

ನವದೆಹಲಿ: ಹಾಕಿ ಇಂಡಿಯಾ ಚುನಾವಣೆಗೆ ಎದುರಾಗಿದ್ದ ಕಾನೂನು ಅಡೆತಡೆಗಳಿಗೆ ಇದೀಗ ಸುಪ್ರೀಂಕೋರ್ಟ್ ಮುಕ್ತಿ ನೀಡಿದ್ದು, ಡಿಸೆಂಬರ್ 5ರಂದು ನಿಗದಿಯಂತೆ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ಕೊಡುವ ಮೂಲಕ ಭಾರಿ ವಿವಾದಕ್ಕೆ ತೆರೆ ಎಳೆದಿದೆ.
ಈ ಮೊದಲು ಚುನಾವಣೆಗೆ ತಡೆ ಹೇರಿದ್ದ ಒಡಿಶಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅರುಣ್ ಪಳ್ಳಿ ಅವರನ್ನೊಳಗೊಂಡ ಪೀಠವು ರದ್ದುಗೊಳಿಸಿದೆ. ಅಲ್ಲದೆ, ಹಾಕಿ ಒಡಿಶಾಗೆ ನೀಡಲಾಗಿದ್ದ ಎರಡು ಶೋಕಾಸ್ ನೋಟಿಸ್‌ಗಳನ್ನೂ ಕೋರ್ಟ್ ವಜಾಗೊಳಿಸಿದೆ.
ಸಂಸ್ಥೆಯು ಶಾಶ್ವತ ಸದಸ್ಯತ್ವವನ್ನು ಮುಂದುವರಿಸುವಂತೆ ಆದೇಶಿಸಿರುವ ನ್ಯಾಯಾಲಯ, ನಿಯಮ ಉಲ್ಲಂಘನೆಯ ಆರೋಪದಡಿ ಹಾಕಿ ಒಡಿಶಾವನ್ನು ಸಹಾಯಕ ಸದಸ್ಯತ್ವಕ್ಕೆ ಇಳಿಸುವ ಪ್ರಸ್ತಾವನೆಯನ್ನೂ ತಳ್ಳಿಹಾಕಿದೆ. ಈ ತೀರ್ಪಿನಿಂದ ಹಾಲಿ ಅಧ್ಯಕ್ಷ ದಿಲೀಪ್ ಟಿರ್ಕಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಸಿಕ್ಕಂತಾಗಿದೆ.
ಚುನಾವಣೆ ನಡೆಯದಿದ್ದರೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (FIH)ನಿಂದ ಮಾನ್ಯತೆ ಕಳೆದುಕೊಳ್ಳುವ ಅಪಾಯವಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ ಸುಪ್ರೀಂ ಕೋರ್ಟ್, ಕ್ರೀಡೆಯ ಹಿತಾಸಕ್ತಿಗೆ ಧಕ್ಕೆಯಾಗಬಾರದು ಮತ್ತು ನಿಗದಿತ ವೇಳಾಪಟ್ಟಿಯಂತೆ ಚುನಾವಣೆ ನಡೆಯಬೇಕು ಎಂದು ಸ್ಪಷ್ಟಪಡಿಸಿದೆ. ಸದಸ್ಯ ಸಂಸ್ಥೆಗಳಿಂದ ಯಾವುದೇ ಆಕ್ಷೇಪಣೆಗಳು ಬಂದರೆ, ದೆಹಲಿ ಹೈಕೋರ್ಟ್ ಈ ಹಿಂದೆ ಸೂಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಏಕಸದಸ್ಯ ಕುಂದುಕೊರತೆ ಪರಿಹಾರ ಸಮಿತಿ ಅವುಗಳನ್ನು ಪರಿಶೀಲಿಸಲಿದೆ ಎಂದು ತಿಳಿಸಿದೆ.
ಇನ್ನೊಂದೆಡೆ, ಚುನಾವಣೆಗೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಅಷ್ಟರೊಳಗೆ ಸಂಪೂರ್ಣ ಪ್ರಕ್ರಿಯೆ ಹೇಗೆ ಪೂರ್ಣಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಅಕ್ಟೋಬರ್ 22ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಪ್ರಯತ್ನಿಸುವುದಾಗಿ ಫೆಡರೇಷನ್ ಮೂಲಗಳು ತಿಳಿಸಿವೆ. ಮುಂದಿನ ವೇಳಾಪಟ್ಟಿ ಕುರಿತು ಚುನಾವಣಾಧಿಕಾರಿ ಸುಧೀರ್ ತ್ರಿಪಾಠಿ ನಿರ್ಧಾರ ಕೈಗೊಳ್ಳಬೇಕಿದೆ.
ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಹಾಕಿ ಒಡಿಶಾ ಅಧ್ಯಕ್ಷ ದಿಲೀಪ್ ಟಿರ್ಕಿ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಚುನಾವಣಾ ಪ್ರಕ್ರಿಯೆ ಹೇಗೆ ಪೂರ್ಣಗೊಳ್ಳಲಿದೆ ಮತ್ತು ತಾವು ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿರುವ ಅವರು, ಹಾಕಿ ಒಡಿಶಾ ವಿರುದ್ಧ ಹೇರಲಾಗಿದ್ದ ಕಾನೂನುಬಾಹಿರ ಅಮಾನತು ತೆರವುಗೊಂಡಿರುವುದಕ್ಕೆ ಸಂತೋಷವಾಗಿದೆ. ಕೋರ್ಟ್ ತೀರ್ಪು ಸ್ವಾಗತಾರ್ಹ ಎಂದಿದ್ದಾರೆ.
ಹಾಕಿ ಇಂಡಿಯಾ ಚುನಾವಣೆಯ ವಿವಾದಕ್ಕೆ ಪ್ರಮುಖ ಕಾರಣವಾಗಿದ್ದು, ಹಾಕಿ ಒಡಿಶಾದ ಸದಸ್ಯತ್ವ ಮತ್ತು ಅದರ ಆಡಳಿತ ವ್ಯವಸ್ಥೆಯಲ್ಲಿನ ನಿಯಮ ಉಲ್ಲಂಘನೆಯ ಆರೋಪ. ಹಾಕಿ ಒಡಿಶಾದ 30 ಜಿಲ್ಲಾ ಘಟಕಗಳಲ್ಲಿ ಪ್ರಜಾಪ್ರಭುತ್ವದ ರೀತಿಯಲ್ಲಿ ಚುನಾವಣೆ ನಡೆದಿಲ್ಲ ಮತ್ತು ಕೆಲವು ಸರ್ಕಾರಿ ಅಧಿಕಾರಿಗಳು ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ ಎಂದು ಹಾಕಿ ಇಂಡಿಯಾ ಆರೋಪಿಸಿತ್ತು.
ಈ ಹಿನ್ನೆಲೆಯಲ್ಲಿ ಹಾಕಿ ಒಡಿಶಾಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ, ಅದರ ಶಾಶ್ವತ ಸದಸ್ಯತ್ವವನ್ನು ಸಹಾಯಕ ಸದಸ್ಯತ್ವಕ್ಕೆ ಇಳಿಸುವ ಪ್ರಸ್ತಾವನೆ ಮುಂದಿಟ್ಟಿತ್ತು. ಇದನ್ನು ಪ್ರಶ್ನಿಸಿ, ಹಾಕಿ ಒಡಿಶಾ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಹಾಕಿ ಇಂಡಿಯಾ ಚುನಾವಣೆಗೆ ತಡೆ ನೀಡಿತ್ತು. ಇದರಿಂದ ಡಿಸೆಂಬರ್ 5ರಂದು ನಡೆಯಬೇಕಿದ್ದ ಚುನಾವಣೆಗೆ ಅಡಚಣೆ ಉಂಟಾಗಿತ್ತು. ಬಳಿಕ ಹಾಕಿ ಇಂಡಿಯಾ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಇಲ್ಲಿ ಸರ್ವೋಚ್ಛ ನ್ಯಾಯಾಲಯ, ಹೈಕೋರ್ಟ್‌ನ ತಡೆಯಾಜ್ಞೆಯನ್ನು ರದ್ದುಗೊಳಿಸಿ, ಹಾಕಿ ಒಡಿಶಾದ ಶಾಶ್ವತ ಸದಸ್ಯತ್ವವನ್ನು ಮುಂದುವರಿಸುವಂತೆ ಆದೇಶಿಸಿದೆ. ಅಲ್ಲದೆ, ಎರಡು ಶೋಕಾಸ್ ನೋಟಿಸ್‌ಗಳನ್ನೂ ರದ್ದುಗೊಳಿಸಿದ್ದು, ಡಿಸೆಂಬರ್ 5ರಂದು ಚುನಾವಣೆ ನಡೆಸಲು ಹಾದಿ ಸುಗಮಗೊಳಿಸಿದೆ,(ಏಜೆನ್ಸೀಸ್).