ನಮ್ಮ ಕುಡಿಯುವ ನೀರು ಸುರಕ್ಷಿತವಾಗಿದೆ, FSSAIಯಿಂದ ಇನ್ನು ಯಾವುದೇ ನೋಟಿಸ್ ಸಿಕ್ಕಿಲ್ಲ; ಬಿಸ್ಲೆರಿ ಸ್ಪಷ್ಟನೆ..Bisleri

ನಮ್ಮ ಕುಡಿಯುವ ನೀರು ಸುರಕ್ಷಿತವಾಗಿದೆ, FSSAIಯಿಂದ ಇನ್ನು ಯಾವುದೇ ನೋಟಿಸ್ ಸಿಕ್ಕಿಲ್ಲ; ಬಿಸ್ಲೆರಿ ಸ್ಪಷ್ಟನೆ..Bisleri
Published on: 
  • ಬಿಸ್ಲೆರಿ ನೀರು ಕುಡಿಯಲು ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ಕೊಟ್ಟ ಸಂಸ್ಥೆ.

  • 14 ತಿಂಗಳ ಹಳೆಯ ಪ್ರಕರಣ, ಇಲ್ಲಿಯವರೆಗೂ ನೋಟಿಸ್ ಸಿಕ್ಕಿಲ್ಲ.

  • FSSAI ಕ್ರಮಕ್ಕೆ ಸಂಪೂರ್ಣ ಸಹಕರಿಸುತ್ತೇವೆ ಎಂದ ಬಿಸ್ಲೆರಿ ಸಂಸ್ಥೆ.

ಮುಂಬೈ: ಶುದ್ಧ ನೀರು ಎಂದು ಕುಡಿಯಲಾಗುತ್ತಿದ್ದ ಬಿಸ್ಲರಿ ನೀರಿನಲ್ಲಿ ಕ್ಯಾನ್ಸರ್​ಕಾರಕ ಅಂಶವಿದೆ ಎಂದು ತಿಳಿಯುತ್ತಲೇ ಭಾರತದಲ್ಲಿ ಸಂಸ್ಥೆಯ ನೀರಿನ ಬಗ್ಗೆ ಸಾಕಷ್ಟು ಚರ್ಚೆ ಹೆಚ್ಚಾಗಿದೆ. ಪ್ರಯೋಗಾಲಯದ ಪರೀಕ್ಷೆಯಲ್ಲಿ ನೀರಿನ ಮಾದರಿಯೊಂದು ಅಸುರಕ್ಷಿತ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಾನೂನು ಕ್ರಮಕ್ಕೆ ಮುಂದಾಗಿದೆ. ಸದ್ಯ ಈ ಬಗ್ಗೆ ಎಕ್ಸ್​ನಲ್ಲಿ ಬಿಸ್ಲೆರಿ ಸಂಸ್ಥೆಯು ಸ್ಪಷ್ಟನೆಯೊಂದನ್ನು ನೀಡಿ, ಪೋಸ್ಟ್ ಹಂಚಿಕೊಂಡಿದೆ.

ನಮ್ಮ ಕಂಪನಿಯ ಕುಡಿಯುವ ನೀರು ಸೇವನೆಗೆ ಸುರಕ್ಷಿತವಾಗಿದೆ. ಈ ಪ್ರಕರಣ ಇಂದು ನಿನ್ನೆಯದ್ದಲ್ಲ 14 ತಿಂಗಳ ಹಳೆಯದ್ದು. ಗುಣಮಟ್ಟ ಕಾಪಾಡಲು ಕಟ್ಟುನಿಟ್ಟಿನ ಪರೀಕ್ಷೆ ನಡೆಸಲಗುತ್ತದೆ. ಈ ವಿಚಾರದಲ್ಲಿ ನಾವು ಎಫ್​ಎಸ್​​ಎಸ್​ಎಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ತಿಳಿಸಿದೆ.

ಬಿಸ್ಲೆರಿ ಸುದೀರ್ಘ ಪೋಸ್ಟ್​ನಲ್ಲಿ ಸ್ಪಷ್ಟನೆ ಕೊಟ್ಟಿದ್ದೇನು?

2025ರ ಸೆಪ್ಟೆಂಬರ್ 30ರಂದು FSSAI ಅಧಿಕಾರಿಗಳು ಗೋವಾ ಘಟಕದಿಂದ ಆರು ನೀರಿನ ಮಾದರಿ ಸಂಗ್ರಹಿಸಿದ್ದರು. ಇದರಲ್ಲಿ ಐದು ಮಾದರಿ ಪ್ರಾಧಿಕಾರ ಗುಣಮಟ್ಟದ ಮಾನದಂಡಗಳಲ್ಲಿ ಉತ್ತೀರ್ಣವಾಗಿದ್ದವು. ಆದರೆ, ಆರನೇ ಮಾದರಿಯಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತಕ್ಕಿಂತ ಪ್ರತಿ ಲೀಟರ್‌ಗೆ 10 ಮೈಕ್ರೋಗ್ರಾಂ ತುಸು ಹೆಚ್ಚಿತ್ತು. ಅಂದರೆ ಪ್ರತಿ ಲೀಟರ್​ಗೆ 12 ಮೈಕ್ರೋಗ್ರಾಂ ಇತ್ತು ಎಂದು ದಾಖಲಾಗಿದೆ.

ಈ ವರದಿಯ ನಂತರ ಕಂಪನಿ ಪ್ರತ್ಯೇಕವಾಗಿ ಮತ್ತೆ ಪರೀಕ್ಷೆ ನಡೆಸಿತ್ತು. ಅದರಲ್ಲಿ ಬ್ರೋಮೇಟ್ ಪ್ರಮಾಣ ಮಿತಿಯಲ್ಲಿತ್ತು. ಆದರೆ, FSSAI ಪರೀಕ್ಷೆಯ ಫಲಿತಾಂಶ ಪ್ರಶ್ನಿಸಿ 2025ರ ನವೆಂಬರ್ 22ರಂದು ಬಿಸ್ಲೆರಿ ಮೇಲ್ಮನವಿ ಸಲ್ಲಿಸಿತ್ತು. ಬಳಿಕ FSSAI ಆ ಮಾದರಿಯನ್ನು ರೆಫರಲ್ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಅಲ್ಲಿ ಪಾಲಿ ಸೈಕ್ಲಿಕ್​​ ಅರೋಮ್ಯಾಟಿಕ್ ಹೈಡ್ರೋಕಾರ್ಬನ್​ ಪತ್ತೆಯಾಗಿದೆ ಎಂದು ಹೇಳಿದೆ. ಆ ಪ್ರಯೋಗಾಲಯವೂ ಸಹ ನೀರು ಅಸುರಕ್ಷಿತ ಎಂದಿತ್ತು.

Also Read
ಶುದ್ಧ ನೀರೆಂದು ಕುಡಿಯುವ 'ಬಿಸ್ಲೆರಿ'ಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ; ಕಾನೂನು ಕ್ರಮಕ್ಕೆ FSSAI ಗ್ರೀನ್ ಸಿಗ್ನಲ್, ಹಲವು ಕಂಪನಿಗಳಿಗೆ ಶಾಕ್..Bisleri
ನಮ್ಮ ಕುಡಿಯುವ ನೀರು ಸುರಕ್ಷಿತವಾಗಿದೆ, FSSAIಯಿಂದ ಇನ್ನು ಯಾವುದೇ ನೋಟಿಸ್ ಸಿಕ್ಕಿಲ್ಲ; ಬಿಸ್ಲೆರಿ ಸ್ಪಷ್ಟನೆ..Bisleri

ನೋಟಿಸ್ ಸಿಕ್ಕಿಲ್ಲ

2026ರ ಫೆಬ್ರವರಿ 2ರಂದು ಸ್ವತಂತ್ರ ಪ್ರಯೋಗಾಲಯದ ವರದಿಯನ್ನು FSSAI ಪಶ್ಚಿಮ ಪ್ರಾದೇಶಿಕ ಕಚೇರಿಗೆ ಸಲ್ಲಿಸಲಾಗಿತ್ತು. ಆ ಬಳಿಕ ಪ್ರಾಧಿಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ನಾವು ಪ್ರಕರಣ ಮುಕ್ತಾಯವಾಗಿದೆ ಎಂದು ಭಾವಿಸಿದ್ದವೆ. ಆದರೆ, ಇಲ್ಲಿಯವರೆಗೂ ಈ ವಿಚಾರದ ಬಗ್ಗೆ ಯಾವುದೇ ನೋಟಿಸ್, ಮೇಲ್ ಕಳುಹಿಸಲಾಗಿಲ್ಲ. FSSAI ವೆಬ್‌ಸೈಟ್‌ನಲ್ಲೂ ಈ ನೋಟಿಸ್ ಲಭ್ಯವಿಲ್ಲ ಎಂದು ಬಿಸ್ಲೆರಿ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನಮ್ಮ 10 ಹಂತಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ 90ಕ್ಕೂ ಹೆಚ್ಚು ಕಠಿಣ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಗ್ರಾಹಕರ ಆರೋಗ್ಯಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ. ನಿಯಂತ್ರಕ ಪ್ರಕ್ರಿಯೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಭರವಸೆಯನ್ನು ನೀಡಿದೆ.

ಬಿಸ್ಲೆರಿ ನೀರು ಕುಡಿಯಬಹುದೇ?

ಯಾವ ಭಾಗದಲ್ಲಿ, ಯಾವ ಬ್ಯಾಚ್​ನ ಬಿಸ್ಲೆರಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಎನ್ನುವ ಬಗ್ಗೆ ಇಲ್ಲಿಯವರೆಗೂ ಪ್ರಾಧಿಕಾರ ಸ್ಪಷ್ಟನೆ ಕೊಟ್ಟಿಲ್ಲ. ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ದೇಶದಾದ್ಯಂತ ಮಾರಾಟವಾಗುತ್ತಿರುವ ಬಿಸ್ಲೆರಿ ಅಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ಉತ್ಪನ್ನಗಳಿಗೂ ನಿಷೇಧ ಅಥವಾ ಮಾರುಕಟ್ಟೆಯಿಂದ ಹಿಂಪಡೆಯಲು ಆದೇಶ ಹೊರಡಿಸಲಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿಲ್ಲ. ಆದರೆ ಸದ್ಯ ಗುಣಮಟ್ಟದ ವಿಚಾರ ಮಾತ್ರ ಆತಂಕಕ್ಕೆ ಕಾರಣವಾಗಿದೆ. ಕಂಪನಿ ಈ ಬಗ್ಗೆ ಸ್ಪಷ್ಟನೆ ಕೊಟ್ಟರೂ ಸಹ ಕಾನೂನು ಕ್ರಮದತ್ತ ಸದ್ಯ ಎಲ್ಲರೂ ಚಿತ್ತಹರಿಸಿದ್ದಾರೆ(ಏಜೆನ್ಸೀಸ್).