

ನವದೆಹಲಿ: ಎಸ್ಐಆರ್ ವಿವಾದ ಮತ್ತು ಮತಗಳ್ಳತನ ವಿಷಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಕೋರಲು ಇಂಡಿಯಾ ಮೈತ್ರಿಕೂಟದ ನಾಯಕರು ಭೇಟಿಗೆ ಮನವಿ ಮಾಡಿದ್ದನ್ನು ನಿರಾಕರಿಸಿರುವ ಸಿಜೆಐ ಸೂರ್ಯಕಾಂತ್ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್, ದೇಶದ ಜನ ಇದನ್ನು ನೆನಪಿನಲ್ಲಿಟ್ಟುಕೊಳ್ತಾರೆ ಎಂದು ಹೇಳಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಲು ಇಂಡಿಯಾ ಮೈತ್ರಿಕೂಟವು ಸುಪ್ರೀಂ ಕೋರ್ಟ್‌ನತ್ತ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ನಾವು ಇಂದು ಇಲ್ಲಿಗೆ ಬಂದಿದ್ದೇವೆ. ಭೇಟಿಗೆ ಸಮಯ ಕೋರಿದ್ದೆವು. ಸಂವಿಧಾನವನ್ನು ರಕ್ಷಿಸುವುದು ತಮ್ಮ ಕರ್ತವ್ಯವಾಗಿರುವ ಮುಖ್ಯ ನ್ಯಾಯಮೂರ್ತಿಗಳು ನಮ್ಮನ್ನು ಭೇಟಿಯಾಗಲು ಇಷ್ಟಪಡುತ್ತಿಲ್ಲ ಎಂದಿದ್ದಾರೆ.
ಮತಗಳ ಕಳ್ಳತನ, ಚುನಾವಣಾ ಅಕ್ರಮಗಳು ಹಾಗೂ ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಕೈಬಿಡಲಾಗಿರುವಂತಹ ಸಂದರ್ಭದಲ್ಲಿ ನಾವು ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ನಮ್ಮ ಅಹವಾಲುಗಳನ್ನು ಅವರ ಮುಂದಿಡಲು ಬಯಸಿದ್ದೇವು. ಆದರೆ ಅವರು ರಾಜಕಾರಣಿಗಳನ್ನು ಭೇಟಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಜನರು ಇದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಇಂಡಿಯಾ ಕೂಟವು ಇಂದು(ಅ. 12) ಚಲೋ ದೆಹಲಿ - ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ ಎಂಬ ಹೆಸರಿನಲ್ಲಿ ಸುಪ್ರೀಂಕೋರ್ಟ್ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಸಿಜೆಐ ಸೂರ್ಯಕಾಂತ್ ಭೇಟಿ ಮಾಡಿ ಮನವಿ ಸಲ್ಲಿಸಲು ಉದ್ದೇಶಿಸಿತ್ತು. ಆದ್ರೆ ಸಿಜೆಐ ಇದೇ ವಿಷಯಗಳು ನ್ಯಾಯಾಂಗ ಪರಿಶೀಲನೆಯ ಹಂತದಲ್ಲಿವೆ ಎಂಬ ಕಾರಣವನ್ನು ನೀಡಿ ಕಾಂಗ್ರೆಸ್ ನಾಯಕರ ಭೇಟಿಗೆ ನಿರಾಕರಿಸಿದ್ದಾರೆ. ಇನ್ನೂ ಈ ಕುರಿತು ಇನ್ನೊಂದು ಔಪಚಾರಿಕ ಪಿಐಎಲ್ ಸಲ್ಲಿಸುವಂತೆ ಸೂಚಿಸಿದ್ದಾರೆ (ಏಜೆನ್ಸೀಸ್).