ಔಷಧ ಬೆಲೆ ಕಣ್ಣಾಮುಚ್ಚಾಲೆ

ದೇಶದಲ್ಲಿ ಜೀವರಕ್ಷಕ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಅವುಗಳ ಉತ್ಪಾದನಾ ವೆಚ್ಚಕ್ಕಿಂತ ಹತ್ತಾರು ಪಟ್ಟು ಹೆಚ್ಚಿನ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಉತ್ಪಾದನಾ ವೆಚ್ಚ ಕೇವಲ ಹತ್ತಿಪ್ಪತ್ತು ರೂ. ಇರುವ ಔಷಧಗಳಿಗೆ ನೂರಾರು, ಸಾವಿರಾರು ರೂ. ಎಂಆರ್​ಪಿ ನಿಗದಿಪಡಿಸಿ ರೋಗಿಗಳನ್ನು ಶೋಷಿಸಲಾಗುತ್ತಿದೆ ಎಂಬ ಮಾತುಗಳು ಆರೋಗ್ಯ ಕ್ಷೇತ್ರದಲ್ಲಿ ಆತಂಕ ಮೂಡಿಸಿವೆ.
ಔಷಧ ಬೆಲೆ ಕಣ್ಣಾಮುಚ್ಚಾಲೆ
WEB
Published on: 

ದೇಶದಲ್ಲಿ ಜೀವರಕ್ಷಕ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಅವುಗಳ ಉತ್ಪಾದನಾ ವೆಚ್ಚಕ್ಕಿಂತ ಹತ್ತಾರು ಪಟ್ಟು ಹೆಚ್ಚಿನ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಉತ್ಪಾದನಾ ವೆಚ್ಚ ಕೇವಲ ಹತ್ತಿಪ್ಪತ್ತು ರೂ. ಇರುವ ಔಷಧಗಳಿಗೆ ನೂರಾರು, ಸಾವಿರಾರು ರೂ. ಎಂಆರ್​ಪಿ ನಿಗದಿಪಡಿಸಿ ರೋಗಿಗಳನ್ನು ಶೋಷಿಸಲಾಗುತ್ತಿದೆ ಎಂಬ ಮಾತುಗಳು ಆರೋಗ್ಯ ಕ್ಷೇತ್ರದಲ್ಲಿ ಆತಂಕ ಮೂಡಿಸಿವೆ. ಈ ಬೃಹತ್ ದಂಧೆ ಹೇಗೆ ನಡೆಯುತ್ತದೆ? ನಿಯಂತ್ರಣ ಮಾಡಬೇಕಾದವರು ಯಾರು? ಕೇಂದ್ರ, ರಾಜ್ಯ ಸರ್ಕಾರಗಳ ಪಾತ್ರ ಏನು? ನಿಜವಾದ ಬೆಲೆಯನ್ನು ಜನರು ಪತ್ತೆ ಹಚ್ಚುವುದು ಹೇಗೆ? ಬೇರೆ ದೇಶಗಳಲ್ಲಿಯೂ ಈ ಸ್ಥಿತಿ ಇದೆಯಾ? ಈ ಎಲ್ಲ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಮನುಷ್ಯನಿಗೆ ಅನಾರೋಗ್ಯ ಕಾಡಿದಾಗ ಆಸ್ಪತ್ರೆ ಮತ್ತು ಔಷಧಾಲಯಗಳೇ ಆಸರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿಕಿತ್ಸೆಗಿಂತ ಔಷಧಗಳ ವೆಚ್ಚವೇ ರೋಗಿಗಳನ್ನು ಆರ್ಥಿಕವಾಗಿ ಕಂಗೆಡಿಸುತ್ತಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಲವು ಬ್ರ್ಯಾಂಡೆಡ್ ಔಷಧಗಳು, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಚುಚ್ಚುಮದ್ದುಗಳು ಹಾಗೂ ದೈನಂದಿನ ಗ್ಲೂಕೋಮೀಟರ್

ಸ್ಟ್ರಿಪ್ಸ್​ನಿಂದ ಹಿಡಿದು ಸ್ಟೆಂಟ್​ಗಳವರೆಗಿನ ವೈದ್ಯಕೀಯ ಸಲಕರಣೆಗಳ ಮೇಲೆ ಉತ್ಪಾದನಾ ವೆಚ್ಚಕ್ಕಿಂತ ಶೇ. 200ರಿಂದ ಸಾವಿರ ಪಟ್ಟು ಹೆಚ್ಚು ದರ ನಿಗದಿಪಡಿಸಲಾಗುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಔಷಧ ಕಂಪನಿಗಳು, ಸಗಟು ವಿತರಕರು ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ಅಪವಿತ್ರ ಸಿಂಡಿಕೇಟ್ ಈ ಅತಿಯಾದ ಲಾಭಕೋರತನಕ್ಕೆ ಮುಖ್ಯ ಕಾರಣವೆಂದು ಹೇಳಲಾಗುತ್ತಿದೆ. ಜನಸಾಮಾನ್ಯರ ಅಸಹಾಯಕತೆಯನ್ನು ಬಂಡವಾಳವಾಗಿಸಿಕೊಂಡು ನಡೆಯುತ್ತಿರುವ ಈ ವ್ಯಾಪಾರೀಕರಣದ ಹಿಂದೆ ಬೆಲೆ ನಿಯಂತ್ರಣ ವ್ಯವಸ್ಥೆಯ ಲೋಪದೋಷಗಳೂ ಇವೆ.

ಯಾರ ಕೈಯಲ್ಲಿದೆ ಔಷಧ ಮಾರುಕಟ್ಟೆ ನಿಯಂತ್ರಣ?

ಭಾರತದಲ್ಲಿ ಔಷಧಗಳ ಗುಣಮಟ್ಟ, ಲೈಸೆನ್ಸಿಂಗ್ ಹಾಗೂ ಅವುಗಳ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್​ಪಿ) ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ದ್ವಿಮುಖ ಆಡಳಿತ ವ್ಯವಸ್ಥೆ ಜಾರಿಯಲ್ಲಿದೆ.

ಕೇಂದ್ರ ಸರ್ಕಾರದ ಪಾತ್ರ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ನ್ಯಾಷನಲ್ ಫಾರ್ವಸ್ಯುಟಿಕಲ್ ಪ್ರೖೆಸಿಂಗ್ ಅಥಾರಿಟಿ (ಎನ್​ಪಿಪಿಎ) ದೇಶದಲ್ಲಿ ಔಷಧಗಳ ಬೆಲೆಯನ್ನು ನಿಯಂತ್ರಿಸುವ ಅತ್ಯುನ್ನತ ಸಂಸ್ಥೆ. ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಗೆ (ನ್ಯಾಷನಲ್ ಲಿಸ್ಟ್ ಆಫ್ ಎಸೆನ್ಷಿಯಲ್ ಮೆಡಿಸಿನ್ಸ್- ಎನ್​ಎಲ್​ಇಎಂ) ಒಳಪಡುವ ಔಷಧಗಳಿಗೆ ಗರಿಷ್ಠ ದರ ಮಿತಿಯನ್ನು (ಸೀಲಿಂಗ್ ಪ್ರೖೆಸ್) ನಿಗದಿಪಡಿಸುವುದು ಇದರ ಕೆಲಸ. ಇನ್ನು ಕೇಂದ್ರ ಆರೋಗ್ಯ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಸೆಂಟ್ರಲ್ ಡ್ರಗ್ಸ್ ಸ್ಟಾ್ಯಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (ಸಿಡಿಎಸ್​ಸಿಒ) ದೇಶಕ್ಕೆ ಹೊಸ ಔಷಧಗಳ ಅನುಮೋದನೆ, ಕ್ಲಿನಿಕಲ್ ಪ್ರಯೋಗಗಳು ಹಾಗೂ ಆಮದು ನಿಯಂತ್ರಣದ ಜವಾಬ್ದಾರಿ ಹೊತ್ತಿದೆ.

ರಾಜ್ಯ ಸರ್ಕಾರಗಳ ಪಾತ್ರ: ರಾಜ್ಯ ಮಟ್ಟದಲ್ಲಿ ಡ್ರಗ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ (ಔಷಧ ನಿಯಂತ್ರಣ ಇಲಾಖೆ) ಕಾರ್ಯ ನಿರ್ವಹಿಸುತ್ತದೆ. ಮೆಡಿಕಲ್ ಶಾಪ್​ಗಳು ಹಾಗೂ ಉತ್ಪಾದನಾ ಘಟಕಗಳಿಗೆ ಪರವಾನಗಿ ನೀಡುವುದು, ಔಷಧ ಅಂಗಡಿಗಳ ಮೇಲೆ ದಾಳಿ ನಡೆಸಿ ಗುಣಮಟ್ಟ ಪರೀಕ್ಷಿಸುವುದು, ನಕಲಿ ಔಷಧಗಳ ಮಾರಾಟ ತಡೆಯುವುದು ಮತ್ತು ನಿಗದಿತ ಎಂಆರ್​ಪಿಗಿಂತ ಹೆಚ್ಚು ದರಕ್ಕೆ ಮಾರಾಟ ಮಾಡದಂತೆ ನಿಗಾ ಇಡುವುದು ರಾಜ್ಯ ಡ್ರಗ್ ಇನ್​ಸ್ಪೆಕ್ಟರ್​ಗಳ ಕರ್ತವ್ಯವಾಗಿದೆ.

ಬೆಲೆ ನಿಗದಿ ಹೇಗೆ ನಡೆಯುತ್ತದೆ?

ದೇಶದಲ್ಲಿ ಔಷಧಗಳ ಬೆಲೆಯನ್ನು ಮುಖ್ಯವಾಗಿ ಔಷಧ ಬೆಲೆ ನಿಯಂತ್ರಣ ಆದೇಶ- 2013ರಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಔಷಧಗಳನ್ನು ಎರಡು ವರ್ಗಗಳಾಗಿ ಈ ಕಾಯ್ದೆ ವಿಂಗಡಿಸುತ್ತದೆ.

ಷೆಡ್ಯೂಲ್ಡ್ ಫಾಮುಲೇಷನ್ಸ್: ಇವು ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ ಇರುವ ಔಷಧಗಳು. ಇವುಗಳಿಗೆ ಎನ್​ಪಿಪಿಎ ಕಟ್ಟುನಿಟ್ಟಾದ ಗರಿಷ್ಠ ಬೆಲೆಯನ್ನು ನಿಗದಿ ಮಾಡುತ್ತದೆ. ಈ ಪಟ್ಟಿಯಲ್ಲಿರುವ ಔಷಧಗಳಿಗೆ ಉತ್ಪಾದಕರು ತಮಗಿಷ್ಟ ಬಂದ ದರ ವಿಧಿಸುವಂತಿಲ್ಲ.

ನಾನ್ ಷೆಡ್ಯೂಲ್ಡ್ ಫಾಮುಲೇಷನ್ಸ್: ಅಗತ್ಯ ಪಟ್ಟಿಯಲ್ಲಿ ಇಲ್ಲದ ಉಳಿದ ಶೇ. 75ಕ್ಕೂ ಹೆಚ್ಚು ಔಷಧಗಳು ಈ ವ್ಯಾಪ್ತಿಗೆ ಬರುತ್ತವೆ. ಇವುಗಳ ಆರಂಭಿಕ ದರವನ್ನು ಕಂಪನಿಗಳೇ ನಿರ್ಧರಿಸುತ್ತವೆ. ಆದರೆ ಕಾಯ್ದೆಯ ಪ್ರಕಾರ, ಯಾವುದೇ ಕಂಪನಿಯು ಈ ಔಷಧಗಳ ಬೆಲೆಯನ್ನು ಒಂದು ವರ್ಷದಲ್ಲಿ ಶೇ. 10ಕ್ಕಿಂತ ಹೆಚ್ಚು ಹೆಚ್ಚಿಸುವಂತಿಲ್ಲ.

ಮಾನದಂಡಗಳೇನು?

ಮಾರುಕಟ್ಟೆ ಆಧಾರಿತ ದರ: 2013ರ ಡಿಪಿಸಿಒ ನಿಯಮದ ಪ್ರಕಾರ, ಮಾರುಕಟ್ಟೆಯಲ್ಲಿ ಶೇ. 1ಕ್ಕಿಂತ ಹೆಚ್ಚು ಪಾಲು ಹೊಂದಿರುವ ಎಲ್ಲಾ ಬ್ರ್ಯಾಂಡ್​ಗಳ ಸರಾಸರಿ ಬೆಲೆಯನ್ನು ತೆಗೆದುಕೊಂಡು, ಅದಕ್ಕೆ ಚಿಲ್ಲರೆ ವ್ಯಾಪಾರಿಯ ಶೇ. 16ರಷ್ಟು ಕಮಿಷನ್ ಸೇರಿಸಿ ‘ಸೀಲಿಂಗ್ ಪ್ರೖೆಸ್’ ನಿಗದಿಪಡಿಸಲಾಗುತ್ತದೆ. ಈ ವಿಧಾನದ ವಿರುದ್ಧ ತೀವ್ರ ಟೀಕೆಗಳಿವೆ; ಏಕೆಂದರೆ ದುಬಾರಿ ಬ್ರ್ಯಾಂಡ್​ಗಳ ದರವನ್ನು ಆಧರಿಸಿ ಸರಾಸರಿ ತೆಗೆಯುವುದರಿಂದ ಸಾಮಾನ್ಯ ಬೆಲೆಯೂ ಹೆಚ್ಚಾಗುತ್ತದೆ.

ವೆಚ್ಚ ಆಧಾರಿತ ದರ: 2013ಕ್ಕಿಂತ ಮೊದಲು ಕಚ್ಚಾವಸ್ತು, ಉತ್ಪಾದನಾ ವೆಚ್ಚ ಹಾಗೂ ನಿರ್ದಿಷ್ಟ ಲಾಭಾಂಶವನ್ನು ಲೆಕ್ಕ ಹಾಕಿ ದರ ನಿಗದಿ ಮಾಡಲಾಗುತ್ತಿತ್ತು. ಸಾರ್ವಜನಿಕ ಹಿತಾಸಕ್ತಿ ಸಂಘಟನೆಗಳು ಇಂದಿಗೂ ಈ ಹಳೆಯ ವೆಚ್ಚ ಆಧಾರಿತ ವಿಧಾನವೇ ರೋಗಿಗಳಿಗೆ ಹೆಚ್ಚು ಸೂಕ್ತ ಎಂದು ವಾದಿಸುತ್ತಿವೆ.

ಯಾವ್ಯಾವ ಔಷಧ, ಉಪಕರಣ ದುಬಾರಿ?

ಕಳೆದ ಕೆಲ ವರ್ಷಗಳಲ್ಲಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಹಾಗೂ ಸಂಸದೀಯ ಸಮಿತಿಗಳು ನೀಡಿರುವ ವರದಿಗಳ ಪ್ರಕಾರ ಹಲವು ವಿಭಾಗಗಳಲ್ಲಿ ಅಗಾಧ ಪ್ರಮಾಣದ ಲಾಭಕೋರತನ ನಡೆಯುತ್ತಿದೆ.

ಕ್ಯಾನ್ಸರ್ ಔಷಧಗಳು: ಕಿಮೋಥೆರಪಿಗೆ ಬಳಸುವ ಆಂಕಾಲಜಿ ಚುಚ್ಚುಮದ್ದುಗಳ ಉತ್ಪಾದನಾ ವೆಚ್ಚ ಕೆಲವೇ -ಠಿ;100 ಇದ್ದರೂ, ಎಂಆರ್​ಪಿಯನ್ನು -ಠಿ;10,000ದಿಂದ -ಠಿ;50,000ವರೆಗೆ ಮುದ್ರಿಸಲಾಗುತ್ತದೆ. ಆಸ್ಪತ್ರೆಗಳು ಇವುಗಳನ್ನು ಕಡಿಮೆ ದರಕ್ಕೆ ಖರೀದಿಸಿ ರೋಗಿಗಳಿಗೆ ಪೂರ್ಣ ಎಂಆರ್​ಪಿಗೆ ಮಾರಿ ಭಾರಿ ಲಾಭ ಗಳಿಸುತ್ತಿವೆ.

ನೋವು ನಿವಾರಕಗಳು: ಸಾಮಾನ್ಯ ಜ್ವರ, ಸೋಂಕುಗಳಿಗೆ ನೀಡುವ ಅಜಿಥ್ರೊಮೈಸಿನ್, ಸೆಫಿಕ್ಸಿಮ್ ಮುಂತಾದ ಆಂಟಿಬಯಾಟಿಕ್​ಗಳು ಹಾಗೂ ಐವಿ ಫ್ಲೂಯಿಡ್​ಗಳ ಮೇಲೆ ಸಗಟು ದರಕ್ಕಿಂತ ಶೇ. 300ರಿಂದ 500ರಷ್ಟು ಹೆಚ್ಚು ಎಂಆರ್​ಪಿ ನಿಗದಿಪಡಿಸಲಾಗುತ್ತದೆ.

ಹೃದಯದ ಸ್ಟೆಂಟ್, ಆಥೋಪೆಡಿಕ್ ಇಂಪ್ಲಾಂಟ್: ಹಿಂದೆ -ಠಿ;15,000ದಿಂದ -ಠಿ;25,000ಕ್ಕೆ ಸಿಗುತ್ತಿದ್ದ ಕೊರೊನರಿ ಸ್ಟೆಂಟ್​ಗಳನ್ನು ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ -ಠಿ;1.5 ಲಕ್ಷದಿಂದ -ಠಿ;2 ಲಕ್ಷಕ್ಕೆ ಮಾರುತ್ತಿದ್ದವು. ಎನ್​ಪಿಪಿಎ ಮಧ್ಯಪ್ರವೇಶಿಸಿ ದರ ಮಿತಿ ಹೇರಿದ ನಂತರ ಇದು ತಗ್ಗಿತಾದರೂ, ಇತರ ಕೃತಕ ಕೀಲು ಜೋಡಣೆ ಸಲಕರಣೆಗಳಲ್ಲಿ ಇಂದಿಗೂ ಭಾರಿ ಮಾರ್ಜಿನ್ ಮುಂದುವರಿದಿದೆ.

ದೈನಂದಿನ ವೈದ್ಯಕೀಯ ಉಪಕರಣಗಳು: ಮಧುಮೇಹಿಗಳು ಬಳಸುವ ಗ್ಲೂಕೋಮೀಟರ್ ಸ್ಟ್ರಿಪ್ಸ್, ಥರ್ವಮೀಟರ್, ನೆಬ್ಯುಲೈಸರ್​ಗಳ ತಯಾರಿಕಾ ವೆಚ್ಚ ಕಡಿಮೆ ಇದ್ದರೂ, ಮಾರುಕಟ್ಟೆಯಲ್ಲಿ ಭಾರಿ ಲಾಭಾಂಶದೊಂದಿಗೆ ಮಾರಾಟವಾಗುತ್ತಿವೆ.

ಪ್ರಮುಖ ಸವಾಲುಗಳು

ಭಾರತದಲ್ಲಿ ಜನೌಷಧಿ ಕೇಂದ್ರಗಳ ಮೂಲಕ ಜೆನೆರಿಕ್ ಔಷಧಗಳನ್ನು ಶೇ. 50ರಿಂದ 90ರಷ್ಟು ಕಡಿಮೆ ಬೆಲೆಗೆ ನೀಡಲಾಗುತ್ತಿದ್ದರೂ, ಸಾರ್ವಜನಿಕರು ಇನ್ನೂ ಬ್ರ್ಯಾಂಡೆಡ್ ಔಷಧ ಖರೀದಿಸುವುದನ್ನು ಕಡಿಮೆ ಮಾಡಿಲ್ಲ. ವೈದ್ಯರು ಜೆನೆರಿಕ್ ಹೆಸರುಗಳ ಬದಲು ದುಬಾರಿ ಬ್ರ್ಯಾಂಡ್​ಗಳ ಹೆಸರನ್ನೇ ಬರೆಯುವುದು, ಔಷಧ ಕಂಪನಿಗಳು ವೈದ್ಯರಿಗೆ ನೀಡುವ ಆಮಿಷಗಳು ಮತ್ತು ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಹೊರಗಿನ ಔಷಧಗಳನ್ನು ನಿಷೇಧಿಸುವ ಪ್ರವೃತ್ತಿ ರೋಗಿಗಳ ಶೋಷಣೆಗೆ ಪ್ರಮುಖ ಕಾರಣಗಳಾಗಿವೆ. ಅತ್ಯಗತ್ಯ ಪಟ್ಟಿಯಲ್ಲಿರುವ ಔಷಧಗಳಿಗೆ ಮಾತ್ರ ಕಟ್ಟುನಿಟ್ಟಿನ ದರ ಮಿತಿ ಇರುವುದರಿಂದ, ಕಂಪನಿಗಳು ಅಲ್ಪ ಬದಲಾವಣೆ ಮಾಡಿ ಹೊಸ ಕಾಂಬಿನೇಷನ್ ಹೆಸರಿನಲ್ಲಿ ನಿಯಂತ್ರಣದಿಂದ ತಪ್ಪಿಸಿ ಕೊಳ್ಳುವ ತಂತ್ರ ಅನುಸರಿಸುತ್ತಿವೆ.

ಕರ್ನಾಟಕದಲ್ಲಿ 52 ಪಟ್ಟು ಜಾಸ್ತಿ ಬೆಲೆ

ಕರ್ನಾಟಕದಲ್ಲಿಯೂ ಪರಿಸ್ಥಿತಿ ಭಿನ್ನವಾಗೇ ನಿಲ್ಲ. ಆಸ್ಪತ್ರೆಗಳು ಒಳರೋಗಿಗಳಿಗೆ ಔಷಧ ಹಾಗೂ ವೈದ್ಯಕೀಯ ಉಪಕರಣಗಳನ್ನು ನೈಜ ಖರೀದಿ ಬೆಲೆಗಿಂತ (ಲ್ಯಾಂಡಿಂಗ್ ಕಾಸ್ಟ್) ಸುಮಾರು 52 ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿವೆ. ಈ ಸುಲಿಗೆ ವ್ಯವಹಾರವನ್ನು ಔಷಧ ಆಡಳಿತ ಇಲಾಖೆಯೇ ಪತ್ತೆ ಹಚ್ಚಿದೆ. ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಇಂತಹ 254 ಕಂಪನಿಗಳ ಪಟ್ಟಿಯನ್ನು ತಯಾರಿಸಿ, ಎನ್​ಪಿಪಿಎಗೆ ಕಳಿಸಿದ್ದಾರೆ. ಔಷಧಗಳ ನೈಜ ಪೂರೈಕೆ ದರವನ್ನು ಕಡ್ಡಾಯವಾಗಿ ಬಹಿರಂಗಪಡಿಸಲು, ಕಾಯ್ದೆಯಡಿ ತುರ್ತು ಕ್ರಮ ಕೈಗೊಳ್ಳಲು ಮತ್ತು ಬೆಲೆ ನಿಯಂತ್ರಣಕ್ಕಾಗಿ ತಜ್ಞರ ಕಾರ್ಯಪಡೆ ರಚಿಸಲು ಅವರು ಒತ್ತಾಯಿಸಿದ್ದಾರೆ.

ಇತರೆ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ?

ಔಷಧಗಳ ಬೆಲೆ ನಿಯಂತ್ರಣದ ವಿಚಾರದಲ್ಲಿ ವಿವಿಧ ದೇಶಗಳು ವಿಭಿನ್ನ ನಿಯಮಗಳನ್ನು ಅಳವಡಿಸಿಕೊಂಡಿವೆ.

ಬ್ರಿಟನ್: ಇಲ್ಲಿನ ನ್ಯಾಷನಲ್ ಹೆಲ್ತ್ ಸರ್ವೀಸ್ ಬಹುತೇಕ ನಾಗರಿಕರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಒದಗಿಸುತ್ತದೆ. ‘ವ್ಯಾಲ್ಯೂ ಬೇಸ್ಡ್ ಪ್ರೖೆಸಿಂಗ್’ ಮಾದರಿ ಇದೆ. ಹೊಸ ಔಷಧವೊಂದು ರೋಗಿಯ ಜೀವಿತಾವಧಿಯನ್ನು ಎಷ್ಟು ಹೆಚ್ಚಿಸುತ್ತದೆ ಮತ್ತು ಗುಣಮಟ್ಟವನ್ನು ಹೇಗೆ ಸುಧಾರಿಸುತ್ತದೆ ಎಂಬುದನ್ನು ‘ನೈಸ್’ ಸಂಸ್ಥೆ ವೈಜ್ಞಾನಿಕವಾಗಿ ಪರೀಕ್ಷಿಸಿ, ಕಂಪನಿಗಳೊಂದಿಗೆ ಚೌಕಾಶಿ ಮಾಡಿ ಸಮಂಜಸ ದರವನ್ನು ನಿಗದಿಪಡಿಸುತ್ತದೆ.

ಅಮೆರಿಕ: ಮುಕ್ತ ಮಾರುಕಟ್ಟೆ ನೀತಿಯಿರುವುದರಿಂದ ಸರ್ಕಾರ ಔಷಧ ಬೆಲೆಗಳನ್ನು ನೇರವಾಗಿ ನಿಯಂತ್ರಿಸುವುದಿಲ್ಲ. ಪರಿಣಾಮವಾಗಿ ಜಗತ್ತಿನಲ್ಲೇ ಅತ್ಯಂತ ದುಬಾರಿ ಔಷಧಗಳು ಇಲ್ಲಿ ಮಾರಾಟವಾಗುತ್ತವೆ. ಇತ್ತೀಚೆಗೆ ‘ಇನ್​ಫ್ಲೇಶನ್ ರಿಡಕ್ಷನ್ ಆಕ್ಟ್’ ಮೂಲಕ ಹಿರಿಯ ನಾಗರಿಕರ ಮೆಡಿಕೇರ್ ಯೋಜನೆಯಡಿ ಬರುವ ಕೆಲವೇ ಪ್ರಮುಖ ಔಷಧಗಳ ದರವನ್ನು ಇಳಿಸಲು ಅನುಮತಿ ನೀಡಲಾಗಿದೆ.

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ಫಾರ್ವಸ್ಯುಟಿಕಲ್ ಬೆನಿಫಿಟ್ಸ್ ಸ್ಕೀಮ್ ಅತ್ಯಂತ ಜನಪ್ರಿಯವಾಗಿದೆ. ಔಷಧ ಕಂಪನಿಗಳೊಂದಿಗೆ ಸರ್ಕಾರವೇ ರಾಷ್ಟ್ರಮಟ್ಟದಲ್ಲಿ ಸಗಟು ದರದ ಮಾತುಕತೆ ನಡೆಸಿ ರಿಯಾಯಿತಿ ಪಡೆಯುತ್ತದೆ. ರೋಗಿಯು ಅತ್ಯಲ್ಪ ಮೊತ್ತವನ್ನು ಪಾವತಿಸಿದರೆ, ಉಳಿದ ಬಹುಪಾಲು ವೆಚ್ಚವನ್ನು ಸರ್ಕಾರವೇ ಕಂಪನಿಗಳಿಗೆ ಭರಿಸುತ್ತದೆ.

ಜಪಾನ್ ಮತ್ತು ಫ್ರಾನ್ಸ್: ‘ರೆಫರೆನ್ಸ್ ಪ್ರೖೆಸಿಂಗ್’ ಪದ್ಧತಿ ಚಾಲ್ತಿಯಲ್ಲಿದೆ. ಒಂದೇ ವರ್ಗದ ಇತರ ದೇಶಗಳ ಬೆಲೆಗಳನ್ನು ಹೋಲಿಕೆ ಮಾಡಿ ಸರ್ಕಾರವೇ ಮಿತಿ ನಿಗದಿಪಡಿಸುತ್ತದೆ. ಜಪಾನ್​ನಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸಿ ದರವನ್ನು ಕಡಿತಗೊಳಿಸುವ ಕಠಿಣ ಕಾನೂನಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net