

ನವದೆಹಲಿ: ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ 'ದೀಪಥೂನ್' ಬಳಿ ನವೆಂಬರ್ 24ರಂದು 'ಕಾರ್ತಿಗೆೈ ದೀಪಂ' ದೀಪವನ್ನು ಬೆಳಗಿಸಲು ಅನುಮತಿ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ತಮಿಳುನಾಡು ಸರ್ಕಾರ ಶನಿವಾರ(ನ. 21) ಮತ್ತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಆದರೆ ಬಿಜೆಪಿ ಇದನ್ನು ಹಿಂದೂ ಮತ್ತು ಸನಾತನ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇಧಿ, ತಮಿಳುನಾಡಿನ 'ಇಂಡಿ' (INDI) ಮೈತ್ರಿಕೂಟದ ಸರ್ಕಾರವು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಜಾರಿಗೊಳಿಸದಿರಲು ಪಟ್ಟು ಹಿಡಿದಿರುವುದು ಅತ್ಯಂತ ದುರದೃಷ್ಟಕರ. ಇದು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಸಂವಿಧಾನ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ಇದು ಅವರ ಹಿಂದೂ ವಿರೋಧಿ ಮತ್ತು ಸನಾತನ ಧರ್ಮ ವಿರೋಧಿ ಮನಸ್ಥಿತಿಯನ್ನೂ ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಈ ನಿರ್ಧಾರವು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಹಿಂದೂ ಧರ್ಮದ ಬಗ್ಗೆ ಇರುವ ದ್ವೇಷವನ್ನು ಸೂಚಿಸುತ್ತದೆ ಎಂದಿರುವ ಅವರು, ಸುಪ್ರೀಂ ಕೋರ್ಟ್‌ನ ನವೆಂಬರ್ 20ರ ಆದೇಶವನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಶುಕ್ರವಾರ ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೂ, ನ. 24ರಂದು ತಾತ್ಕಾಲಿಕವಾಗಿ ಒಂದು ಬಾರಿ ಕಾರ್ತಿಕ ದೀಪ ಬೆಳಗಲು ಅವಕಾಶ ನೀಡಿ ಮಧ್ಯಂತರ ಆದೇಶ ನೀಡಿದೆ.
ವಿವಾದಿತ ಕಲ್ಲಿನ ಸ್ತಂಭದಲ್ಲಿ ದೀಪ ಬೆಳಗಿಸಲು ಒಂದು ಬಾರಿಗೆ ಮಾತ್ರ ಅನುಮತಿ ನೀಡಿರುವ ಕೋರ್ಟ್, ಇದರಿಂದ ಆ ಸ್ಥಳದ ಮೇಲೆ ಯಾವುದೇ ಸಾಂಪ್ರದಾಯಿಕ, ಧಾರ್ಮಿಕ ಅಥವಾ ಮಾಲೀಕತ್ವದ ಹಕ್ಕು ಸ್ಥಾಪನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ದೀಪ ಬೆಳಗಿಸುವ ವೇಳೆ ದೇವಸ್ಥಾನದ ಅಧಿಕೃತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸ್ಥಳಕ್ಕೆ ತೆರಳಲು ಅನುಮತಿ ನೀಡಿದೆ.
ಇನ್ನೂ ಸಾರ್ವಜನಿಕರ ಪ್ರವೇಶ, ಮೆರವಣಿಗೆ, ಸಭೆ, ಪ್ರತಿಭಟನೆ ಮತ್ತು ಘೋಷಣೆ ಕೂಗುವುದನ್ನು ನಿರ್ಬಂಧಿಸಿದ್ದು, ಕಾರ್ಯಕ್ರಮದ ಉಸ್ತುವಾರಿಗಾಗಿ ಮದುರೈ ಜಿಲ್ಲಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ, ಪುರಾತತ್ವ ಇಲಾಖೆ (ASI) ಮತ್ತು ಪೊಲೀಸರ ಸಹಯೋಗದಲ್ಲಿ ವ್ಯವಸ್ಥೆ ಮಾಡುವಂತೆ ಸೂಚಿಸಿದೆ.
ಈಗ ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ, ಈ ಆದೇಶವನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿದೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (HR&CE) ಆಯುಕ್ತರು ಈ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ (ಏಜೆನ್ಸೀಸ್).