Bathymyrus perplexus: ಬಂಗಾಳ ಕೊಲ್ಲಿಯಲ್ಲಿ ಹೊಸ ಮೀನು ಪ್ರಭೇದವನ್ನು ಗೋಪಾಲಪುರದ ಭಾರತೀಯ ಪ್ರಾಣಿಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ (ZSI) ವಿಜ್ಞಾನಿಗಳು ಗುರುತಿಸಿದ್ದಾರೆ. ‘ಬ್ಯಾಥಿಮೈರಸ್ ಪರ್ಪ್ಲೆಕ್ಸಸ್’ ಎಂದು ಹೆಸರಿಸಲಾಗಿರುವ ಈ ಮೀನು ಪ್ರಭೇದವು 2021ರಲ್ಲಿ ಪಾರಾದೀಪ್ ಕರಾವಳಿ ಬಳಿ ಮೊದಲ ಬಾರಿಗೆ ಪತ್ತೆಯಾಗಿತ್ತು.
ಮೀನು ಹೊಸ ಪ್ರಭೇದವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಜ್ಞಾನಿಗಳು ಹಲವು ಪರೀಕ್ಷೆ ಹಾಗೂ ಡಿಎನ್‌ಎ ವಿಶ್ಲೇಷಣೆ ನಡೆಸಿದ್ದಾರೆ. ಪಶ್ಚಿಮ ಬಂಗಾಳ, ಗೋದಾವರಿ ಹಾಗೂ ಕಾಕಿನಾಡ ಭಾಗಗಳಿಂದ ಸಂಗ್ರಹಿಸಿದ ಒಟ್ಟು 32 ಮೀನು ಮಾದರಿಗಳನ್ನು ಗೋಪಾಲಪುರದ ಝಡ್‌ಎಸ್‌ಐ ಘಟಕದಲ್ಲಿ ಪರಿಶೀಲಿಸಲಾಗಿದೆ.
ಮೀನಿನ ದೇಹರಚನೆ ಸೇರಿದಂತೆ ವಿವಿಧ ಮಾಹಿತಿಯನ್ನು ಅಮೆರಿಕದ ‘ಬುಲೆಟಿನ್ ಆಫ್ ಮೆರೈನ್ ಸೈನ್ಸ್’ ಜರ್ನಲ್‌ಗೆ ಕಳುಹಿಸಲಾಗಿತ್ತು. ಅಧ್ಯಯನದ ಬಳಿಕ ಇದು ಹೊಸ ಮೀನು ಪ್ರಭೇದ ಎಂಬುದು ದೃಢಪಟ್ಟಿದ್ದು, ಸಂಶೋಧನಾ ವರದಿ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಗೋಪಾಲಪುರ ಝಡ್‌ಎಸ್‌ಐಯ ಡಾ. ಅನಿಲ್ ಮೊಹಾಪಾತ್ರ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ.
ಹೊಸ ಮೀನು ಪ್ರಭೇದದ ಕುರಿತು ಮಾಹಿತಿ ನೀಡಿದ ಝಡ್‌ಎಸ್‌ಐ-ಗೋಪಾಲಪುರದ ವಿಜ್ಞಾನಿ ಡಾ. ಅನಿಲ್ ಮೊಹಾಪಾತ್ರ, ಈ ಮೀನು ಸಾಮಾನ್ಯವಾಗಿ ಸಮುದ್ರದ 50ರಿಂದ 100 ಮೀಟರ್ ಆಳದಲ್ಲಿ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.
ಈ ಮೀನಿನ ದೇಹ ಉದ್ದವಾಗಿದ್ದು, ಸಿಲಿಂಡರ್ ಆಕಾರದಲ್ಲಿದೆ. ತಲೆ ಮತ್ತು ಮೂತಿಯ ರಚನೆ ವಿಶಿಷ್ಟವಾಗಿದ್ದು, ದೇಹದ ಬಣ್ಣ ಗುಲಾಬಿಯಿಂದ ತಿಳಿ ಗುಲಾಬಿ ಬಣ್ಣದವರೆಗೆ ಕಾಣಿಸುತ್ತದೆ. ತಲೆಯ ಮೇಲ್ಭಾಗದಲ್ಲಿ ದಟ್ಟ ಕಪ್ಪು ಚುಕ್ಕೆಗಳಿದ್ದು, ಕಣ್ಣಿನಿಂದ ಮೂತಿಯವರೆಗೆ ಕಪ್ಪು ಗುರುತು ಕಂಡುಬರುತ್ತದೆ. ಬೆನ್ನಿನ ಹಾಗೂ ಗುದದ ರೆಕ್ಕೆಗಳ ಅಂಚಿನಲ್ಲೂ ತೆಳುವಾದ ಕಪ್ಪು ಪಟ್ಟಿಯಿದೆ. ಈ ವಿಶಿಷ್ಟ ಲಕ್ಷಣಗಳಿಂದಾಗಿ ಈ ಮೀನು ಇತರ ಸಮಾನ ಪ್ರಭೇದಗಳಿಂದ ಭಿನ್ನವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಮೀನಿನ ಮೇಲಿನ ಹಾಗೂ ಕೆಳಗಿನ ದವಡೆಗಳಲ್ಲಿ ಹಲ್ಲುಗಳಿದ್ದು, ತಲೆಯ ಭಾಗದಲ್ಲೂ ಹಲ್ಲುಗಳು ಕಂಡುಬರುತ್ತವೆ. ಆದರೆ, ‘ಬ್ಯಾಥಿಮೈರಸ್ ಪರ್ಪ್ಲೆಕ್ಸಸ್’ ವಿಷಕಾರಿಯಲ್ಲದ ಮೀನು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಇದರ ಮಾದರಿಯನ್ನು ಪ್ರಯೋಗಾಲಯದಲ್ಲಿ ಸಂರಕ್ಷಿಸಿ, ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ. (ಏಜೆನ್ಸೀಸ್)