

ನವದೆಹಲಿ: ಎಸ್ಐಆರ್ ಅಕ್ರಮ ಆರೋಪ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಇಂದು(ಅ. 12) ಇಂಡಿಯಾ ಒಕ್ಕೂಟ ಮತ್ತೆ ಬೃಹತ್ ಪ್ರತಿಭಟನೆ ಆರಂಭಿಸಲಿದ್ದು, ಸುಪ್ರೀಂಕೋರ್ಟ್ಗೆ ಮೆರವಣಿಗೆ ಹಮ್ಮಿಕೊಂಡಿದೆ ಎಂದು ವರದಿಯಾಗಿದೆ.
ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿದ್ದ ಇಂಡಿಯಾ ಒಕ್ಕೂಟ ನಾಯಕರ ನಿಯೋಗ, ಜನರ ಮತದಾನದ ಹಕ್ಕುಗಳನ್ನು ರಕ್ಷಿಸುವ ನಿರಂತರ ಹೋರಾಟದ ಭಾಗವಾಗಿ, ಇಂಡಿಯಾ ಒಕ್ಕೂಟವು ಸೋಮವಾರ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ ಎಂದು ಹೇಳಿದೆ.
ಎಸ್ಐಆರ್ ಅಕ್ರಮ ಮತ್ತು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ವರೆಗೂ ಮೆರವಣಿಗೆ ನಡೆಸಿ ಸಿಜೆಐ ಸೂರ್ಯಕಾಂತ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದರು. ಆದ್ರೆ ಭಾನುವಾರ ಸಂಜೆ ಸಿಜೆಐ ಭೇಟಿಯಾಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮತ ಕಳ್ಳತನದ ಆರೋಪದ ಕುರಿತು ವಿರೋಧ ಪಕ್ಷಗಳ ಕಳವಳಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ವಿವರಿಸಲು ಮತ್ತು ಅವರ ಮಧ್ಯಪ್ರವೇಶವನ್ನು ಕೋರಲು, ತಾವು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಸಂಜೆ 4 ರಿಂದ 5 ಗಂಟೆಯ ನಡುವೆ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದರು.
ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಇದೇ ವಿಷಯಗಳು ನ್ಯಾಯಾಂಗ ಪರಿಶೀಲನೆಯ ಹಂತದಲ್ಲಿವೆ ಎಂಬ ಕಾರಣವನ್ನು ನೀಡಿ ಸಿಜೆಪಿ ಕಾಂಗ್ರೆಸ್ ನಾಯಕರ ಭೇಟಿಗೆ ನಿರಾಕರಿಸಿದ್ದಾರೆ. ಇನ್ನೂ ಈ ಕುರಿತು ಇನ್ನೊಂದು ಔಪಚಾರಿಕ ಪಿಐಎಲ್ ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಕಾಂಗ್ರೆಸ್ ನಾಯಕರಿಗೆ ಮೇಲ್ ಮಾಡಿರುವ ಸಿಜೆಐ, ಆಡಳಿತಾತ್ಮಕ ಮಟ್ಟದಲ್ಲಿ ಯಾವುದೇ ರಾಜಕೀಯ ಪಕ್ಷದ ನಿಯೋಗವನ್ನು ಈ ರೀತಿಯಾಗಿ ಭೇಟಿಯಾಗುವ ಅಧಿಕಾರ ನ್ಯಾಯಾಲಯಕ್ಕಿಲ್ಲ. ಬದಲಾಗಿ, ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡುವುದೇ ಅದರ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿದ್ದಾರೆ.
ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟ್‌ನ ಬಾಗಿಲುಗಳು ಎಲ್ಲರಿಗೂ ದಿನದ 24 ಗಂಟೆಯೂ ತೆರೆದಿರುತ್ತವೆ ಮತ್ತು ಅದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).