ಕಾಯಿನ್​, ನೋಟುಗಳ ಮುದ್ರಣ ಆಗೋದೆಲ್ಲಿ? ಇದರಲ್ಲಿ ಆರ್​ಬಿಐ ಮತ್ತು ಕೇಂದ್ರದ ಪಾತ್ರವೇನು? ಇಲ್ಲಿದೆ ರೋಚಕ ಸಂಗತಿ | Coin Note Making

ನಮ್ಮ ಆರ್ಥಿಕತೆಯನ್ನು ನಡೆಸುವ ಕರೆನ್ಸಿಯ ಉತ್ಪಾದನೆಯ ಹಿಂದೆ ಎಷ್ಟು ದೊಡ್ಡ ವ್ಯವಸ್ಥೆ ಇದೆ? ಚಿಲ್ಲರೆಗಳ ತಯಾರಿಕೆಯ ಪ್ರಕ್ರಿಯೆ ಹೇಗಿರುತ್ತದೆ ಮತ್ತು ರೂಪಾಯಿಯ ಚಿಹ್ನೆ ಹೇಗೆ ಬಂತು? ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.
Coin Note Making
ಕಾಯಿನ್​, ನೋಟುಗಳ ಮುದ್ರಣ ಆಗೋದು ಎಲ್ಲಿ? ಇದರಲ್ಲಿ ಆರ್​ಬಿಐ ಮತ್ತು ಕೇಂದ್ರದ ಪಾತ್ರವೇನು? ಇಲ್ಲಿದೆ ರೋಚಕ ಸಂಗತಿ | Coin Note Making
Published on: 

Coin Note Making: ಸಾಮಾನ್ಯ ವ್ಯಕ್ತಿಯು ತನ್ನ ದಿನಚರಿಯ ಹಣವನ್ನು ಯಾವುದಾದರೂ ಒಂದು ರೂಪದಲ್ಲಿ ಖರ್ಚು ಮಾಡುತ್ತಲೇ ಇರುತ್ತಾನೆ. ಅದು ಹಾಲು, ತರಕಾರಿ ಕೊಳ್ಳುವುದರಿಂದ ಹಿಡಿದು ಟ್ಯಾಕ್ಸಿವರೆಗೆ ನೋಟು, ನಾಣ್ಯಗಳ ಚಲಾವಣೆಯನ್ನು ಮಾಡುತ್ತಾರೆ. ಅದರಲ್ಲೂ, ಈಗ ಡಿಜಿಟಲ್​ ಯುಗ ಅಂದಮೇಲೆ ಯುಪಿಐ ಪೇಮೆಂಟ್ಸ್​ ಆ್ಯಪ್​ ಬಳಕೆಯಿಂದ ಚಿಲ್ಲರೆಗಳಿಗೆ ಅವಕಾಶವೇ ಇಲ್ಲ ಎನ್ನುವಂತಾಗಿದೆ. ಹೀಗಿದ್ದರೂ, ಕೆಲವರು ಇಂದಿಗೂ ಚಿಲ್ಲರೆಗಳನ್ನು ಉಪಯೋಗಿಸುತ್ತಿದ್ದಾರೆ.

ನಮ್ಮ ಕೈಗೆ ಬರುವ ಈ ನೋಟುಗಳು ಮತ್ತು ಕಾಯಿನ್​ಗಳನ್ನು ಎಲ್ಲಿ ತಯಾರಿಸಲಾಗುತ್ತದೆ? ಅದು ಮಾರುಕಟ್ಟೆಗೆ ಹೇಗೆ ಬರುತ್ತದೆ ಎಂಬುದರ ಬಗ್ಗೆ ಒಂದು ಸಣ್ಣ ಐಡಿಯಾದರೂ ಇದೆಯಾ? ನಮ್ಮ ಆರ್ಥಿಕತೆಯನ್ನು ನಡೆಸುವ ಕರೆನ್ಸಿಯ ಉತ್ಪಾದನೆಯ ಹಿಂದೆ ಎಷ್ಟು ದೊಡ್ಡ ವ್ಯವಸ್ಥೆ ಇದೆ? ಚಿಲ್ಲರೆಗಳ ತಯಾರಿಕೆಯ ಪ್ರಕ್ರಿಯೆ ಹೇಗಿರುತ್ತದೆ ಮತ್ತು ರೂಪಾಯಿಯ ಚಿಹ್ನೆ ಹೇಗೆ ಬಂತು? ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.

ರೂಪಾಯಿ ಚಿಹ್ನೆ ಹೇಗೆ ಬಂತು?

ನಮ್ಮ ದೇಶದ ಅಧಿಕೃತ ಕರೆನ್ಸಿ 'ರೂಪಾಯಿ' (INR) ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮನ್ನಣೆಯನ್ನು ಹೊಂದಿದೆ. ದೇಶದಲ್ಲಿ ಒಂದು ರೂಪಾಯಿಯನ್ನು 100 ಪೈಸೆ ಎಂದು ಲೆಕ್ಕ ಹಾಕಲಾಗುತ್ತದೆ. ಆದಾಗ್ಯೂ, ರೂಪಾಯಿಯ '₹' ಚಿಹ್ನೆಯು ದೇವನಾಗರಿ ಅಕ್ಷರ 'ರ' ಮತ್ತು ಲ್ಯಾಟಿನ್ ಅಕ್ಷರ 'ಆರ್' ಸಂಯೋಜನೆ ಎನ್ನಲಾಗಿದೆ. ಪ್ರಪಂಚದ ಪ್ರಮುಖ ಕರೆನ್ಸಿಗಳಲ್ಲಿ ಈ ಚಿಹ್ನೆಗೆ ಇಂದಿಗೂ ವಿಶೇಷ ಸ್ಥಾನವಿದೆ.

ನಾಣ್ಯಗಳ ತಯಾರಿಕೆ ಎಲ್ಲಿ?

ದೇಶದಲ್ಲಿ ನಾಣ್ಯಗಳನ್ನು ಮುದ್ರಿಸುವ ಜವಾಬ್ದಾರಿಯನ್ನು 'ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್' (SPMCIL) ನಿರ್ವಹಿಸುತ್ತದೆ. ಇವುಗಳನ್ನು ಮುಂಬೈ, ಹೈದರಾಬಾದ್, ಕೋಲ್ಕತ ಮತ್ತು ನೋಯ್ಡಾದಲ್ಲಿರುವ ನಾಲ್ಕು ಟಂಕಸಾಲೆಗಳಲ್ಲಿ (ನಾಣ್ಯ ತಯಾರಿಕಾ ಕೇಂದ್ರಗಳು) ಮುದ್ರಿಸಲಾಗುತ್ತದೆ. 1, 2, 5 ರೂ. ಮತ್ತು 10, 20 ರೂ. ನಾಣ್ಯಗಳನ್ನು ತಕ್ಷಣವೇ ಮಾರುಕಟ್ಟೆಗೆ ಬಿಡುವುದಿಲ್ಲ. ಆರ್‌ಬಿಐ ಕಾಯಿದೆಯ ನಿಬಂಧನೆಗಳ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮಾತ್ರ ಟಂಕಸಾಲೆಯಿಂದ ಸಂಗ್ರಹಿಸಿದ ನಾಣ್ಯಗಳನ್ನು ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ಅಂದರೆ ಹಂತ ಹಂತವಾಗಿ ಬಿಡುಗಡೆಗೊಳಿಸುತ್ತದೆ.

ಕರೆನ್ಸಿ ನೋಟುಗಳ ಮುದ್ರಣ ಎಲ್ಲಿ?

ನೋಟುಗಳ ವಿಷಯಕ್ಕೆ ಬಂದರೆ, ದೇಶಾದ್ಯಂತ ಕೇವಲ ನಾಲ್ಕು ಕರೆನ್ಸಿ ಪ್ರೆಸ್‌ಗಳಲ್ಲಿ ಅವುಗಳನ್ನು ಮುದ್ರಿಸಲಾಗುತ್ತದೆ. ನಾಸಿಕ್ ಮತ್ತು ದೇವಾಸ್‌ನಲ್ಲಿರುವ ಎರಡು ಪ್ರೆಸ್‌ಗಳನ್ನು 'SPMCIL' ನಡೆಸುತ್ತಿದ್ದರೆ, ಮೈಸೂರು ಮತ್ತು ಸಲ್ಬೋನಿಯಲ್ಲಿರುವ ಇತರ ಎರಡು ಪ್ರೆಸ್‌ಗಳನ್ನು ಆರ್​ಬಿಐನ 'ಇಂಡಿಯನ್ ರಿಸರ್ವ್ ಬ್ಯಾಂಕ್ ನೋಟ್ ಪ್ರಿಂಟಿಂಗ್ ಪ್ರೈವೇಟ್ ಲಿಮಿಟೆಡ್' (BRBNMPL) ಮೇಲ್ವಿಚಾರಣೆ ಮಾಡುತ್ತದೆ. ಆರ್​ಬಿಐ ದೇಶದಲ್ಲಿ ಅಗತ್ಯವಿರುವ ಕರೆನ್ಸಿಯ ಪ್ರಮಾಣವನ್ನು ಅಂದಾಜು ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಈ ಮುದ್ರಣ ಕೇಂದ್ರಗಳಿಗೆ ಆದೇಶಗಳನ್ನು ನೀಡುತ್ತದೆ.

ಸರ್ಕಾರ ಮತ್ತು ಆರ್‌ಬಿಐ ಪಾತ್ರವೇನು?

ದೇಶದಲ್ಲಿ ನೋಟುಗಳನ್ನು ವಿತರಿಸುವ ಸಂಪೂರ್ಣ ಅಧಿಕಾರವನ್ನು ಆರ್‌ಬಿಐ ಮಾತ್ರ ಹೊಂದಿದೆ. ನೋಟುಗಳ ವಿನ್ಯಾಸ, ಗಾತ್ರ ಮತ್ತು ಬಣ್ಣವನ್ನು ಆರ್‌ಬಿಐ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಅನುಮೋದಿಸುತ್ತದೆ. ಚಲಾವಣೆಯಲ್ಲಿರುವ ಹಳೆಯ ಮತ್ತು ಹರಿದ ನೋಟುಗಳನ್ನು ಹಿಂತೆಗೆದುಕೊಳ್ಳಲು ಮತ್ತು ಅವುಗಳನ್ನು ಹೊಸ ನೋಟುಗಳೊಂದಿಗೆ ಬದಲಾಯಿಸಲು ಆರ್‌ಬಿಐ 'ಕ್ಲೀನ್ ನೋಟ್ ನೀತಿ'ಯನ್ನು ಜಾರಿಗೆ ತರುತ್ತದೆ.

Also Read
'ನಾನು ಮಾತಾಡೋಕೆ ನಿಂತ್ರೆ ಇನ್ನೊಂದು ಒಪನ್ ಹಾರ್ಟ್ ಸರ್ಜರಿ ಆಗುತ್ತೆ'! ಎಚ್​ಡಿಕೆಗೆ ಪ್ರಿಯಾಂಕ್​ ಖರ್ಗೆ ಖಡಕ್​ ವಾರ್ನಿಂಗ್​
Coin Note Making

ಮತ್ತೊಂದೆಡೆ, 'ನಾಣ್ಯ ಕಾಯ್ದೆ- 2011' ಪ್ರಕಾರ ನಾಣ್ಯಗಳ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಅವುಗಳ ತಯಾರಿಕೆ ಮತ್ತು ವಿನ್ಯಾಸದ ಹೊಣೆ ಸರ್ಕಾರದ್ದು ಎನ್ನುತ್ತಾರೆ ತಜ್ಞರು. ಆದಾಗ್ಯೂ, ಅವುಗಳನ್ನು ಸಾರ್ವಜನಿಕರಿಗೆ ವಿತರಿಸುವ ಸಂಪೂರ್ಣ ಜವಾಬ್ದಾರಿಯನ್ನು ಆರ್‌ಬಿಐ ವಹಿಸಿಕೊಂಡಿದೆ ಎಂದು ವಿವರಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net