದ ಅಮೃತ್‌ಪಾಲ್ ಸಿಂಗ್ ಈಗಾಗಲೇ ಕರ್ತವ್ಯಕ್ಕೆ ಗೈರಾಗಿದ್ದ (Absent) ಎಂಬ ವಿಚಾರವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಈತ ಮದ್ಯದ ಅಮಲಿನಲ್ಲಿ ಸರಿಯಾಗಿ ನಿಲ್ಲಲೂ ಆಗದೆ ತೂರಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಎಡಿಸಿಪ್ ಜೋಗೇಶ್ವರ್ ಸಿಂಗ್ ಗೋರಾಯಾ, ವಿಡಿಯೋ ಗಮನಕ್ಕೆ ಬಂದ ತಕ್ಷಣ ಪೇದೆಯನ್ನು ಪತ್ತೆಹಚ್ಚಿ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಗುರುವಾರ ಸಂಜೆ ಸುಲ್ತಾನ್ವಿಂಡ್ ರಸ್ತೆಯಲ್ಲಿ ಅಮೃತ್‌ಪಾಲ್ ಸಿಂಗ್ ಚಲಾಯಿಸುತ್ತಿದ್ದ ಕಾರು 12 ವರ್ಷದ ಬಾಲಕಿಗೆ ಡಿಕ್ಕಿ ಹೊಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆಯಲ್ಲಿ ಬಾಲಕಿಯ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.