ಕಿಂಗ್ ಖಾನ್ ಎದುರು ಕ್ಲ್ಯಾಶ್ ಬೇಡವೇ ಬೇಡ ಎಂದ ಸಲ್ಲು ! ಅಸಲಿ ಸೀಕ್ರೆಟ್ ರಿವೀಲ್ | salman khan

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಮಾತೃಭೂಮಿ ಮೇ ವಾರ್ ರೆಸ್ಟ್ ಇನ್ ಪೀಸ್ ಸಿನಿಮಾ ಡಿಸೆಂಬರ್ 4ರಂದು ತೆರೆಗೆ ಬರಲು ಸಜ್ಜಾಗಿದೆ. ಹಲವು ಬಾರಿ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದ್ದರೂ, ಇದೀಗ ಮತ್ತೊಮ್ಮೆ ದಿನಾಂಕ ಬದಲಿಸುವ ಉದ್ದೇಶ ತನಗಿಲ್ಲ ಎಂದು ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ. salman khan
ಕಿಂಗ್ ಖಾನ್ ಎದುರು ಕ್ಲ್ಯಾಶ್ ಬೇಡವೇ ಬೇಡ ಎಂದ ಸಲ್ಲು
ಕಿಂಗ್ ಖಾನ್ ಎದುರು ಕ್ಲ್ಯಾಶ್ ಬೇಡವೇ ಬೇಡ ಎಂದ ಸಲ್ಲುWEB
Published on: 

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಮಾತೃಭೂಮಿ ಮೇ ವಾರ್ ರೆಸ್ಟ್ ಇನ್ ಪೀಸ್ ಸಿನಿಮಾ ಡಿಸೆಂಬರ್ 4ರಂದು ತೆರೆಗೆ ಬರಲು ಸಜ್ಜಾಗಿದೆ. ಹಲವು ಬಾರಿ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದ್ದರೂ, ಇದೀಗ ಮತ್ತೊಮ್ಮೆ ದಿನಾಂಕ ಬದಲಿಸುವ ಉದ್ದೇಶ ತನಗಿಲ್ಲ ಎಂದು ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ. ಶ್ರದ್ಧಾ ಕಪೂರ್ ನಟನೆಯ ಈಥಾ ಚಿತ್ರದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಎದುರಾಗಲಿದ್ದರೂ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

ಹೈದರಾಬಾದ್‌ನಲ್ಲಿ ಎಬಿಪಿ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮಾತನಾಡಿದ ಸಲ್ಮಾನ್ ಖಾನ್, ತಮ್ಮ ಸಿನಿಮಾ ಬಿಡುಗಡೆ ದಿನಾಂಕವನ್ನು ಬದಲಿಸದಿರಲು ಇರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ. ವಿಶೇಷವಾಗಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮತ್ತು ಅವರ ಪುತ್ರಿ ಸುಹಾನಾ ಖಾನ್ ಅಭಿನಯದ ಮುಂಬರುವ ಕಿಂಗ್ ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಕದನಕ್ಕೆ ಇಳಿಯಲು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಶಾರುಖ್ ಸಿನಿಮಾ ಜೊತೆ ಸ್ಪರ್ಧೆ ಬೇಡ

ಡಿಸೆಂಬರ್ ತಿಂಗಳ ಸಿನಿಮಾ ಬಿಡುಗಡೆಗಳ ಕುರಿತು ಮಾತನಾಡಿದ ಸಲ್ಮಾನ್, ಶಾರುಖ್ ಖಾನ್ ಅವರ ಸಿನಿಮಾ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ಅವರ ಮತ್ತು ಅವರ ಪುತ್ರಿಯ ಚಿತ್ರದೊಂದಿಗೆ ನಾನು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ನನ್ನ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದರೆ, ಶಾರುಖ್ ಅವರ ಚಿತ್ರದ ಬಿಡುಗಡೆಯ ಸಮಯಕ್ಕೆ ಹತ್ತಿರವಾಗುತ್ತದೆ. ಅವರ ಸಿನಿಮಾದೊಂದಿಗೆ ಮುಖಾಮುಖಿಯಾಗಲು ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

ಅದೇ ವೇಳೆ ಹಾಲಿವುಡ್‌ನ ಅವೆಂಜರ್ಸ್ ಮತ್ತು ಡ್ಯೂನ್ ಸಿನಿಮಾಗಳೊಂದಿಗೆ ಸ್ಪರ್ಧಿಸಲು ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ. ಆ ಸಿನಿಮಾಗಳು ತಮ್ಮ ಚಿತ್ರದ ಬಿಡುಗಡೆಗೂ ಒಂದು ವಾರ ಮೊದಲು ತೆರೆಗೆ ಬರುತ್ತಿವೆ. ಅವುಗಳೊಂದಿಗೆ ಬಾಕ್ಸ್ ಆಫೀಸ್ ಪೈಪೋಟಿ ಎದುರಿಸಲು ಸಿದ್ಧನಿದ್ದೇನೆ ಎಂದು ಸಲ್ಮಾನ್ ಹೇಳಿದ್ದಾರೆ.

ಲವ್ ಆ್ಯಂಡ್ ವಾರ್ ಸಿನಿಮಾಗೂ ಹೆದರಿಕೆ

ಜನವರಿ ತಿಂಗಳಲ್ಲಿಯೂ ಸಿನಿಮಾ ಬಿಡುಗಡೆ ಮಾಡಲು ಸೂಕ್ತ ಸಮಯವಿಲ್ಲ ಎಂಬ ಅಭಿಪ್ರಾಯವನ್ನು ಸಲ್ಮಾನ್ ವ್ಯಕ್ತಪಡಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಲವ್ ಆ್ಯಂಡ್ ವಾರ್ ಸಿನಿಮಾ 2027ರ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟಿಸುತ್ತಿದ್ದಾರೆ. ಈ ಚಿತ್ರದೊಂದಿಗೂ ಬಾಕ್ಸ್ ಆಫೀಸ್ ಪೈಪೋಟಿ ಬೇಡ ಎಂಬುದು ಸಲ್ಮಾನ್ ಅವರ ನಿಲುವು. ಇನ್ನು ಮಾರ್ಚ್ ತಿಂಗಳಲ್ಲಿ ಮಾನ್ಸ್ಟರ್ ಎಂಬ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಅದರೊಂದಿಗೂ ಸ್ಪರ್ಧಿಸಲು ಇಷ್ಟವಿಲ್ಲ ಎಂದು ಸಲ್ಮಾನ್ ಹೇಳಿದ್ದಾರೆ.

ಇದನ್ನೂ ಓದಿ : 'ಧುರಂಧರ್', 'ಕಾಂತಾರ'... ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ | DPIFF Awards 2026

ಹೀಗೆ ಒಂದೆಡೆ ಹಾಲಿವುಡ್ ಸಿನಿಮಾಗಳೊಂದಿಗೆ ಸ್ಪರ್ಧಿಸಲು ಸಿದ್ಧರಾಗಿರುವ ಸಲ್ಮಾನ್ ಖಾನ್, ಮತ್ತೊಂದೆಡೆ ಶಾರುಖ್ ಖಾನ್ ಅವರ ಚಿತ್ರದೊಂದಿಗೆ ಮುಖಾಮುಖಿಯಾಗುವುದನ್ನು ಮಾತ್ರ ತಪ್ಪಿಸಿಕೊಳ್ಳಲು ಬಯಸಿದ್ದಾರೆ. ಸದ್ಯಕ್ಕೆ ಡಿಸೆಂಬರ್ 4ರ ಬಿಡುಗಡೆಯ ದಿನಾಂಕದಲ್ಲೇ ಮಾತೃಭೂಮಿ ಸಿನಿಮಾ ತೆರೆಗೆ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.