ಪದವಿ ಮುಗಿಸಿದ ಬಡ ಕುಟುಂಬದ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್ ನೀಡುವ ಯೋಜನೆಗೆ ಸಿಎಂ ಯೋಗಿ ಕ್ಯಾಬಿನೆಟ್ ಅಸ್ತು | free scooter

ಸಿಎಂ ಯೋಗಿ ಆದಿತ್ಯನಾಥ್
ಸಿಎಂ ಯೋಗಿ ಆದಿತ್ಯನಾಥ್
Published on
ಲಖನೌ: ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ತಯಾರಿ ನಡೆಸಿರುವ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ, ಬಡ ಕುಟುಂಬದ ಪದವಿ ಮುಗಿಸಿದ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್(free scooter) ಕೊಡಲು ಮುಂದಾಗಿದೆ.
ಮಂಗಳವಾರ(ಜು. 21) ಲಖನೌದ ಸಚಿವಾಲಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಪದವಿ ಪೂರ್ಣಗೊಳಿಸುವ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್‌ಗಳನ್ನು ನೀಡುವ ರಾಣಿ ಲಕ್ಷ್ಮಿಬಾಯಿ ಸ್ಕೂಟಿ ಯೋಜನೆ ಅನುಮೋದನೆ ನೀಡಲಾಗಿದೆ.
ಈ ಯೋಜನೆ ಪ್ರಕಾರ, ವಾರ್ಷಿಕ 12 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಟರ್‌ಗಳನ್ನು ವಿತರಿಸಲಾಗುವುದು ಮತ್ತು ಪ್ರತಿ ವಿಶ್ವವಿದ್ಯಾಲಯ ಮತ್ತು ಕಾಲೇಜಿನಲ್ಲಿ ಅಗ್ರ 5% ಮಹಿಳಾ ವಿದ್ಯಾರ್ಥಿಗಳು ಮಾತ್ರ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ, ಸರ್ಕಾರವು ಸ್ಕೂಟರ್‌ಗಳನ್ನು ಮಾತ್ರವಲ್ಲದೆ ಅವುಗಳ ವಿಮೆ, ನೋಂದಣಿ, ಹೆಲ್ಮೆಟ್‌ಗಳು, ಅಗತ್ಯ ಪರಿಕರಗಳು ಮತ್ತು ಐದು ಲೀಟರ್ ಪೆಟ್ರೋಲ್ ಅನ್ನು ಸಹ ಒದಗಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಸ್ಕೂಟರ್‌ಗಳು ಪೆಟ್ರೋಲ್ ಚಾಲಿತವಾಗಿದ್ದು, ಜಿಇಎಂ ಪೋರ್ಟಲ್ ಮೂಲಕ ಖರೀದಿಸಲಾಗುವುದು. ಅಂಗವಿಕಲ ವಿದ್ಯಾರ್ಥಿನಿಯರು, ಹುತಾತ್ಮರ ಪುತ್ರಿಯರು ಮತ್ತು ನಿರ್ಗತಿಕ ಕುಟುಂಬಗಳ ಪುತ್ರಿಯರಿಗೆ ಆದಾಯ ಮಿತಿಯ ಷರತ್ತುಗಳನ್ನು ಸಡಿಲಿಸಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net