

Gujarat Navaratri : ನವರಾತ್ರಿ ಬಂತೆಂದರೆ ಸಾಕು, ಬಣ್ಣಬಣ್ಣದ ಉಡುಗೆ, ಆಕರ್ಷಕ ಮೇಕಪ್, ಫ್ಯಾಷನ್ ಹಾಗೂ ಗರ್ಬಾ ನೃತ್ಯದ ಸಂಭ್ರಮ ಎಲ್ಲೆಡೆ ಮನೆಮಾಡುತ್ತದೆ. ಒಂಬತ್ತು ದಿನಗಳ ಕಾಲ ರಾತ್ರಿ ಹೊತ್ತು ಗರ್ಬಾ ಆಡಿ ಸಂಭ್ರಮಿಸಲು ಯುವಜನರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಈ ಬಾರಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಬ್ಬದ ತಯಾರಿ ಹೊಸ ರೂಪ ಪಡೆದುಕೊಂಡಿದೆ. ಮುಖದ ಕಾಂತಿ ಹೆಚ್ಚಿಸಲು, ದಣಿವು ಕಡಿಮೆ ಮಾಡಿಕೊಳ್ಳಲು ಹಾಗೂ ದೇಹದಲ್ಲಿ ಚೈತನ್ಯ ಉಳಿಸಿಕೊಳ್ಳಲು ಕೆಲವರು ಸಾವಿರಾರು ರೂಪಾಯಿ ಖರ್ಚು ಮಾಡಿ ಐವಿ ಡ್ರಿಪ್ ಥೆರಪಿ ಮೊರೆ ಹೋಗುತ್ತಿದ್ದಾರೆ. ವಿಶೇಷವೆಂದರೆ, ಈ ಚಿಕಿತ್ಸೆಯ ಕೆಲವು ಪ್ಯಾಕೇಜ್‌ಗಳ ಬೆಲೆ ಬರೋಬ್ಬರಿ 15,000 ರೂಪಾಯಿ.
ಐವಿ ಡ್ರಿಪ್ ಎಂದರೆ ರಕ್ತನಾಳದ ಮೂಲಕ ದೇಹಕ್ಕೆ ದ್ರವ ಅಥವಾ ಪೋಷಕಾಂಶಗಳನ್ನು ನೀಡುವ ವೈದ್ಯಕೀಯ ವಿಧಾನ. ಈ ಚಿಕಿತ್ಸೆಯಲ್ಲಿ ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್, ಜಿಂಕ್ ಹಾಗೂ ಗ್ಲುಟಾಥಿಯೋನ್‌ನಂತಹ ಅಂಶಗಳನ್ನು ಬಳಸುವ ಮಿಶ್ರಣಗಳು ಕೆಲವು ಕ್ಲಿನಿಕ್‌ಗಳಲ್ಲಿ ಲಭ್ಯವಿವೆ. ಚರ್ಮದ ಕಾಂತಿ ಹೆಚ್ಚುತ್ತದೆ, ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ ಎಂಬ ನಿರೀಕ್ಷೆಯಿಂದ ಕೆಲವರು ಈ ಚಿಕಿತ್ಸೆಯತ್ತ ಆಕರ್ಷಿತರಾಗುತ್ತಿದ್ದಾರೆ. ವಿಶೇಷವಾಗಿ ನವರಾತ್ರಿಯ ಒಂಬತ್ತು ದಿನಗಳ ಕಾಲ ನಿರಂತರವಾಗಿ ಗರ್ಬಾ ಆಡುವವರು ದಣಿವನ್ನು ನಿಭಾಯಿಸಲು ಇಂತಹ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಅಹಮದಾಬಾದ್‌ನ ಕೆಲವು ಸೌಂದರ್ಯ ಮತ್ತು ವೈದ್ಯಕೀಯ ಕ್ಲಿನಿಕ್‌ಗಳಲ್ಲಿ ಒಂದು ಐವಿ ಡ್ರಿಪ್ ಸೆಷನ್‌ಗೆ ಸುಮಾರು 4,000ದಿಂದ 10,000 ರೂ.ವರೆಗೆ ವೆಚ್ಚವಾಗುತ್ತದೆ. ಇನ್ನು ಹಲವು ಸೆಷನ್‌ಗಳನ್ನು ಒಳಗೊಂಡ ಹಬ್ಬದ ವಿಶೇಷ ಪ್ಯಾಕೇಜ್‌ಗಳ ಬೆಲೆ 15,000 ರೂ.ವರೆಗೆ ತಲುಪಬಹುದು. ಕ್ಲಿನಿಕ್, ಬಳಸುವ ಮಿಶ್ರಣ ಹಾಗೂ ಚಿಕಿತ್ಸೆಯ ಪ್ರಕಾರ ವೆಚ್ಚ ಬದಲಾಗುತ್ತದೆ. ಕೆಲವರು ಇದನ್ನು ನಿಯಮಿತ ಚಿಕಿತ್ಸೆಯಾಗಿ ನೋಡದೆ, ಹಬ್ಬದ ಸಂದರ್ಭದಲ್ಲಿ ಒಮ್ಮೆ ಮಾಡಿಸಿಕೊಳ್ಳುವ ಸೌಂದರ್ಯ ಮತ್ತು ಚೈತನ್ಯದ ಚಿಕಿತ್ಸೆಯಾಗಿ ಪರಿಗಣಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಟ್ರೆಂಡ್ ಯುವಜನರೊಂದಿಗೆ ಹೆಚ್ಚು ಗುರುತಿಸಿಕೊಂಡಿದ್ದರೂ, ಅಹಮದಾಬಾದ್‌ನಲ್ಲಿ 30, 40ರ ವಯೋಮಾನದ ಉದ್ಯೋಗಿಗಳೂ ಇಂತಹ ಚಿಕಿತ್ಸೆಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಹಗಲಿನಲ್ಲಿ ಕಚೇರಿ ಕೆಲಸ, ರಾತ್ರಿ ಗರ್ಬಾ ಅಭ್ಯಾಸ ಅಥವಾ ನೃತ್ಯ ಇವೆಲ್ಲದರ ನಡುವೆ ದಣಿವು ಮತ್ತು ಚರ್ಮದ ಕಾಂತಿ ಕಡಿಮೆಯಾಗುವ ಬಗ್ಗೆ ಕೆಲವರು ಚಿಂತಿತರಾಗಿದ್ದಾರೆ. ಹೀಗಾಗಿ ಕಡಿಮೆ ಸಮಯದಲ್ಲಿ ಫಲಿತಾಂಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಐವಿ ಡ್ರಿಪ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಡ್ರಿಪ್‌ಗಳು ಎಲ್ಲರಿಗೂ ಅಗತ್ಯವಿಲ್ಲ. ದೇಹಕ್ಕೆ ಪೋಷಕಾಂಶಗಳ ಕೊರತೆ ಇದೆಯೇ ಎಂಬುದನ್ನು ತಿಳಿದುಕೊಳ್ಳದೆ ಕೇವಲ ಸೌಂದರ್ಯಕ್ಕಾಗಿ ಚಿಕಿತ್ಸೆ ಪಡೆಯುವುದು ಸೂಕ್ತವಲ್ಲ.
ಐವಿ ಡ್ರಿಪ್ ಚಿಕಿತ್ಸೆಯ ಜನಪ್ರಿಯತೆ ಹೆಚ್ಚುತ್ತಿರುವ ಬೆನ್ನಲ್ಲೇ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಇದು ಸಾಮಾನ್ಯ ಬ್ಯೂಟಿ ಟ್ರೀಟ್‌ಮೆಂಟ್ ಅಲ್ಲ, ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ನಡೆಯಬೇಕಾದ ವಿಧಾನವಾಗಿದೆ. ಸೂಕ್ತ ಪರೀಕ್ಷೆ ಮತ್ತು ಆರೋಗ್ಯದ ಸ್ಥಿತಿಯ ಮೌಲ್ಯಮಾಪನವಿಲ್ಲದೆ ಇಂತಹ ಡ್ರಿಪ್‌ಗಳನ್ನು ಪಡೆಯುವುದರಿಂದ ಅಲರ್ಜಿ, ದೇಹದಲ್ಲಿ ಹೆಚ್ಚುವರಿ ದ್ರವ ಸಂಗ್ರಹವಾಗುವ ಸಮಸ್ಯೆ ಹಾಗೂ ಬಳಸುವ ಪದಾರ್ಥಗಳನ್ನು ಅವಲಂಬಿಸಿ ಇತರ ತೊಂದರೆಗಳು ಉಂಟಾಗಬಹುದು. ವಿಶೇಷವಾಗಿ ಈಗಾಗಲೇ ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆಯಿಲ್ಲದೆ ಇಂತಹ ಚಿಕಿತ್ಸೆಗೆ ಮುಂದಾಗಬಾರದು.
ನವರಾತ್ರಿಯಲ್ಲಿ ಚೈತನ್ಯದಿಂದ ಇರಲು ದುಬಾರಿ ಐವಿ ಡ್ರಿಪ್‌ಗಳೇ ಬೇಕೆಂದಿಲ್ಲ. ಸಾಕಷ್ಟು ನಿದ್ರೆ, ಸಮತೋಲಿತ ಆಹಾರ, ಅಗತ್ಯ ಪ್ರಮಾಣದ ನೀರು ಮತ್ತು ನೃತ್ಯದ ನಡುವೆ ವಿಶ್ರಾಂತಿ ಪಡೆಯುವುದು ಮುಖ್ಯ. ನಿರಂತರ ದಣಿವು ಅಥವಾ ದುರ್ಬಲತೆ ಕಂಡುಬಂದರೆ ಅದರ ಕಾರಣ ತಿಳಿಯಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಸೌಂದರ್ಯ ಮತ್ತು ಶಕ್ತಿಗಾಗಿ 15,000 ರೂ. ಖರ್ಚು ಮಾಡುವ ಮೊದಲು, ಆ ಚಿಕಿತ್ಸೆ ನಿಜವಾಗಿಯೂ ಅಗತ್ಯವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಹಬ್ಬದ ಸಂಭ್ರಮ ಆರೋಗ್ಯದೊಂದಿಗೆ ಇರಲಿ, ಸಾಮಾಜಿಕ ಮಾಧ್ಯಮಗಳ ಟ್ರೆಂಡ್ ನೋಡಿ ವೈದ್ಯಕೀಯ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳಬೇಡಿ.