ಆಂಧ್ರ ಪ್ರದೇಶದ ರೈತನನ್ನು ಕೋಟ್ಯಧಿಪತಿಯಾಗಿ ಮಾಡಿದ ವಿಯೆಟ್ನಾಂ ಹಣ್ಣು: ಈ ಯೋಶಗಾಥೆ ಕೇಳಿದ್ರೆ ಹುಬ್ಬೇರಿಸ್ತೀರಿ..! Gac Fruit

ಆಂಧ್ರಪ್ರದೇಶದ ಎನ್.ಟಿ.ಆರ್. ಜಿಲ್ಲೆಯ ರಾಮಿರೆಡ್ಡಿಪಲ್ಲಿಯ ಬಿ. ಶೇಷು ಬಾಬು ಎಂಬವರು ತಮ್ಮ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
Gac Fruit
ಆಂಧ್ರ ಪ್ರದೇಶದ ರೈತ ಶೇಷ ಬಾಬು
Published on: 

Gac Fruit : ಕೋವಿಡ್ ಸಂಕಷ್ಟದ ಕಾಲದಲ್ಲಿ ಕೈಯಲ್ಲಿದ್ದ ಉತ್ತಮ ಉದ್ಯೋಗವನ್ನು ಬಿಟ್ಟು ಸ್ವಗ್ರಾಮಕ್ಕೆ ಮರಳಿದ ಆಂಧ್ರಪ್ರದೇಶದ ರೈತನೊಬ್ಬ, ಅಪರೂಪದ ಹಣ್ಣೊಂದರ ಕೃಷಿಯ ಮೂಲಕ ಇಂದು ಕೋಟ್ಯಧಿಪತಿಯಾಗಿರುವ ಸ್ಫೂರ್ತಿದಾಯಕ ಯಶೋಗಾಥೆ ಇದು.

ಹವಾಮಾನ ವೈಪರೀತ್ಯದಿಂದ ಸಾಂಪ್ರದಾಯಿಕ ಬೆಳೆಗಳಲ್ಲಿ ನಿರಂತರ ನಷ್ಟ ಅನುಭವಿಸುತ್ತಿದ್ದ ಅನ್ನದಾತರಿಗೆ ಹೊಸ ದಾರಿ ತೋರಿಸಿರುವ ಈ ರೈತ, ವಿಯೆಟ್ನಾಂ ಮೂಲದ 'ಗ್ಯಾಕ್' ( Gac Fruit ) ಎನ್ನುವ ಅಪರೂಪದ ಪೌಷ್ಟಿಕಾಂಶಯುಕ್ತ ಹಣ್ಣಿನ ಕೃಷಿ ಮಾಡಿ ಭಾರೀ ಆದಾಯ ಗಳಿಸುತ್ತಿದ್ದಾರೆ. ಆಂಧ್ರಪ್ರದೇಶದ ಎನ್.ಟಿ.ಆರ್. ಜಿಲ್ಲೆಯ ರಾಮಿರೆಡ್ಡಿಪಲ್ಲಿಯ ಬಿ. ಶೇಷು ಬಾಬು ಎಂಬವರು ತಮ್ಮ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Also Read
ಸರ್ಪಗಳಿಗೆ ಸಿಂಹಸ್ವಪ್ನ ಈ 4 ಹಕ್ಕಿಗಳು; ಹಾವುಗಳನ್ನು ಬೇಟೆಯಾಡುವ ರೀತಿ ಮೈ ಜುಮ್ಮೆನಿಸುತ್ತೆ! | Snake Hunting Birds
Gac Fruit

ಕೋವಿಡ್ ಮಹಾಮಾರಿ ಉತ್ತುಂಗದಲ್ಲಿದ್ದ 2020ರಲ್ಲಿ ಹೈದರಾಬಾದ್‌ನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಶೇಷು ಬಾಬು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಸ್ವಗ್ರಾಮವಾದ ರಾಮಿರೆಡ್ಡಿಪಲ್ಲಿಗೆ ವಾಪಸ್ಸಾದರು. ಆ ಸಮಯದಲ್ಲಿ ಅವರ ತಂದೆ ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದ ಮೆಣಸಿನಕಾಯಿ ಬೆಳೆ ಹವಾಮಾನ ಬದಲಾವಣೆಯಿಂದಾಗಿ ಭಾರಿ ನಷ್ಟವನ್ನು ಎದುರಿಸುತ್ತಿತ್ತು.

ತಂದೆಯ ಕಷ್ಟಕ್ಕೆ ನೆರವಾಗಲು ಮತ್ತು ಕೃಷಿಯಲ್ಲಿ ಏನಾದರೂ ಹೊಸದು ಮಾಡಬೇಕೆಂದುಕೊಂಡ ಅವರು, ವಿಭಿನ್ನ ಹಾಗೂ ಲಾಭದಾಯಕ ಪರ್ಯಾಯ ಬೆಳೆಗಳ ಹುಡುಕಾಟದಲ್ಲಿದ್ದರು. ಅಂತರ್ಜಾಲದಲ್ಲಿ ನಡೆಸಿದ ಸುದೀರ್ಘ ಪರಿಶೋಧನೆಯಲ್ಲಿ ಅವರಿಗೆ 'ಗ್ಯಾಕ್' ಹಣ್ಣಿನ ಕೃಷಿಯ ಬಗ್ಗೆ ತಿಳಿದುಬಂದಿದ್ದು, ಆಂಧ್ರಪ್ರದೇಶದ ನರ್ಸರಿಯೊಂದರಲ್ಲಿ ಲಭ್ಯವಿದ್ದ ವಿಯೆಟ್ನಾಂ ಮೂಲದ ಈ ಗ್ಯಾಕ್ ಸಸ್ಯಗಳನ್ನು ತಂದು ಕೃಷಿ ಮಾಡಲು ನಿರ್ಧರಿಸಿದರು.

ಮುಂದೆ ಮಾರ್ಚ್ 2023ರಲ್ಲಿ ಕೇವಲ ಕಾಲು ಎಕರೆ ಜಾಗದಲ್ಲಿ 100 ಗ್ಯಾಕ್ ಸಸ್ಯಗಳನ್ನು ನೆಡುವ ಮೂಲಕ ತಮ್ಮ ನೂತನ ಪ್ರಯೋಗಕ್ಕೆ ಚಾಲನೆ ನೀಡಿದರು. ಆರಂಭದಲ್ಲಿ ಪ್ರತಿ ಗಿಡಕ್ಕೆ ಸುಮಾರು 700 ರೂ.ಗಳಂತೆ ಬಂಡವಾಳ ಹೂಡಿಕೆ ಮಾಡಲಾಗಿದ್ದು, ವಿಶೇಷವೆಂದರೆ ಈ ಸಸ್ಯಗಳು ಕೇವಲ ನಾಲ್ಕು ತಿಂಗಳಲ್ಲೇ ಫಲ ನೀಡಲು ಪ್ರಾರಂಭಿಸಿದವು. ಮೊದಲ ಬೆಳೆಯಲ್ಲೇ ಸುಮಾರು 2,100 ಕೆ.ಜಿ ಗ್ಯಾಕ್ ಹಣ್ಣುಗಳ ಇಳುವರಿ ದೊರೆಯಿತು. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ಬರೋಬ್ಬರಿ 800 ರೂ.ಗಳಂತೆ ಮಾರಾಟ ಮಾಡುವ ಮೂಲಕ ಅವರು ತಮ್ಮ ಮೊದಲ ಕೃಷಿಯಲ್ಲೇ ಬರೋಬ್ಬರಿ 16 ಲಕ್ಷ ರೂ.ಗಳಿಗೂ ಅಧಿಕ ಆದಾಯವನ್ನು ಗಳಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಈ ಆರಂಭಿಕ ಯಶಸ್ಸಿನಿಂದ ಉತ್ಸುಕರಾದ ಶೇಷು ಬಾಬು ಅವರು ಈಗ ಗ್ಯಾಕ್ ಕೃಷಿಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಪ್ರಸ್ತುತ ತಮ್ಮ ಜಮೀನಿನಲ್ಲಿರುವ 210 ಹೆಣ್ಣು ಗಿಡಗಳಿಂದ ಪ್ರತಿ ಗಿಡಕ್ಕೆ ಅಂದಾಜು 30 ಕೆ.ಜಿಯಂತೆ ಒಟ್ಟು 6,000 ಕೆ.ಜಿಗಿಂತ ಹೆಚ್ಚಿನ ಇಳುವರಿಯನ್ನು ಪಡೆಯುತ್ತಿದ್ದಾರೆ.

ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪ್ರತಿ ಕೆಜಿ ಗ್ಯಾಕ್ ಹಣ್ಣನ್ನು 500 ರೂ. ನಿಂದ 600 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ಈ ಹಣ್ಣಿನ ಗಿಡಗಳು ಬಳ್ಳಿಯ ರೂಪದಲ್ಲಿ ಬೆಳೆಯುವುದರಿಂದ ಇವುಗಳಿಗೆ ಆಸರೆ ನೀಡಲು ಪೆಂಡಾಲ್ ಅಥವಾ ಮಂಟಪ ರಚನೆ ಮಾಡುವುದು ಅನಿವಾರ್ಯವಾಗಿದ್ದು, ಪ್ರತಿ ಎಕರೆಗೆ ಸುಮಾರು 4 ಲಕ್ಷ ರೂ.ಗಳವರೆಗೆ ಆರಂಭಿಕ ವೆಚ್ಚ ತಗಲುತ್ತದೆ ಎಂದು ಅವರು ತಿಳಿಸಿದ್ದಾರೆ.

Also Read
ನಿಮ್ಮ ಮನೆಯಿಂದ ಈ 3 ವಾಸನೆ ಬಂದ್ರೆ ಹಾವುಗಳು ಅಲ್ಲಿಗೆ ಬರುವುದು ಫಿಕ್ಸ್​: ತಪ್ಪದೇ ಈ ಎಚ್ಚರಿಕೆ ವಹಿಸಿ! Snakes
Gac Fruit

ಗ್ವಾಕ್ ಅಥವಾ ಗ್ಯಾಕ್ ಹಣ್ಣು ಮೂಲತಃ ಆಗ್ನೇಯ ಏಷ್ಯಾ ದೇಶಗಳಿಗೆ ಸೇರಿದ್ದಾಗಿದ್ದು, ಇದು ಅತಿ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಅಪರೂಪದ ಹಣ್ಣಾಗಿದೆ. ಇದರಲ್ಲಿ ಲೈಕೋಪೀನ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವುದರಿಂದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.

ಈ ಹಣ್ಣು ಹಸಿರು ಅಥವಾ ಹಳದಿ ಬಣ್ಣದಲ್ಲಿದ್ದಾಗ ತರಕಾರಿಯಂತೆ ಅಡುಗೆ ಮಾಡಲು ಬಳಸಬಹುದು, ಆದರೆ ಸಂಪೂರ್ಣವಾಗಿ ಹಣ್ಣಾದಾಗ ಕಡುಗೆಂಪು ಬಣ್ಣಕ್ಕೆ ತಿರುಗಿ ಹಣ್ಣಿನ ರೂಪದಲ್ಲೇ ಮಾರಾಟವಾಗುತ್ತದೆ. ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ಹೊಸತನದತ್ತ ಹೆಜ್ಜೆ ಹಾಕಿದ ಶೇಷು ಬಾಬು ಅವರ ಈ ನಾವೀನ್ಯತೆ ಇಂದು ಇಡೀ ಕೃಷಿ ಲೋಕಕ್ಕೆ ಮಾದರಿಯಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net