

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬುಧವಾರ(ನ. 26) ಭಾರಿ ಏರಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 2,000ಕ್ಕೂ ಹೆಚ್ಚು ಅಂಕಗಳ ಜಿಗಿತ ಕಂಡರೆ, ನಿಫ್ಟಿ 50 25,900ರ ಗಡಿ ದಾಟಿದೆ.
ಸೋಮವಾರದ ತೀವ್ರ ಕುಸಿತದ ಬಳಿಕ ಮಾರುಕಟ್ಟೆಯಲ್ಲಿ ಇಂದು ಚೇತರಿಕೆ ಕಂಡುಬಂದಿದ್ದು, ಇಂದಿನ ಏರಿಕೆ ಹೂಡಿಕೆದಾರರ ಸಂಪತ್ತಿಗೆ ಒಟ್ಟು ₹3.84 ಲಕ್ಷ ಕೋಟಿ ರೂ. ಬಂಡವಾಳ ಸೇರ್ಪಡೆಯಾಗಿದೆ. ಮತ್ತು ಬಿಎಸ್ಇ-ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ₹513 ಲಕ್ಷ ಕೋಟಿಗೆ ತಲುಪಿದೆ.
ಬುಧವಾರ ತಡಬೆಳಗಿನ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 2,028.05 ಅಂಕಗಳಷ್ಟು (ಶೇ. 2.46) ಏರಿಕೆಯಾಗಿ 84,464.54 ಕ್ಕೆ ತಲುಪಿದರೆ, ನಿಫ್ಟಿ 50 ಸೂಚ್ಯಂಕವು 570.65 ಅಂಕಗಳ (ಶೇ. 2.25) ಜಿಗಿತದೊಂದಿಗೆ 25,919.90 ಕ್ಕೆ ಏರಿತು. ಇದಕ್ಕೂ ಮೊದಲು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,382.16 ಅಂಕಗಳ ಏರಿಕೆಯೊಂದಿಗೆ 83,818.15 ಕ್ಕೆ ಮತ್ತು ನಿಫ್ಟಿ 407.60 ಅಂಕಗಳ ಮುನ್ನಡೆಯೊಂದಿಗೆ 25,758.45 ಕ್ಕೆ ತಲುಪಿದ್ದವು.
ಜಾಗತಿಕ ಮಾರುಕಟ್ಟೆಯಲ್ಲಿ ಎಐ (AI) ಸಂಬಂಧಿತ ಷೇರುಗಳ ಕುರಿತ ಆತಂಕದಿಂದ ಏರಿಳಿತ ಮುಂದುವರೆದಿದ್ದರೂ, ವಿದೇಶಿ ಬಂಡವಾಳದ ಬಲವಾದ ಒಳಹರಿವು, ಕಚ್ಚಾ ತೈಲ ಬೆಲೆ ಇಳಿಕೆ, ಪ್ರಮುಖ ಬ್ಯಾಂಕಿಂಗ್ ಷೇರುಗಳ ಖರೀದಿ ಭರಾಟೆ ಮತ್ತು ಕಂಪನಿಗಳ ಉತ್ತಮ ತ್ರೈಮಾಸಿಕ ಫಲಿತಾಂಶಗಳು ಮಾರುಕಟ್ಟೆಯ ಈ ಏರಿಕೆಗೆ ಕಾರಣವಾಗಿವೆ.
1. ಭಾರಿ ಪ್ರಮಾಣದ ವಿದೇಶಿ ನಿಧಿ ಒಳಹರಿವು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐಗಳು) ಭಾರತೀಯ ಷೇರುಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಇದು ದೇಶೀಯ ಮಾರುಕಟ್ಟೆಗಳಿಗೆ ಬಲವಾದ ಬೆಂಬಲವನ್ನು ನೀಡಿದೆ ಎನ್ನಲಾಗಿದೆ. ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಹೂಡಿಕೆದಾರರು ಸೋಮವಾರ 5,672.99 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
2. ಕಚ್ಚಾ ತೈಲ ಬೆಲೆ ಇಳಿಕೆ: ಇಂದು ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿದ್ದು, ಇದು ಕೂಡ ಭಾರತದ ಸ್ಥೂಲ ಆರ್ಥಿಕ ದೃಷ್ಟಿಕೋನವನ್ನು ಸುಧಾರಿಸಲು ಮತ್ತು ಹಣದುಬ್ಬರ ಮತ್ತು ದೇಶದ ಆಮದು ಮಸೂದೆಯ ಬಗ್ಗೆ ಕಳವಳಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 0.5% ಇಳಿಕೆಯಾಗಿ $90.97 ಕ್ಕೆ ತಲುಪಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಬ್ಯಾರೆಲ್ಗೆ 0.6% ಇಳಿಕೆಯಾಗಿ $81.58 ಕ್ಕೆ ತಲುಪಿದೆ.
3. ಡಾಲರ್ ಎದುರು ರೂಪಾಯಿ ಮೌಲ್ಯ ಜಿಗಿತ: ವಿದೇಶಿ ನಿಧಿಯ ಒಳಹರಿವು, ಮತ್ತು ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿರುವುದರಿಂದ ಇಂದು ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 23 ಪೈಸೆ ಏರಿಕೆಯಾಗಿ ಡಾಲರ್ ಎದುರು 92.62 ಕ್ಕೆ ತಲುಪಿದೆ. ಇದು ಸಹ ಮಾರುಕಟ್ಟೆ ಜಿಗಿತಕ್ಕೆ ಕಾರಣವಾಗಿದೆ.
4. ಬ್ಯಾಂಕಿಂಗ್ ಷೇರುಗಳ ಏರಿಕೆ: ಮಾರುಕಟ್ಟೆಯ ಈ ಭರ್ಜರಿ ಏರಿಕೆಗೆ ಬ್ಯಾಂಕಿಂಗ್ ಷೇರುಗಳ ಕೊಡುಗೆ ಅತಿ ಹೆಚ್ಚಾಗಿದ್ದು, ಪ್ರಮುಖ ಖಾಸಗಿ ಬ್ಯಾಂಕ್ ಷೇರುಗಳ ಭಾರಿ ಖರೀದಿಯು ಪ್ರಮುಖ ಸೂಚ್ಯಂಕಗಳನ್ನು ಮೇಲಕ್ಕೆತ್ತಿದೆ. ಎಚ್ಡಿಎಫ್ಸಿ ಬ್ಯಾಂಕ್ ಶೇ. 3.54 ರಷ್ಟು ಜಿಗಿದರೆ, ಐಸಿಐಸಿಐ ಬ್ಯಾಂಕ್ ಶೇ. 3.19, ಬಜಾಜ್ ಫೈನಾನ್ಸ್ ಶೇ. 2.65, ಆಕ್ಸಿಸ್ ಬ್ಯಾಂಕ್ ಶೇ. 2.13 ಮತ್ತು ಬಜಾಜ್ ಫಿನ್ಸರ್ವ್ ಶೇ. 2.09 ರಷ್ಟು ಏರಿಕೆ ಕಂಡಿವೆ.
5. ಕಂಪನಿಗಳ ಉತ್ತಮ ತ್ರೈಮಾಸಿಕ ಫಲಿತಾಂಶ: ಜಾಗತಿಕ ಮಾರುಕಟ್ಟೆಗಳಲ್ಲಿನ ಏರಿಳಿತಗಳ ನಡುವೆಯೂ, ದೇಶೀಯ ಕಂಪನಿಗಳ ಉತ್ತಮ ಆದಾಯವು ಭಾರತೀಯ ಷೇರುಗಳಿಗೆ ಭದ್ರ ಬುನಾದಿ ಒದಗಿಸಿದೆ. ಇದು ಮಾರುಕಟ್ಟೆ ಮೇಲೇರಲು ಕಾರಣವಾಗಿವೆ ಎಂದು ತಜ್ಞರು ಅಂದಾಜಿಸಿದ್ದಾರೆ (ಏಜೆನ್ಸೀಸ್).