Pakistan Roti: ಪಾಕಿಸ್ತಾನದ ಲಾಹೋರ್ನಲ್ಲಿ ರೊಟ್ಟಿ ತೂಕ ಪರಿಶೀಲನೆ ವೇಳೆ ಮಹಿಳಾ ಅಧಿಕಾರಿಯೊಬ್ಬರು ಮಾಡಿದ ಮಾತಿನ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೊಟ್ಟಿ 90 ಗ್ರಾಂ ತೂಕವಿರುವುದನ್ನು ನೋಡಿ ‘90 ರೂಪಾಯಿ’ ಎಂದು ಹೇಳಿದ್ದು, ನೆಟ್ಟಿಗರಲ್ಲಿ ನಗು ಮೂಡಿಸಿದೆ. ಪಂಜಾಬ್ ಎನ್ಫೋರ್ಸ್ಮೆಂಟ್ ಆ್ಯಂಡ್ ರೆಗ್ಯುಲೇಟರಿ ಅಥಾರಿಟಿ (PERA) ಅಧಿಕಾರಿಗಳ ತಪಾಸಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಲಾಹೋರ್ನ ನಿಷ್ಟಾರ್ ತೆಹಸಿಲ್ ಪ್ರದೇಶದ ತಂದೂರ್ನಲ್ಲಿ ಪಿಇಆರ್ಎ ಅಧಿಕಾರಿಗಳು ಆಹಾರದ ಬೆಲೆ ಹಾಗೂ ತೂಕ ಪರಿಶೀಲನೆ ನಡೆಸುತ್ತಿದ್ದರು. ಅಂಗಡಿ ಮಾಲೀಕ ಮುಹಮ್ಮದ್ ರಿಯಾಜ್ ರೊಟ್ಟಿಗೆ 18ರಿಂದ 20 ರೂಪಾಯಿ ಪಡೆಯುವುದಾಗಿ ಹೇಳಿದಾಗ, ಸರ್ಕಾರ ನಿಗದಿಪಡಿಸಿದ ಬೆಲೆ 14 ರೂಪಾಯಿ, ಗರಿಷ್ಠ 17 ರೂಪಾಯಿಗೆ ಮಾರಾಟ ಮಾಡಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ರೊಟ್ಟಿ ಕನಿಷ್ಠ 100 ಗ್ರಾಂ ತೂಕ ಹೊಂದಿರಬೇಕು ಎಂಬ ನಿಯಮವನ್ನೂ ನೆನಪಿಸಿದ್ದಾರೆ.
ರೊಟ್ಟಿಯನ್ನು ಎಲೆಕ್ಟ್ರಾನಿಕ್ ತೂಕದ ಯಂತ್ರದಲ್ಲಿ ಇಟ್ಟಾಗ 90 ಗ್ರಾಂ ತೋರಿಸಿದೆ. ಈ ವೇಳೆ ಅಧಿಕಾರಿ ‘90 ರೂಪಾಯಿ’ ಎಂದು ಹೇಳಿದ್ದು, ಬಳಿಕ ರೊಟ್ಟಿ 90 ಗ್ರಾಂ ಇದೆ, ನಿಗದಿತ 100 ಗ್ರಾಂ ತೂಕಕ್ಕಿಂತ ಕಡಿಮೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂಗಡಿ ಮಾಲೀಕ ರೊಟ್ಟಿ ತಣ್ಣಗಾದಾಗ ತೂಕ ಕಡಿಮೆಯಾಗಬಹುದು ಎಂದು ವಾದಿಸಿದ್ದಾರೆ.
ಅಂಗಡಿಯಲ್ಲಿ ಸರ್ಕಾರ ನಿಗದಿಪಡಿಸಿದ ಬೆಲೆಪಟ್ಟಿ ಪ್ರದರ್ಶಿಸುವುದು ಕಡ್ಡಾಯ ಎಂದು ಅಧಿಕಾರಿ ಸೂಚಿಸಿದ್ದಾರೆ. ಅಲ್ಲದೆ, ಹಿಟ್ಟಿನ ಪೂರೈಕೆಗಾಗಿ ಹಿಟ್ಟು ಮಿಲ್ಗಳು ಹಾಗೂ ಅಧಿಕೃತ ಮಾರಾಟ ಕೇಂದ್ರಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.
ತಪಾಸಣೆ ವೇಳೆ ರೊಟ್ಟಿಯ ಬೆಲೆ ನಿಯಮ ಉಲ್ಲಂಘಿಸಿದ್ದಕ್ಕೆ 20 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ತೂಕ ಕಡಿಮೆ ಇದ್ದ ವಿಚಾರಕ್ಕೆ ಆ ಸಮಯದಲ್ಲಿ ದಂಡ ವಿಧಿಸಿರಲಿಲ್ಲ. ದಂಡದ ಮಾಹಿತಿ ನೋಂದಾಯಿತ ಮೊಬೈಲ್ಗೆ ಕಳುಹಿಸಲಾಗುವುದು ಮತ್ತು ಜಾಝ್ಕ್ಯಾಶ್ (JazzCash), ಈಸಿಪೈಸಾ (Easypaisa) ಮೂಲಕ ಪಾವತಿಸಬಹುದು ಎಂದಿದ್ದಾರೆ.
ಇದನ್ನೂ ಓದಿ: ಶ್ರದ್ಧಾ ಕಪೂರ್ ‘ಈಥಾ’ಗೆ ಸೆನ್ಸಾರ್ ಸರ್ಟಿಫಿಕೇಟ್; ರನ್ಟೈಮ್ ಎಷ್ಟು ಗೊತ್ತಾ? | Shraddha Kapoor
ಅಧಿಕಾರಿ ಗ್ರಾಂ ಬದಲು ರೂಪಾಯಿ ಎಂದಿದ್ದಕ್ಕೆ ನೆಟ್ಟಿಗರು ತಮಾಷೆಯ ಕಾಮೆಂಟ್ಗಳನ್ನು ಮಾಡಿದ್ದಾರೆ. ಇನ್ನೊಂದೆಡೆ, ಸಣ್ಣ ವ್ಯಾಪಾರಿಗಳ ಮೇಲೆ ಇಂತಹ ತಪಾಸಣೆ ನಡೆಸುವ ರೀತಿ ಹಾಗೂ ಹಿಟ್ಟು, ಇಂಧನ ಬೆಲೆ ಏರಿಕೆಯಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)