ಎದೆಹಾಲು ಉಣಿಸುವಿಕೆ ತೀವ್ರ ಕುಸಿತ: ಅಸಂಘಟಿತ ಮಹಿಳೆಯರಿಗೂ ವೇತನ ಸಹಿತ ರಜೆ ನೀಡಲು ಶಶಿ ತರೂರ್ ಆಗ್ರಹ! | Breast Feeding Rates

Breast Feeding Rates | ಅಸಂಘಟಿತ ಮಹಿಳೆಯರಿಗೂ ವೇತನ ಸಹಿತ ರಜೆ ನೀಡಲು ಶಶಿ ತರೂರ್ ಆಗ್ರಹ!
Breast Feeding Rates | ಅಸಂಘಟಿತ ಮಹಿಳೆಯರಿಗೂ ವೇತನ ಸಹಿತ ರಜೆ ನೀಡಲು ಶಶಿ ತರೂರ್ ಆಗ್ರಹ!
Published on
ನವದೆಹಲಿ: ಭಾರತದಲ್ಲಿ ಆರು ತಿಂಗಳೊಳಗಿನ ಶಿಶುಗಳಿಗೆ ತಾಯಂದಿರು ಎದೆಹಾಲು ಉಣಿಸುವ ಪ್ರಮಾಣದಲ್ಲಿ ಭಾರಿ ಕುಸಿತ ಕಂಡುಬರುತ್ತಿರುವ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಶನಿವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಹೆರಿಗೆಯಾದ ಕೆಲವೇ ವಾರಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ಕೆಲಸದ ಸ್ಥಳಗಳಿಗೆ ಹಿಂತಿರುಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸದ ತರೂರ್, ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಅನ್ನಪೂರ್ಣ ದೇವಿ ಅವರನ್ನು ಟ್ಯಾಗ್​ ಮಾಡಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಇತ್ತೀಚಿನ ದತ್ತಾಂಶಗಳನ್ನು ಉಲ್ಲೇಖಿಸಿದ್ದಾರೆ.

ಎನ್‌ಎಫ್‌ಹೆಚ್‌ಎಸ್‌-6 ವರದಿಯ ಪ್ರಮುಖ ಅಂಶಗಳು ಹೀಗಿವೆ!

ದೇಶದ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆಗಳ ಪ್ರಮಾಣ ಶೇ. 90.6 ಕ್ಕೆ ಏರಿಕೆಯಾಗಿದ್ದರೂ, ಆರು ತಿಂಗಳೊಳಗಿನ ಮಕ್ಕಳಿಗೆ ಸಂಪೂರ್ಣವಾಗಿ ಎದೆಹಾಲು ನೀಡುವ ಪ್ರಮಾಣ ಶೇ. 63.7 ರಿಂದ ಶೇ. 55.8ಕ್ಕೆ ಕುಸಿದಿದೆ. ಈ ದೊಡ್ಡ ಮಟ್ಟದ ಕುಸಿತವು ಗ್ರಾಮೀಣ ಭಾಗಗಳಲ್ಲಿ, ಅದರಲ್ಲೂ ಉತ್ತರ ಪ್ರದೇಶ ಮತ್ತು ಹರಿಯಾಣದಂತಹ ಪ್ರಮುಖ ರಾಜ್ಯಗಳಲ್ಲಿ ಅತ್ಯಂತ ಹೆಚ್ಚಾಗಿ ಕಂಡುಬಂದಿದೆ.
ಈ ಅಂಕಿಅಂಶವು ಸರ್ಕಾರಿ ನೀತಿಗಳು ಮತ್ತು ವಾಸ್ತವ ಸ್ಥಿತಿಯ ನಡುವಿನ ವ್ಯತ್ಯಾಸವನ್ನು ಬಯಲುಗೊಳಿಸಿದೆ. ಭಾರತದ ಅಸಂಘಟಿತ ವಲಯದಲ್ಲಿ ಸುಮಾರು 16 ಕೋಟಿಗೂ ಹೆಚ್ಚು ಮಹಿಳೆಯರು ದುಡಿಯುತ್ತಿದ್ದಾರೆ. ವೇತನ ಸಹಿತ ಹೆರಿಗೆ ರಜೆ ಅಥವಾ ಉದ್ಯೋಗ ಭದ್ರತೆ ಇಲ್ಲದ ಕಾರಣ, ಸಾವಿರಾರು ದುಡಿಯುವ ತಾಯಂದಿರು ಹೆರಿಗೆಯಾದ ಕೆಲವೇ ವಾರಗಳಲ್ಲಿ ಜೀವನ ನಡೆಸಲು ಮತ್ತೆ ಕೆಲಸಕ್ಕೆ ಮರಳುವಂತಾಗಿದೆ. ಇದರಿಂದ ಮಗುವಿನ ಬೆಳವಣಿಗೆಗೆ ಅತ್ಯಗತ್ಯವಾದ ಆರು ತಿಂಗಳ ಎದೆಹಾಲು ಉಣಿಸುವಿಕೆ ಅಸಾಧ್ಯವಾಗುತ್ತಿದೆ ಎಂದು ತರೂರ್ ವಿವರಿಸಿದ್ದಾರೆ.
ಸ್ತನ್ಯಪಾನ ಪ್ರಮಾಣ ಕುಸಿಯಲು ಆರೋಗ್ಯ ಕ್ಷೇತ್ರ ಮತ್ತು ವಾಣಿಜ್ಯ ವಲಯದ ರಚನಾತ್ಮಕ ಸವಾಲುಗಳೇ ಕಾರಣ ಎಂದಿರುವ ಕಾಂಗ್ರೆಸ್ ನಾಯಕ, ದೇಶದಲ್ಲಿ ಸಿ-ಸೆಕ್ಷನ್ (ಸಿಸೇರಿಯನ್) ಹೆರಿಗೆಗಳ ಸಂಖ್ಯೆ ಹೆಚ್ಚಿರುವುದು ಮತ್ತು ಶಿಶು ಆಹಾರ/ಹಾಲಿನ ಪರ್ಯಾಯ ಉತ್ಪನ್ನಗಳ (Infant Formula Substitutes) ಆಕ್ರಮಣಕಾರಿ ಮಾರುಕಟ್ಟೆ ಪ್ರಚಾರವೂ ಇದಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಪ್ರಶ್ನೆ!

ಎದೆಹಾಲು ಮಗುವಿನ ಅಪೌಷ್ಟಿಕತೆ ಮತ್ತು ಶಿಶು ಮರಣದ ವಿರುದ್ಧದ ಪ್ರಮುಖ ಕವಚವಾಗಿದೆ. ಇದಕ್ಕೆ ಪರಿಹಾರವಾಗಿ ಸರ್ಕಾರ ಮತ್ತು ಮಾಲೀಕರು ಅಸಂಘಟಿತ ವಲಯದ ಮಹಿಳೆಯರಿಗೂ ಆರ್ಥಿಕ ಹೆರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು. ಶಿಶು ಹಾಲಿನ ಬದಲಿ ಉತ್ಪನ್ನಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ನಂತರದ ಸ್ತನ್ಯಪಾನ ಸಲಹೆಯನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಿದೆಯೇ..? ಎಂದು ತರೂರ್ ಪ್ರಶ್ನಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net