ಮುನೀರ್​ ಮಾಸ್ಟರ್​ ಪ್ಲಾನ್​: 12-15 ರಾಜ್ಯಗಳಾಗಿ ಪಾಕಿಸ್ತಾನದ ವಿಭಜನೆ

ಮುನೀರ್​ ಮಾಸ್ಟರ್​ ಪ್ಲಾನ್​: 12-15 ರಾಜ್ಯಗಳಾಗಿ ಪಾಕಿಸ್ತಾನದ ವಿಭಜನೆ
ಮುನೀರ್​ ಮಾಸ್ಟರ್​ ಪ್ಲಾನ್​: 12-15 ರಾಜ್ಯಗಳಾಗಿ ಪಾಕಿಸ್ತಾನದ ವಿಭಜನೆ
Published on: 

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್​ ಅಸೀಮ್​ ಮುನೀರ್​ ದೇಶದ ರಾಜಕೀಯ ಮತ್ತು ಶಾಸನ ವ್ಯವಸ್ಥೆಯ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಲು ಬೃಹತ್​ ಯೋಜನೆ ರೂಪಿಸಿದ್ದಾರೆ. ಪ್ರಸ್ತುತ ಇರುವ 4 ಪ್ರಾಂತ್ಯಗಳನ್ನು 12-15 ಸಣ್ಣ ಭಾಗಗಳಾಗಿ ವಿಂಗಡಿಸಲು ಪ್ಲಾನ್​ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಆಡಳಿತ ಸುಲಭವಾಗುತ್ತದೆ ಎಂಬುದು ಅವರ ವಾದ. ಆದರೆ, ಈ ಯೋಜನೆಯ ಹಿಂದೆ, ಷರೀಫ್​ ಮತ್ತು ಭುಟ್ಟೋ ಕುಟುಂಬಗಳ ರಾಜಕೀಯ ಪ್ರಭಾವಕ್ಕೆ ಕತ್ತರಿ ಹಾಕುವ, ಪ್ರಾದೇಶಿಕ ಸರ್ಕಾರಗಳ ಶಕ್ತಿ ಕುಗ್ಗಿಸುವ ಕುತಂತ್ರ ಅಡಗಿದೆ ಎನ್ನುತ್ತಾರೆ ಮುನೀರ್​ ವಿರೋಧಿಗಳು. ಭ್ರಷ್ಟಾಚಾರ, ಆರ್ಥಿಕ ಬಿಕ್ಕಟ್ಟು, ಜನಾಂಗೀಯ ಸಂಘರ್ಷಗಳ ನಡುವೆ ನಲುಗುತ್ತಿರುವ ಪಾಕಿಸ್ತಾನಕ್ಕೆ ರಾಜ್ಯಗಳ ಪುನರ್​ವಿಂಗಡಣೆ ಅಗತ್ಯವಿದೆಯೇ? ಇದರ ಹಿಂದಿರುವ ನಿಜವಾದ ಮಸಲತ್ತೇನು? ಇಲ್ಲಿದೆ ವಿವರ.

ಪಾಕಿಸ್ತಾನದ ಇತಿಹಾಸವನ್ನು ಗಮನಿಸಿದರೆ, ಸೇನೆಯು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ಸದಾ ತನ್ನ ಮೇಲುಗೈ ಸಾಧಿಸುತ್ತಲೇ ಬಂದಿದೆ. ಪ್ರಸ್ತುತ ಆ ರಾಷ್ಟ್ರ ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟ, ಸಾರ್ವಜನಿಕ ಅಸಮಾಧಾನ ಮತ್ತು ಪ್ರಾದೇಶಿಕ ಅಸ್ಥಿರತೆಗಳ ನಡುವೆಯೂ ಸೇನಾ ಮುಖ್ಯಸ್ಥ ಮುನೀರ್​, ರಾಜಕೀಯ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ದೇಶದ ನಾಲ್ಕು ಪ್ರಮುಖ ಪ್ರಾಂತ್ಯಗಳನ್ನು ಸಣ್ಣ ಆಡಳಿತಾತ್ಮಕ ಘಟಕಗಳಾಗಿ ವಿಭಜಿಸಲು ಮುಂದಾಗಿದ್ದಾರೆ. ಪಂಜಾಬ್​ ಮತ್ತು ಸಿಂಧ್​ ಪ್ರಾಂತ್ಯಗಳ ರಾಜಕೀಯ ಕುಟುಂಬಗಳ ಪ್ರಾಬಲ್ಯವನ್ನು ಧ್ವಂಸಗೊಳಿಸಿ, ಭವಿಷ್ಯದಲ್ಲಿ ಯಾವುದೇ ನಾಗರಿಕ ಸರ್ಕಾರವು ಸೇನೆಗೆ ಸವಾಲೊಡ್ಡದಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಪಾಕಿಸ್ತಾನದ ಆಂತರಿಕ ರಾಜಕೀಯ, ಪ್ರಾಂತ್ಯಗಳ ವಿಭಜನೆಯ ಹಿಂದಿರುವ ಮಿಲಿಟರಿ ತಂತ್ರಗಳು, ಇದರಿಂದ ರಾಜಕೀಯ ಕುಟುಂಬಗಳ ಮೇಲಾಗುವ ಪರಿಣಾಮ, ಪಾಕಿಸ್ತಾನದ ಸಾಲಬಾಧಿತ ಆರ್ಥಿಕತೆ ಮತ್ತು ಸಾಮಾನ್ಯ ಜನರ ಬದುಕಿನ ಮೇಲೆ ಇದು ಬೀರುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಈಗ ಅಲ್ಲಿನ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಸೇನಾ ಪ್ರಾಬಲ್ಯ ಹೇಗೆ ಹೆಚ್ಚುತ್ತದೆ?

ಪಾಕಿಸ್ತಾನದ ರಾಜಕೀಯದಲ್ಲಿ ಸೇನೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸದಾ ಹಸ್ತಕ್ಷೇಪ ಮಾಡುತ್ತಲೇ ಬಂದಿದೆ. ಈಗ ಪ್ರಾಂತ್ಯಗಳು ದೊಡ್ಡವಿರುವುದರಿಂದ, ಪ್ರಾದೇಶಿಕ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಸವಾಲೆಸೆಯುವಷ್ಟು ಶಕ್ತಿಶಾಲಿಯಾಗಿದ್ದಾರೆ. ಪ್ರಾಂತ್ಯಗಳ ವಿಭಜನೆಯಾದರೆ ಮುಖ್ಯವಾಗಿ 3 ಪರಿಣಾಮಗಳು ಉಂಟಾಗುತ್ತವೆ.

ಆರ್ಥಿಕ ಶಕ್ತಿ ಕುಸಿತ: ಸಣ್ಣ ಪ್ರಾಂತ್ಯಗಳಿಗೆ ಸ್ವಂತ ತೆರಿಗೆ ಸಂಗ್ರಹ ಮತ್ತು ಆರ್ಥಿಕ ಯೋಜನೆ ರೂಪಿಸುವ ಶಕ್ತಿ ಕಡಿಮೆಯಾಗುತ್ತದೆ.

ಕೇಂದ್ರದ ಮೇಲೆ ಅವಲಂಬನೆ: ಅನುದಾನ, ಭದ್ರತೆಗಾಗಿ ಸಣ್ಣ ಪ್ರಾಂತ್ಯಗಳು ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಸೇನೆಯ ಮೇಲೆಯೇ ಅವಲಂಬಿತವಾಗಬೇಕಾಗುತ್ತದೆ.

ಸೇನಾ ಕಂಟ್ರೋಲ್​ ಸುಲಭ: 15 ಸಣ್ಣ ಪ್ರಾಂತ್ಯಗಳಿದ್ದರೆ, ಅಲ್ಲಿನ ಆಡಳಿತಗಾರರನ್ನು, ಪೊಲೀಸ್​ ವ್ಯವಸ್ಥೆಯನ್ನು, ರಾಜಕಾರಣಿಗಳನ್ನು ನಿಯಂತ್ರಿಸುವುದು ಸೇನೆಗೆ ಸುಲಭವಾಗುತ್ತದೆ.

ವಿಭಜನೆಯಿಂದ ಮತ್ತಷ್ಟು ಹೊರೆ

ಹೊಸ 12-15 ಪ್ರಾಂತ್ಯಗಳನ್ನು ರಚಿಸಿದರೆ ದೇಶದ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಲಿದೆ. ಹೊಸ ವಿಧಾನಸೌಧಗಳು, ರಾಜ್ಯಪಾಲರ ಭವನಗಳು ಮತ್ತು ಸರ್ಕಾರಿ ಕಚೇರಿಗಳನ್ನು ನಿರ್ಮಿಸಬೇಕಾಗುತ್ತದೆ. ನೂರಾರು ಹೊಸ ಶಾಸಕರು, ಸಚಿವರು, ಐಎಎಸ್​/ಐಪಿಎಸ್​ ಮಾದರಿಯ ಅಧಿಕಾರಿಗಳ ಶ್ರೇಣಿಗೆ ತಗಲುವ ಭಾರಿ ವೆಚ್ಚವನ್ನು ಸರ್ಕಾರವೇ ಹೊರಬೇಕಾಗುತ್ತದೆ. ಸಾಲದ ಸುಳಿಯಲ್ಲಿರುವ ದೇಶ ಈ ಹೆಚ್ಚುವರಿ ಆಡಳಿತಾತ್ಮಕ ವೆಚ್ಚವನ್ನು ಭರಿಸಲು ಸಾಧ್ಯವೇ ಇಲ್ಲ.

ಆರ್ಥಿಕ ಬಿಕ್ಕಟ್ಟಿಗೆ ದೊಡ್ಡ ಪ್ರಾಂತ್ಯಗಳು ಕಾರಣವೇ..?

ಪಾಕಿಸ್ತಾನ ಈಗ ಇತಿಹಾಸದಲ್ಲೇ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಸರ್ಕಾರದ ಮೇಲೆ ಸಾಲದ ಹೊರೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ವಿಧಿಸಿರುವ ಕಠಿಣ ಷರತ್ತುಗಳಡಿಯಲ್ಲೇ ದೇಶವನ್ನು ನಡೆಸಬೇಕಾದ ಸ್ಥಿತಿ ಇದೆ. ಈ ಆರ್ಥಿಕ ಕುಸಿತಕ್ಕೆ ಪ್ರಾಂತ್ಯಗಳ ದೊಡ್ಡ ಗಾತ್ರವೇ ಕಾರಣವೆಂಬ ವಾದ ಕೇಳಿಬರುತ್ತಿದೆ. ಆದರೆ, ಪಾಕ್​ ಬಿಕ್ಕಟ್ಟಿಗೆ ನೈಜ ಕಾರಣಗಳು ಬೇರೆಯೇ ಇವೆ.

ಅತಿಯಾದ ಮಿಲಿಟರಿ ವೆಚ್ಚ: ಪಾಕಿಸ್ತಾನದ ಬಜೆಟ್​ನ ಬಹುಪಾಲು ಹಣವು ಸೇನೆ, ಶಸ್ತ್ರಾಸ್ತ್ರ ಮತ್ತು ರಕ್ಷಣಾ ವಲಯಕ್ಕೇ ವೆಚ್ಚವಾಗುತ್ತಿದೆ.

ಭ್ರಷ್ಟಾಚಾರ, ಆಡಳಿತ ವೈಫಲ್ಯ: ಸರ್ಕಾರಿ ಸಂಸ್ಥೆಗಳಲ್ಲಿನ ಭ್ರಷ್ಟಾಚಾರ, ತೆರಿಗೆ ಸಂಗ್ರಹ ಕೊರತೆ ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ ಆರ್ಥಿಕತೆ ಜರ್ಜರಿತವಾಗಿದೆ.

ಅನಿಯಂತ್ರಿತ ಸಾಲ: ಚೀನಾ ಸೇರಿದಂತೆ ಹಲವು ದೇಶಗಳಿಂದ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ಸಾಲವನ್ನು ಮರುಪಾವತಿಸಲಾಗದೆ ದೇಶ ದಿವಾಳಿಯ ಅಂಚಿನಲ್ಲಿದೆ.

ಷರೀಫ್-ಭುಟ್ಟೋ ಸಾಮ್ರಾಜ್ಯಗಳಿಗೆ ಧಕ್ಕೆ

ಪಾಕಿಸ್ತಾನದ ರಾಜಕೀಯ ಮುಖ್ಯವಾಗಿ ನವಾಜ್​ ಷರೀಫ್​ ಅವರ ಪಾಕಿಸ್ತಾನ್​ ಮುಸ್ಲಿಂ ಲೀಗ್​-ನವಾಜ್​ (ಪಿಎಂಎಲ್​-ಎನ್​) ಮತ್ತು ಬಿಲಾವಲ್​ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್​ ಪೀಪಲ್ಸ್​ ಪಾರ್ಟಿ (ಪಿಪಿಪಿ) ಸುತ್ತಲೇ ಸುತ್ತುತ್ತಿರುತ್ತದೆ. ಪಂಜಾಬ್​ ಪ್ರಾಂತ್ಯ ಷರೀಫ್​ ಕುಟುಂಬದ ಭದ್ರಕೋಟೆ. ಅಲ್ಲಿನ ಬೃಹತ್​ ಜನಸಂಖ್ಯೆ ಮತ್ತು ಅಲ್ಲಿನ ಆರ್ಥಿಕ ಸಂಪನ್ಮೂಲಗಳು ಪಿಎಂಎಲ್​-ಎನ್​ಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಅತಿದೊಡ್ಡ ಬಲ ನೀಡುತ್ತವೆ. ಸಿಂಧ್​ ಪ್ರಾಂತ್ಯದಲ್ಲಿ ಭುಟ್ಟೋ ಕುಟುಂಬದ ಹಿಡಿತ ಬಲವಾಗಿದೆ. ಕರಾಚಿ ಮತ್ತು ಗ್ರಾಮೀಣ ಸಿಂಧ್​ ಭಾಗಗಳಲ್ಲಿ ಪಿಪಿಪಿ ಅಪಾರ ಪ್ರಭಾವ ಹೊಂದಿದೆ. ಈ ಬೃಹತ್​ ಪ್ರಾಂತ್ಯಗಳನ್ನು ವಿಭಜಿಸಿದರೆ, ಎರಡೂ ಕುಟುಂಬಗಳ ಹಿಡಿತ ಸಡಿಲಗೊಳ್ಳುತ್ತದೆ. ಉದಾಹರಣೆಗೆ, ಪಂಜಾಬನ್ನು ದಕ್ಷಿಣ ಪಂಜಾಬ್​, ಮಧ್ಯ ಪಂಜಾಬ್​ ಎಂದು ವಿಂಗಡಿಸಿದರೆ, ಷರೀಫ್​ ಕುಟುಂಬ ಇವೆರಡರ ಪೈಕಿ ಒಂದಕ್ಕೆ ಸೀಮಿತಗೊಳ್ಳುತ್ತದೆ. ಅದೇ ರೀತಿ, ಸಿಂಧ್​ಅನ್ನು ವಿಭಜಿಸಿದರೆ ಭುಟ್ಟೋ ಕುಟುಂಬದ ಸಾಂಪ್ರದಾಯಿಕ ವೋಟ್​ ಬ್ಯಾಂಕ್​ ವಿಭಜನೆಯಾಗುತ್ತದೆ. ನಂತರ, ಯಾವುದೇ ಒಂದು ಪಕ್ಷ ದೇಶಾದ್ಯಂತ ಪೂರ್ಣ ಬಹುಮತ ಪಡೆಯಲು ಆಗುವುದಿಲ್ಲ. ಪ್ರತಿಯೊಂದು ಸಣ್ಣ ಪ್ರಾಂತ್ಯದಲ್ಲೂ ಚಿಕ್ಕಪುಟ್ಟ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಳ್ಳುತ್ತವೆ. ಅಂತಿಮವಾಗಿ, ಕೇಂದ್ರದಲ್ಲಿ ಸರ್ಕಾರ ರಚಿಸಲು ಎಲ್ಲರೂ ಸೇನೆಯನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ.

ಹಿಂಸಾಚಾರ ಹೆಚ್ಚಳಕ್ಕೆ ನಾಂದಿ

ಪ್ರಾಂತ್ಯಗಳ ವಿಭಜನೆಯಿಂದ ಪ್ರಾದೇಶಿಕ ಮತ್ತು ಜನಾಂಗೀಯ ಅಸಮಾಧಾನ ಹೆಚ್ಚಾಗುವ ಅಪಾಯವಿದೆ.

ಬಲೂಚಿಸ್ತಾನ್​ ಬಿಕ್ಕಟ್ಟು: ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಬಲೂಚಿಸ್ತಾನದಲ್ಲಿ ಬಲೂಚ್​ ಬಂಡುಕೋರರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ದಶಕಗಳಿಂದಲೂ ಹೋರಾಡುತ್ತಿದ್ದಾರೆ. ಬಲೂಚ್​ ಪ್ರಾಂತ್ಯವನ್ನು ತುಂಡರಿಸಲು ಯತ್ನಿಸಿದರೆ, ಸ್ಥಳೀಯರು ಇದನ್ನು ತಮ್ಮ ಅಸ್ಮಿತೆಯ ಮೇಲಿನ ದಾಳಿ ಎಂದು ಭಾವಿಸುತ್ತಾರೆ. ಇದು ಬಲೂಚಿಸ್ತಾನ್​ ಲಿಬರೇಶನ್​ ಆರ್ಮಿಯಂತಹ (ಬಿಎಲ್​ಎ) ಸಂಘಟನೆಗಳ ಹೋರಾಟ, ಹಿಂಸಾಚಾರ ಮತ್ತಷ್ಟು ಹೆಚ್ಚಾಗುತ್ತದೆ.

ಖೈಬರ್​ ಪಖ್ತುಂಖ್ವಾ: ಈ ಪ್ರಾಂತ್ಯದಲ್ಲಿ ಪಷ್ತೂನ್​ ಜನಾಂಗದವರು ಹೆಚ್ಚಾಗಿದ್ದಾರೆ. ವಿಭಜನೆಯು ಪಷ್ತೂನ್​ ರಾಷ್ಟ್ರೀಯತಾವಾದಿಗಳನ್ನು ಕೆರಳಿಸುತ್ತದೆ. ಅಲ್ಲದೆ, ತೆಹ್ರಿಕ್​-ಇ-ತಾಲಿಬಾನ್​ ಪಾಕಿಸ್ತಾನ್​ (ಟಿಟಿಪಿ) ಮತ್ತಿತರ ಉಗ್ರಗಾಮಿ ಸಂಘಟನೆಗಳು ಆಡಳಿತದ ಈ ಗೊಂದಲವನ್ನು ಬಳಸಿಕೊಂಡು ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತವೆ.

ಜನರ ಬದುಕು ಬದಲಾಗುತ್ತಾ?

ಪ್ರಾಂತ್ಯಗಳ ವಿಭಜನೆಯಿಂದ ಜನರ ಜೀವನಮಟ್ಟ ಸುಧಾರಿಸುತ್ತದೆಯೇ ಎಂಬ ಪ್ರಶ್ನೆಗೂ ಉತ್ತರ ಭರವಸೆದಾಯಕವಾಗಿಲ್ಲ. ಸಾಮಾನ್ಯ ಜನರಿಗೆ ಇಂದು ಬೇಕಿರುವುದು- ಅಗ್ಗದ ದರದಲ್ಲಿ ಆಹಾರ ಧಾನ್ಯ, ಮೂಲಭೂತ ಅಗತ್ಯಗಳು, ಉದ್ಯೋಗಾವಕಾಶ, ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯ ಮತ್ತು ಸುರಕ್ಷಿತ ವಾತಾವರಣ. ಪ್ರಾಂತ್ಯಗಳನ್ನು ಹೆಚ್ಚಿಸುವುದರಿಂದ ತಳಮಟ್ಟದ ಜನರಿಗೆ ಈ ಸೌಲಭ್ಯಗಳು ತಕ್ಷಣವೇ ಸಿಗುವುದಿಲ್ಲ. ನೂತನ ಆಡಳಿತ ಕೇಂದ್ರಗಳ ಸ್ಥಾಪನೆಗೆ ಹಲವು ವರ್ಷ ಕಾಲಾವಕಾಶ ಬೇಕು. ಬಿಲಿಯನ್​ಗಟ್ಟಲೆ ಹಣವೂ ಬೇಕು. ಸದ್ಯದ ಆರ್ಥಿಕ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ.

ಭವಿಷ್ಯದ ರಾಜಕೀಯ ಹೇಗಿರಬಹುದು?

ಅಸೀಮ್​ ಮುನೀರ್​ ಮಾಸ್ಟರ್​ಪ್ಲಾನ್​ ಜಾರಿಯಾದರೆ, ಪಾಕಿಸ್ತಾನ ಸಂಪೂರ್ಣವಾಗಿ ಮಿಲಿಟರಿ ಆಡಳಿತಕ್ಕೊಳಪಟ್ಟ ದೇಶವಾಗಿ ಬದಲಾಗಲಿದೆ.

ಸಂಸತ್ತಿನ ಅಧಿಕಾರಕ್ಕೆ ಕತ್ತರಿ: ಪ್ರಬಲ ಪ್ರಾದೇಶಿಕ ನಾಯಕರೇ ಇಲ್ಲದಂತಾದರೆ, ಸಂಸತ್ತು ಕೂಡ ಸೇನೆಯ ನಿರ್ದೇಶನಗಳಂತೆ ನಡೆಯುವ ಕೈಗೊಂಬೆಯಾಗುತ್ತದೆ.

ನ್ಯಾಯಾಂಗ, ಮಾಧ್ಯಮದ ಗತಿ?: ರಾಜಕೀಯ ವ್ಯವಸ್ಥೆ ಛಿದ್ರಗೊಂಡಾಗ, ನ್ಯಾಯಾಂಗ ಮತ್ತು ಮಾಧ್ಯಮಗಳ ಮೇಲೆ ಸೇನೆ ಸುಲಭವಾಗಿ ಒತ್ತಡ ಹೇರಲು ಸಾಧ್ಯವಾಗುತ್ತದೆ.

ಸೇನೆಗೆ ಅನಿಯಂತ್ರಿತ ಅಧಿಕಾರ

ದೇಶದ ಆಂತರಿಕ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ನೀತಿಗಳು ಸಂಪೂರ್ಣವಾಗಿ ಸೇನೆಯಿಂದಲೇ ನಿಯಂತ್ರಿಸಲ್ಪಡುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net