ಶಬರಿಮಲೆ ಅಯ್ಯಪ್ಪ, ಮಲಿಕಪ್ಪುರಂ ದೇಗುಲಗಳಿಗೆ ಹೊಸ ಮುಖ್ಯ ಅರ್ಚಕರ ನೇಮಕ; ಯಾತ್ರೆಗೆ ಭರದ ಸಿದ್ಧತೆ | Sabarimala Chief Priest

ಮಂಡಲ-ಮಕರವಿಳಕ್ಕು ಯಾತ್ರೆ ಸಮೀಪಿಸುತ್ತಿರುವ ಬೆನ್ನಲ್ಲೇ, ಶಬರಿಮಲೆ ಅಯ್ಯಪ್ಪ ದೇವಸ್ಥಾನ ಮತ್ತು ಮಲಿಕಪ್ಪುರಂ ದೇಗುಲಗಳಿಗೆ ನೂತನ ಮುಖ್ಯ ಅರ್ಚಕರನ್ನು ನೇಮಕ ಮಾಡಲಾಗಿದೆ.
Sabarimala Ayyappa Temple
ಶಬರಿಮಲೆ ಅಯ್ಯಪ್ಪ ದೇವಸ್ಥಾನ ಮತ್ತು ಮಲಿಕಪ್ಪುರಂ ದೇವಸ್ಥಾನಕ್ಕೆ ನೂತನ ಮುಖ್ಯ ಅರ್ಚಕರ ಆಯ್ಕೆ
Published on: 

Sabarimala Ayyappa Temple: ಶಬರಿಮಲೆ ಅಯ್ಯಪ್ಪ ಮತ್ತು ಮಲಿಕಪ್ಪುರಂ ದೇವಸ್ಥಾನಗಳಿಗೆ ಭಾನುವಾರ ನೂತನ ಮುಖ್ಯ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ಮಂಡಲ-ಮಕರವಿಳಕ್ಕು ಯಾತ್ರೆಯ ಸಿದ್ಧತೆಗಳ ನಡುವೆಯೇ ಈ ನೇಮಕ ಪ್ರಕ್ರಿಯೆ ನಡೆದಿದೆ.

ತಿರುವನಂತಪುರಂನ ಪುಳಿಮೂಡು ಮೂಲದ ಅರೀಕ್ಕರ ಸುಬ್ರಹ್ಮಣ್ಯನ್ ಶಂಕರನ್ ನಂಬೂದಿರಿ ಅವರು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಕೋಯಿಕ್ಕೋಡ್ ಜಿಲ್ಲೆಯ ವಡಕರದ ಮಣಿಯೂರು ಮೂಲದ ಇ. ದಾಮೋದರನ್ ನಂಬೂದಿರಿ ಅವರು ಮಲಿಕಪ್ಪುರಂ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕಗೊಂಡಿದ್ದಾರೆ.

ಶಬರಿಮಲೆ ಮುಖ್ಯ ಅರ್ಚಕರ ಆಯ್ಕೆ

ಶಂಕರನ್ ನಂಬೂದಿರಿ ಅವರು ಸದ್ಯ ಪಳವಂಗಡಿ ಗಣಪತಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಮೂರು ಬಾರಿ ಶಬರಿಮಲೆ ಮುಖ್ಯ ಅರ್ಚಕ ಹುದ್ದೆಯ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರು, ಈ ಬಾರಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 21 ವರ್ಷಗಳಿಂದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಮಲಿಕಪ್ಪುರಂ ದೇವಸ್ಥಾನಕ್ಕೂ ಅರ್ಚಕರ ನೇಮಕ

ದಾಮೋದರನ್ ನಂಬೂದಿರಿ ಅವರು ಸದ್ಯ ಪಯ್ಯೋಳಿಯ ಕೀಝೂರು ಶಿವ ದೇವಸ್ಥಾನದ ಮುಖ್ಯ ಅರ್ಚಕರಾಗಿದ್ದಾರೆ. ಮಲಿಕಪ್ಪುರಂ ದೇವಸ್ಥಾನದ ಹುದ್ದೆಗೆ ಐದು ಬಾರಿ ಅರ್ಜಿ ಸಲ್ಲಿಸಿದ್ದ ಅವರು, ಈ ಬಾರಿ ಆಯ್ಕೆಯಾಗಿರುವುದಕ್ಕೆ ಗುರುಗಳ ಆಶೀರ್ವಾದವೇ ಕಾರಣ ಎಂದಿದ್ದಾರೆ. ಶಬರಿಮಲೆ ಹುದ್ದೆಗೆ ಏಳು ಮಂದಿ ಹಾಗೂ ಮಲಿಕಪ್ಪುರಂ ಹುದ್ದೆಗೆ ಐವರು ಅಂತಿಮ ಪಟ್ಟಿಯಲ್ಲಿದ್ದರು. ಮಲಯಾಳಂ ತಿಂಗಳ ವೃಶ್ಚಿಕಂನ ಮೊದಲ ದಿನ ನೂತನ ಅರ್ಚಕರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಮಂಡಲ-ಮಕರವಿಳಕ್ಕು ಯಾತ್ರೆಗೆ ಸಿದ್ಧತೆ

ಮಂಡಲ-ಮಕರವಿಳಕ್ಕು ಯಾತ್ರೆ ಹಿನ್ನೆಲೆಯಲ್ಲಿ ಶಬರಿಮಲೆ, ಪಂಬಾ ಮತ್ತು ನಿಲಕ್ಕಲ್‌ನಲ್ಲಿ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ನಿಲಕ್ಕಲ್‌ನ 21 ಪಾರ್ಕಿಂಗ್ ಸ್ಥಳಗಳನ್ನು ಸ್ವಚ್ಛಗೊಳಿಸಿ ಸಿದ್ಧಪಡಿಸುವಂತೆ ದೇವಸ್ವಂ ಮಂಡಳಿಗೆ ಸೂಚಿಸಲಾಗಿದೆ. ನಿಲಕ್ಕಲ್‌ನ ಹೊಸ ಪೊಲೀಸ್ ಬ್ಯಾರಕ್‌ನಲ್ಲಿ 600 ಸಿಬ್ಬಂದಿಗೆ ವಸತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Salman Khan: ಸಲೀಂ ಖಾನ್ ಜತೆ 5 ವರ್ಷ ಮಾತು ಬಿಟ್ಟಿದ್ದ ಸಲ್ಮಾನ್ ತಾತ! ಮದುವೆಗೆ ವಿರೋಧಿಸಿದ್ದೇಕೆ?

ಇನ್ನು, ಪಂಬಾ–ಚಾಲಕ್ಕಯಂ ರಸ್ತೆಯ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಉಳಿದ ರಸ್ತೆ ದುರಸ್ತಿ ಕಾರ್ಯಗಳನ್ನೂ ಎರಡು ವಾರಗಳಲ್ಲಿ ಮುಗಿಸುವಂತೆ ನಿರ್ದೇಶನ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net