ಶುದ್ಧ ನೀರೆಂದು ಕುಡಿಯುವ 'ಬಿಸ್ಲೆರಿ'ಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ; ಕಾನೂನು ಕ್ರಮಕ್ಕೆ FSSAI ಗ್ರೀನ್ ಸಿಗ್ನಲ್, ಹಲವು ಕಂಪನಿಗಳಿಗೆ ಶಾಕ್..Bisleri

ಶುದ್ಧ ನೀರೆಂದು ಕುಡಿಯುವ 'ಬಿಸ್ಲೆರಿ'ಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ; ಕಾನೂನು ಕ್ರಮಕ್ಕೆ FSSAI ಗ್ರೀನ್ ಸಿಗ್ನಲ್, ಹಲವು ಕಂಪನಿಗಳಿಗೆ ಶಾಕ್..Bisleri
Published on: 
  • ಬಿಸ್ಲೆರಿ ನೀರಿನಲ್ಲಿ ಕ್ಯಾನ್ಸರ್​ಕಾರಕ ಅಂಶ ಪತ್ತೆ, ಕಾನೂನು ಕ್ರಮಕ್ಕೆ FSAI ಅನುಮತಿ

  • ಹಲವು ಆಹಾರ ಕಂಪನಿಗಳ ಮೇಲೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಚಾಟಿ

  • ಬ್ರೋಮೇಟ್ ಮತ್ತು ರೆಫರಲ್ ಪ್ರಯೋಗಾಲಯದ ಪರೀಕ್ಷೆಯಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಪತ್ತೆಯಾಗಿವೆ

ನವ ದೆಹಲಿ: ಶುದ್ಧ ನೀರು ಎಂದು ಕುಡಿಯುವ ಬಿಸ್ಲರಿಯಲ್ಲಿ ಕ್ಯಾನ್ಸರ್​​ಕಾರಕ ಅಂಶ ಪತ್ತೆಯಾಗಿದೆ. ಹೌದು, 'ಬಿಸ್ಲೆರಿ ಇಂಟರ್‌ನ್ಯಾಷನಲ್' ಸಂಸ್ಥೆಯ ಕುಡಿಯುವ ನೀರಿನ ಮಾದರಿಯು ಕುಡಿಯಲು ಅಸುರಕ್ಷಿತ ಎಂದು ಕಂಡುಬಂದಿದೆ. ಈ ಹಿನ್ನೆಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದೆ. ಆದರೆ, ಬಿಸ್ಲೆರಿಯ ಯಾವ ನಿರ್ದಿಷ್ಟ ಮಾದರಿಯ ಕುಡಿಯುವ ನೀರು ಅಸುರಕ್ಷಿತವಾಗಿದೆ ಎಂಬುದನ್ನು ಪ್ರಾಧಿಕಾರವು ಇದುವರೆಗೂ ಬಹಿರಂಗಪಡಿಸಿಲ್ಲ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ (FSS Act, 2006) ಅಡಿಯಲ್ಲಿ, ಅಸುರಕ್ಷಿತ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ಉಲ್ಲಂಘನೆಗಳಿಗಾಗಿ ಕಂಪನಿಯ ವಿರುದ್ಧ ಕ್ರಮಕ್ಕೆ ಮುಂದಾಗಿರುವುದಾಗಿ ಎಫ್‌ಎಸ್‌ಎಸ್‌ಎಐ ಎಕ್ಸ್​​ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

WEB

ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆ

ಬಿಸ್ಲೆರಿ ಇಂಟರ್‌ನ್ಯಾಶನಲ್ ಆವರಣದಿಂದ 'ಪ್ಯಾಕೇಜ್ಡ್ ಕುಡಿಯುವ ನೀರು (ಖನಿಜಯುಕ್ತ ನೀರನ್ನು ಹೊರತುಪಡಿಸಿ)' ಮಾದರಿಯನ್ನು ನಿಯಂತ್ರಕ ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಈ ಮಾದರಿಯು ನಿಗದಿತ ಬ್ರೋಮೇಟ್ ಮಿತಿಯನ್ನು ಪಾಲಿಸಲು ವಿಫಲವಾದ ಕಾರಣ ಅದನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಹೆಚ್ಚಿನ ಪರೀಕ್ಷೆಗಾಗಿ ಮಾದರಿಯನ್ನು ರೆಫರಲ್ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ಪರೀಕ್ಷೆಯಲ್ಲೂ ನೀರಿನಲ್ಲಿ 'ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು' ಇರುವುದು ಪತ್ತೆಯಾಗಿದ್ದು, ಎರಡನೇ ಪ್ರಯೋಗಾಲಯವೂ ನೀರು ಅಸುರಕ್ಷಿತ ಎಂದು ವರದಿ ನೀಡಿದೆ.

ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಎಆರ್​ಸಿ) ಮತ್ತು ಯುಎಸ್ ಇಪಿಎ (ಯುಸ್​ ಇಪಿಎ) ಸೇರಿದಂತೆ ಜಾಗತಿಕ ಆರೋಗ್ಯ ಮತ್ತು ಪರಿಸರ ಸಂಸ್ಥೆಗಳು ಬ್ರೋಮೇಟ್ ಹಾಗೂ ಪಿಎಹೆಚ್ (PAHs) ಎರಡನ್ನೂ ಕ್ಯಾನ್ಸರ್ ಕಾರಕ ಅಂಶಗಳೆಂದು ವರ್ಗೀಕರಿಸಿವೆ. ಪ್ರಯೋಗಾಲಯದ ವರದಿಗಳು ಕಾಯ್ದೆಯ ಉಲ್ಲಂಘನೆಯನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಬಿಸ್ಲೆರಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

Also Read
ನೀರಿನ ಬಾಟಲಿಯ ಕ್ಯಾಪ್​ ಬಿಳಿ, ಹಸಿರು, ಕಪ್ಪು ಇರೋದ್ಯಾಕೆ ಗೊತ್ತಾ?; ಯಾವ ಬಣ್ಣ ಏನನ್ನು ಸೂಚಿಸುತ್ತದೆ?..Colours Of Water Bottle Caps
ಶುದ್ಧ ನೀರೆಂದು ಕುಡಿಯುವ 'ಬಿಸ್ಲೆರಿ'ಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ; ಕಾನೂನು ಕ್ರಮಕ್ಕೆ FSSAI ಗ್ರೀನ್ ಸಿಗ್ನಲ್, ಹಲವು ಕಂಪನಿಗಳಿಗೆ ಶಾಕ್..Bisleri

ಇತರ ಕಂಪನಿ ವಿರುದ್ಧ ಕ್ರಮಕ್ಕೆ ಮುಂದು

ಬಿಸ್ಲೆರಿ ಮಾತ್ರವಲ್ಲದೆ, ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಪ್ರಾಧಿಕಾರವು ಇತರ ಹಲವು ಕಂಪನಿಗಳ ವಿರುದ್ಧವೂ ಕಾನೂನು ಕ್ರಮಕ್ಕೆ ಅನುಮತಿ ನೀಡಿದೆ. ವಸಂತ್ ಮಸಾಲಾ ಪ್ರೈವೇಟ್ ಲಿಮಿಟೆಡ್, ಟಿಟ್-ಬಿಟ್ ಫುಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮಿಮಾಂಸ ಇಂಡಸ್ಟ್ರೀಸ್ ಮತ್ತು ಆಶಾ ಕನ್ಫೆಕ್ಷನರಿ ವಿರುದ್ಧ ಕ್ರಮಕ್ಕೆ ಅನುಮತಿ ನೀಡಲಾಗಿದೆ.

ಲೈಸೆನ್ಸ್ ರದ್ದು

ನಿಯಮಗಳನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಉರ್ಮಿ ಲೈಫ್‌ಸೈನ್ಸಸ್ ಎಲ್‌ಎಲ್‌ಪಿ ಮತ್ತು ಗೌರ್ ಆಯುರ್ವೇದಿಕ್ ಸ್ಟೋರ್‌ನ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.

ಮತ್ತೊಂದು ಪ್ರಮುಖ ಕ್ರಮದಲ್ಲಿ, ಆಶಾ ಕನ್ಫೆಕ್ಷನರಿ ಸಂಸ್ಥೆಯು ತನ್ನ ಪೂರ್ವ-ಪ್ಯಾಕ್ ಮಾಡಿದ ಚಾಕೊಲೇಟ್ ತುಂಬಿದ ಕುಕೀಸ್‌ಗಳನ್ನು ಮಾರುಕಟ್ಟೆಯಿಂದ ತಕ್ಷಣವೇ ಹಿಂಪಡೆಯುವಂತೆ ಎಫ್‌ಎಸ್‌ಎಸ್‌ಎಐ ಆದೇಶಿಸಿದೆ. ಪ್ರಯೋಗಾಲಯದ ಪರೀಕ್ಷೆಯಲ್ಲಿ ಈ ಉತ್ಪನ್ನದ ಲೇಬಲಿಂಗ್, ಸಂಯೋಜನೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಲೋಪಗಳು ಕಂಡುಬಂದಿವೆ.

ಲೇಬಲ್‌ನಲ್ಲಿ ಉಲ್ಲೇಖಿಸದಿದ್ದರೂ ಕುಕೀಸ್‌ನಲ್ಲಿ 'ಕಾರ್ಮೊಸಿನ್' ಎಂಬ ಬಣ್ಣದ ಅಂಶ ಪತ್ತೆಯಾಗಿದೆ. 'ಟಾರ್ಟ್ರಾಜಿನ್'ಅಂಶವು ನಿಗದಿತ ಗರಿಷ್ಠ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ಈ ವರ್ಗದ ಆಹಾರದಲ್ಲಿ ಬಳಸಲು ಅನುಮತಿಯಿಲ್ಲದ 'ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್' ಎಂಬ ಬಣ್ಣದ ಏಜೆಂಟ್ ಕೂಡ ಮಾದರಿಯಲ್ಲಿ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಸದರಿ ಉತ್ಪನ್ನವನ್ನು ತಪ್ಪು ಬ್ರ್ಯಾಂಡಿಂಗ್, ಕಳಪೆ ಗುಣಮಟ್ಟದ (Sub-standard) ಮತ್ತು ಅಸುರಕ್ಷಿತ ಎಂದು ವರ್ಗೀಕರಿಸಲಾಗಿದ್ದು, ಬಾಧಿತ ಸಂಪೂರ್ಣ ಬ್ಯಾಚ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಕಂಪನಿಗೆ ನಿರ್ದೇಶಿಸಲಾಗಿದೆ.

ಕಠಿಣ ರೂಲ್ಸ್

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಎಫ್‌ಎಸ್‌ಎಸ್‌ಎಐ ಆಹಾರ ವ್ಯವಹಾರ ನಿರ್ವಾಹಕರು (FBOs) ಮತ್ತು ಇ-ಕಾಮರ್ಸ್ ಕಂಪನಿಗಳ ವಿರುದ್ಧ ತನ್ನ ತಪಾಸಣೆ ಹಾಗೂ ಜಾರಿ ಕ್ರಮಗಳನ್ನು ತೀವ್ರಗೊಳಿಸಿದೆ. ಇದರೊಂದಿಗೆ ಎನರ್ಜಿ ಡ್ರಿಂಕ್ಸ್ ಮತ್ತು ಮದ್ಯ ತಯಾರಕರ ಮೇಲೂ ಪ್ರಾಧಿಕಾರವು ತನ್ನ ಕಠಿಣ ನಿಗಾ ಹಾಗೂ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ, (ಏಜೆನ್ಸೀಸ್).