ದೆಹಲಿಯ ಪೊಲೀಸ್ ಠಾಣೆ ಮುಂದೆ ಧರಣಿ; ರಾಹುಲ್ ಗಾಂಧಿ ಅರಾಜಕತೆಯ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ವಾಗ್ದಾಳಿ | BJP

ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್
ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್
Published on
ನವದೆಹಲಿ: ಜುಲೈ 20ರಂದು ನಡೆದ 'ಜೆನ್ ಜಿ' ಪ್ರತಿಭಟನೆಯ ವೇಳೆ ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡಿದ್ದ 19 ವರ್ಷದ ಸಾಹಿಲ್ ಪರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿರುವುದನ್ನು ಟೀಕಿಸಿರುವ ಆಡಳಿತರೂಢ ಬಿಜೆಪಿ(BJP), ಇದು ಅರಾಜಕತೆಯ ರಾಜಕೀಯ ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಮಾತನಾಡಿರುವ ಬಿಜೆಪಿಯ ಹಿರಿಯ ಸಂಸದ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿಯವರು ಉಲ್ಲೇಖಿಸುತ್ತಿರುವ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಅನುಮತಿ ಅಥವಾ ಪೂರ್ವ ಸೂಚನೆ ಇಲ್ಲದೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ವಿಷಯದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಉನ್ನತಾಧಿಕಾರದ ಸಮಿತಿಯನ್ನು ರಚಿಸಿದೆ. ರಾಹುಲ್ ಗಾಂಧಿಯವರೇ ನೀವು ಈ ದೇಶದ ಯಾವುದೇ ಕಾನೂನನ್ನು ಗೌರವಿಸಲು ಬಯಸುವುದಿಲ್ಲವೇ?, ಅರಾಜಕತೆಯ ರಾಜಕೀಯದಲ್ಲಿ ತೊಡಗಿದ್ದೀರಿ ಎಂದು ಆರೋಪಿಸಿದ್ದಾರೆ.

ಧರಣಿಗೆ ಕಾರಣ ಏನು?

ಜುಲೈ 20ರಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಶಿಕ್ಷಣ ಸಚಿವರ ರಾಜೀನಾಮೆ ಅಗ್ರಹಿಸಿ ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಮತ್ತು ಸಂಸತ್​ ಚಲೋ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಸಂಸತ್ತಿನತ್ತ ಪ್ರಯಾಣ ಆರಂಭಿಸಿದಾಗ ದೆಹಲಿ ಪೊಲೀಸರು ಲಾಠಿ ಚಾರ್ಜ್ ಮಾಡಿ, ಬಳಿಕ ಪೆಲೆಟ್ ಗನ್ ಬಳಸಿದ್ದರು ಎನ್ನಲಾಗಿದೆ.


ಪೆಲೆಟ್ ಗನ್​ ಬಳಕೆಯ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ರಾಹುಲ್ ಗಾಂಧಿ ಗಾಯಗೊಂಡಿರುವ 19 ವರ್ಷದ ಸಾಹಿಲ್ ಲೋಚಬ್ ಕರೆದುಕೊಂಡು ಮೊದಲು ಮಂದಿರ ಮಾರ್ಗ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ದಾಖಲಿಸುವಂತೆ ವಿನಂತಿಸಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದ ನಂತರ, ಅವರು ಡಿಸಿಪಿ(ಕೇಂದ್ರ) ಅವರನ್ನು ಭೇಟಿಯಾದರು. ಅಲ್ಲೂ ಮಾತುಕತೆ ವಿಫಲವಾದ ಬಳಿಕ ಧರಣಿ ಗಾಯಾಳು ಜೊತೆ ಸೇರಿಕೊಂಡು ಪ್ರತಿಭಟನೆ ನಡೆಸಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಪ್ರತಿಭಟನೆ ವೇಳೆ ಮಾತನಾಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮೇಲಿನಿಂದ ಬಂದ ಆದೇಶ ಬಂದಿರುವುದರಿಂದ ನಾವು ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಯುವಕನ ಮೇಲೆ ಗುಂಡು ಹಾರಿಸಬಹುದು ಆದರೆ ನ್ಯಾಯ ನೀಡಲು ನಿರಾಕರಿಸಲಾಗುತ್ತಿದೆ. ಎಫ್‌ಐಆರ್ ದಾಖಲಾಗುವವರೆಗೂ ತಾನು ಅಲ್ಲಿಂದ ಹೊರಡುವುದಿಲ್ಲ. ಎಫ್‌ಐಆರ್ ದಾಖಲಿಸಬೇಕು ಮತ್ತು ತನಿಖಾ ಅಧಿಕಾರಿಯ ಹೆಸರನ್ನು ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net