

Narendra Modi: ಬಿಹಾರದ ವಿಧಾನಸಭಾ ಚುನಾವಣೆಗೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಸೆಪ್ಟೆಂಬರ್ 26) ದೆಹಲಿಯಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ಉದ್ಘಾಟಿಸಿದರು. ರಾಜ್ಯದ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 7,500 ಕೋಟಿ ನಿಧಿಯನ್ನು ನೇರವಾಗಿ ವರ್ಗಾಯಿಸಿದರು, ತಲಾ ಒಬ್ಬ ಮಹಿಳೆ 10,000 ರೂಪಾಯಿ ಆರ್ಥಿಕ ನೆರವನ್ನು ಈ ಯೋಜನೆಯಿಂದ ಪಡೆಯಲಿದ್ದಾರೆ.
ಇದನ್ನೂ ಓದಿ:ಪೌರ ಕಾರ್ಮಿಕರು ನಿಜವಾದ ಕಾಯಕ ಯೋಗಿಗಳು
ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಪಾಟ್ನಾದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಾರಂಭದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ದಿನಾಂಕವನ್ನು ಸೆಪ್ಟೆಂಬರ್ 22 ರಂದು ನಿಗದಿಪಡಿಸಲಾಗಿತ್ತು, ಆದರೆ, ಚುನಾವಣಾ ವರ್ಷವಾಗಿರುವುದರಿಂದ ಮತ ಲೆಕ್ಕಾಚಾರ ಗಮನದಲ್ಲಿಟ್ಟುಕೊಂಡು ಮತ್ತು ಪ್ರಧಾನಮಂತ್ರಿಗಳೇ ಚಾಲನೆ ನೀಡಿದರೆ ಮಹಿಳಾ ಸಬಲೀಕರಣದ ಬಗ್ಗೆ ಬಲವಾದ ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಸೂಚನೆ ನೀಡಿದ ಬಳಿಕ ಕಾರ್ಯಕ್ರಮವನ್ನು 26 ಕ್ಕೆ ಮರು ನಿಗದಿಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಬಿಹಾರದ ಮಹಿಳೆಯರ ಸೇವೆ, ಸಮೃದ್ಧಿ ಮತ್ತು ಘನತೆಗಾಗಿ ನಿತೀಶ್ ಕುಮಾರೊಂದಿಗೆ ಕೈ ಜೋಡಿಸಿ ಒಟ್ಟಾಗಿ ಕೆಲಸ ಮಾಡುತ್ತೇನೆ ಎಂದರು. ರೋಜ್‌ಗಾರ್ ಯೋಜನೆಯು ಕೇಂದ್ರ ಸರ್ಕಾರದ ಲಖ್‌ಪತಿ ದೀದಿ ಅಭಿಯಾನವನ್ನು ಮತ್ತಷ್ಟು ಬಲಪಡಿಸಿದ್ದು, ಡಬಲ್ ಇಂಜಿನ್ ಸರ್ಕಾರಗಳ ಕ್ರಮ ಮುಂದುವರಿಸುತ್ತಿರುವ ರೀತಿಯನ್ನು ನೋಡಿದರೆ, ಬಿಹಾರವು ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಲಖ್‌ಪತಿ ದೀದಿಗಳನ್ನು ಹೊಂದುವ ದಿನ ದೂರವಿಲ್ಲ ಎಂದರು. ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಡ್ರೋನ್ ದೀದಿ ಅಭಿಯಾನ, ಬಿಮಾ ಸಖಿ ಅಭಿಯಾನ ಮತ್ತು ಬ್ಯಾಂಕ್ ದೀದಿ ಅಭಿಯಾನದಂತಹ ಉಪಕ್ರಮಗಳು ಮಹಿಳೆಯರಿಗೆ ಸ್ವ-ಉದ್ಯೋಗವನ್ನು ವಿಸ್ತರಿಸುವ ಮಾರ್ಗಗಳಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಹಿಂದಿನ ಆರ್‌ಜೆಡಿ ಸರ್ಕಾರವನ್ನು ನೀತಿಯನ್ನು ಗುರಿಯಾಗಿಸಿಕೊಂಡ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಬಿಹಾರ ಆರ್‌ಜೆಡಿಯ ಆಳ್ವಿಕೆಯಲ್ಲಿದ್ದ ದಿನಗಳನ್ನು ಲ್ಯಾಟಿನ್ ಯುಗ ಎಂದು ಕರೆದರು ಮತ್ತು ಇದನ್ನು ಯಾರೂ ಮರೆಯಬಾರದು ಎಂದರು. ಆರ್‌ಜೆಡಿ ಆಡಳಿತದಲ್ಲಿ ಮಹಿಳೆಯರು ಕಾನೂನುಬಾಹಿರತೆ ಮತ್ತು ಭ್ರಷ್ಟಾಚಾರದ ಹೊರೆಯನ್ನು ಹೊತ್ತಿದ್ದರು, ಬಿಹಾರದಲ್ಲಿ ಪ್ರಮುಖ ರಸ್ತೆಗಳು ಹಾಳಾಗಿದ್ದವು, ಸೇತುವೆಗಳು ಅಸ್ತಿತ್ವದಲ್ಲಿರಲಿಲ್ಲ, ಮೂಲಸೌಕರ್ಯಗಳ ಕೊರತೆಯಿಂದಾಗಿ ಹೆಣ್ಣುಮಕ್ಕಳು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದಾರೆ. ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳಿಗೆ ತಲುಪುವುದೇ ಸಾಧ್ಯವಾಗುತ್ತಿರಲಿಲ್ಲ. ಇಂತಹ ಕಷ್ಟಕರ ಪರಿಸ್ಥಿತಿಯಿಂದ ಮಹಿಳೆಯರು ಹೊರಬರಲು ಮೈತ್ರಿ ಸರ್ಕಾರ ನೆರವಿನ ಹಸ್ತ ಚಾಚಿದ್ದು, ಆರ್‌ಜೆಡಿ ಆಡಳಿತದ ಸಂದರ್ಭ ಜನರಲ್ಲಿ ಭಯದ ವಾತಾವರಣವಿತ್ತು ಎಂದು ಹೇಳಿದರು.
ಆರ್‌ಜೆಡಿ ಆಡಳಿತದಲ್ಲಿ ಇಡೀ ರಾಜ್ಯವೇ ತೊಂದರೆ ಅನುಭವಿಸಿದೆ, ಬಡವರಿಂದ ಹಿಡಿದು ವೈದ್ಯರು ಮತ್ತು ಐಎಎಸ್ ಅಧಿಕಾರಿಗಳ ಕುಟುಂಬಗಳವರೆಗೆ ಆರ್‌ಜೆಡಿ ನಾಯಕರು ದೌರ್ಜನ್ಯ ನಡೆಸಿದ್ದಾರೆ. ಪ್ರಸ್ತುತ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಿಂದ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಪುನಃಸ್ಥಾಪನೆಯಾಗಿದ್ದು, ಹೆಣ್ಣುಮಕ್ಕಳು ಭಯವಿಲ್ಲದೆ ಮನೆಗಳಿಂದ ಹೊರಬರುತ್ತಾರೆ ಮತ್ತು ತಡರಾತ್ರಿಯೂ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಬಾಗಲಕೋಟೆ, ಮೈಸೂರು ಟೀಂ ಚಾಂಪಿಯನ್ಸ್
ರಾಜ್ಯದ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು ನೀಡುವ ಮೂಲಕ ಅವರನ್ನು ಸಬಲರನ್ನಾಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ, ಅಗತ್ಯ ಬಿದ್ದರೆ 6 ತಿಂಗಳ ನಂತರ ಹೆಚ್ಚುವರಿಯಾಗಿ 2 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗುತ್ತದೆ. ಕೃಷಿ, ಪಶುಸಂಗೋಪನೆ, ಕರಕುಶಲ ವಸ್ತುಗಳು, ಟೈಲರಿಂಗ್, ನೇಯ್ಗೆ ಮತ್ತು ಇತರ ಸಣ್ಣ-ಪ್ರಮಾಣದ ಉದ್ಯಮಗಳು ಸೇರಿದಂತೆ ಫಲಾನುಭವಿಯ ಆಯ್ಕೆಯ ಕ್ಷೇತ್ರಗಳಲ್ಲಿ ಈ ಅನುದಾನವನ್ನು ಬಳಸಿಕೊಳ್ಳಬಹುದು.(ಏಜೆನ್ಸೀಸ್)