ಅಧಿವೇಶನ ಹಾಳು ಮಾಡಲು ವಿದ್ಯಾರ್ಥಿಗಳನ್ನು ಬಳಸಿಕೊಳ್ತಿದ್ದಾರೆ: ರಾಹುಲ್ ಗಾಂಧಿ ವಿರುದ್ಧ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ | Dharmendra Pradhan

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ರಾಹುಲ್ ಗಾಂಧಿ
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ರಾಹುಲ್ ಗಾಂಧಿ
Published on
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಮತ್ತು ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಹೊರಗೆ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan), ಅಧಿವೇಶನ ಹಾಳು ಮಾಡಲು ವಿದ್ಯಾರ್ಥಿಗಳನ್ನು ಬಳಸಿಕೊಳ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗೊಂದಲ ಸೃಷ್ಟಿಸಲು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳನ್ನು ರಾಜಕೀಯ ದಾಳವಾಗಿ ಬಲಿಪಶು ಮಾಡುತ್ತಿರುವುದನ್ನು ಶೇಮ್‌ಲೆಸ್‌ ಆಗಿ ಮುಂದುವರಿಸಿದೆ. ಪ್ರಧಾನಿಯವರ ನಿವಾಸದ ಹೊರಗೆ ಧರಣಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಮತ್ತು ಭದ್ರತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಸಮಗ್ರ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ ಮೇಲೆಯೂ, ಕಾಂಗ್ರೆಸ್ ಪ್ರಜಾಪ್ರಭುತ್ವದ ಚರ್ಚೆಗಿಂತ ರಾಜಕೀಯ ನಾಟಕಕ್ಕೆ ಆದ್ಯತೆ ನೀಡಿತು. ವಿದ್ಯಾರ್ಥಿಗಳಿಗೆ ಪರಿಹಾರ ಕಂಡುಕೊಳ್ಳುವುದು ಅವರ ಉದ್ದೇಶವಾಗಿರಲಿಲ್ಲ. ಬದಲಾಗಿ ರಾಜಕೀಯಕ್ಕಾಗಿ ಗೊಂದಲ ಸೃಷ್ಟಿಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ರಾಹುಲ್ ಗಾಂಧಿಯವರಿಗೆ ಇದು ವಿದ್ಯಾರ್ಥಿಗಳ ಕುರಿತಾದ ವಿಷಯವಲ್ಲ. ಚರ್ಚೆಗೆ ಪ್ರತಿಯೊಂದು ನೈಜ ಅವಕಾಶಗಳು ತೆರೆದಿದ್ದರೂ, ಪ್ರತಿಯೊಂದರಲ್ಲೂ ಸಂಘರ್ಷವನ್ನು ಸೃಷ್ಟಿಸುವುದೇ ಅವರ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಸರ್ಕಾರವು 'ನೀಟ್' ಕುರಿತು ಚರ್ಚಿಸಲು ಮತ್ತು ಸದನದಲ್ಲಿ ನಮ್ಮ ಯುವಕರ ಪ್ರತಿಯೊಂದು ನೈಜ ಕಳಕಳಿಯನ್ನು ಪರಿಹರಿಸಲು 100% ಬದ್ಧವಾಗಿದೆ. ರಾಜಕೀಯ ಪ್ರಚಾರದಲ್ಲಿ ಸಾಧನಗಳಾಗಿ ಬಳಸಿಕೊಳ್ಳುವುದಕ್ಕಿಂತ ಉತ್ತಮವಾದದ್ದಕ್ಕೆ ಭಾರತದ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ. ಅವರಿಗೆ ಗೊಂದಲದ ಬದಲು ನಿಶ್ಚಿತತೆ, ಘೋಷಣೆಗಳ ಬದಲು ಪರಿಹಾರಗಳು ಮತ್ತು ಗಲಾಟೆಯ ಬದಲು ಜವಾಬ್ದಾರಿಯ ಅಗತ್ಯವಿದೆ. ನಾವು ನಮ್ಮ ವಿದ್ಯಾರ್ಥಿಗಳಿಗೆ ಕೇವಲ ಆಕ್ರೋಶಕ್ಕಿಂತ ಹೆಚ್ಚಿನದನ್ನು ನೀಡಬೇಕಾಗಿದೆ. ಅವರಿಗೆ ಉತ್ತರಗಳು, ಸುಧಾರಣೆಗಳು ಮತ್ತು ಹೊಣೆಗಾರಿಕೆಯನ್ನು ನೀಡಲು ಬದ್ಧರಾಗಿದ್ದೇವೆ. ಅದನ್ನೇ ಒದಗಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದಿದ್ದಾರೆ.
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಸಿಜೆಪಿ ಪ್ರತಿಭಟನಾಕಾರರ ಮೇಲಿನ ಲಾಠಿ ಚಾರ್ಜ್ ಖಂಡಿಸಿ, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಪ್ರಧಾನಿ ಮೋದಿಯವರ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ರಾತ್ರಿ 9 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net