'45 ಸಾಂಪ್ರದಾಯಿಕ ಭತ್ತದ ತಳಿಗಳ ಸಂರಕ್ಷಕ', ಪದ್ಮಶ್ರೀ ಪುರಸ್ಕೃತ ರೈತ ಚೆರುವಯಲ್ ರಾಮನ್ ನಿಧನ | Cheruvayal Raman

ದಶಕಗಳಿಂದ ಆಳವಾಗಿ ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದ ರಾಮನ್​, ಕೃಷಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಅಪಾರ ಕೊಡುಗೆ ನೀಡಿದ್ದಾರೆ.
Cheruvayal Raman
'45 ಸಾಂಪ್ರದಾಯಿಕ ಭತ್ತದ ತಳಿಗಳ ಸಂರಕ್ಷಕ', ಪದ್ಮಶ್ರೀ ಪುರಸ್ಕೃತ ರೈತ ಚೆರುವಯಲ್ ರಾಮನ್ ನಿಧನ
Published on: 

ತಿರುವನಂತಪುರಂ: ಕೇರಳಂನಲ್ಲಿ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ಕೃಷಿಗೆ ಅಪಾರ ಸೇವೆ ಸಲ್ಲಿಸಿದ್ದ ಪದ್ಮಶ್ರೀ ಪ್ರಶಸ್ತಿ ವಿಜೇತ ಹಿರಿಯ ಬುಡಕಟ್ಟು ರೈತ ಚೆರುವಯಲ್ ರಾಮನ್ (74, Cheruvayal Raman) ಅವರು ಬುಧವಾರ ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಯನಾಡಿನ ಮಾನಂತವಾಡಿಯ ಕಮ್ಮನಂ ನಿವಾಸಿಯಾಗಿದ್ದ ರಾಮನ್ ಅವರು, ಅಳಿವಿನಂಚಿನಲ್ಲಿದ್ದ 45ಕ್ಕೂ ಹೆಚ್ಚು ದೇಶಿಯ ಭತ್ತದ ತಳಿಗಳನ್ನು ರಕ್ಷಿಸುವ ಮೂಲಕ ದೇಶಾದ್ಯಂತ ಖ್ಯಾತಿ ಪಡೆದಿದ್ದರು. ದಶಕಗಳಿಂದ ಆಳವಾಗಿ ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದ ರಾಮನ್​, ಕೃಷಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಅಪಾರ ಕೊಡುಗೆ ನೀಡಿದ್ದಾರೆ.

ಕೃಷಿಯಲ್ಲಿ ಮಹತ್ತರ ಸಾಧನೆ

ಜೂನ್ 6, 1952ರಂದು ತಳಕ್ಕರ ಚೆರಿಯಲ್ಲಿ ಜನಿಸಿದ ಅವರು, ಕಮ್ಮನಂ ನವೋದಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, 10ನೇ ವಯಸ್ಸಿನಿಂದಲೇ ಕೃಷಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ವ್ಯವಸಾಯದ ಮೇಲಿನ ಅತಿಯಾದ ಒಲವಿನಿಂದಾಗಿ ಅವರು 1969ರಲ್ಲಿ ಕಣ್ಣೂರು ಡಿಎಂಒ ಕಚೇರಿಯಲ್ಲಿ ಸಿಕ್ಕ ಸರ್ಕಾರಿ ಉದ್ಯೋಗವನ್ನೇ ತಿರಸ್ಕರಿಸಿದ್ದರು. ಇನ್ನು, ಕುರಿಚ್ಯ ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಮನ್, ಭತ್ತದ ಜತೆಗೆ ಸಾಂಪ್ರದಾಯಿಕ ತರಕಾರಿಗಳು, ಔಷಧಿ ಗುಣವುಳ್ಳ ಸಸಿಗಳು ಮತ್ತು ವಿವಿಧ ಜಾತಿಯ ಮರಗಳನ್ನು ತಮ್ಮ ಜಮೀನಿನಲ್ಲಿ ಬೆಳೆದು ಸಂರಕ್ಷಿಸಿದ್ದರು.

ಪ್ರಶಸ್ತಿಗಳ ಗರಿ

2011ರಲ್ಲಿ ಹೈದರಾಬಾದ್‌ನಲ್ಲಿ ನಡೆದ 11 ದೇಶಗಳ ಅಂತಾರಾಷ್ಟ್ರೀಯ ಜೀವವೈವಿಧ್ಯ ಸಂರಕ್ಷಣಾ ಸಮ್ಮೇಳನದಲ್ಲಿ ರಾಮನ್ ಅವರು ಕೇರಳದ ರೈತ ಸಮುದಾಯವನ್ನು ಪ್ರತಿನಿಧಿಸಿದ್ದರು. ದೇಶಿ ಸಸ್ಯ ತಳಿಗಳ ಸಂರಕ್ಷಣೆ ಮತ್ತು ಪರಿಸರಸ್ನೇಹಿ ಕೃಷಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2023ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಕ್ಕೂ ಮುನ್ನ 2016ರಲ್ಲಿ ಅವರಿಗೆ 'ರಾಷ್ಟ್ರೀಯ ಸಸ್ಯ ಜೀನೋಮ್ ಸೇವರ್ ಪ್ರಶಸ್ತಿ' ಲಭಿಸಿತು.

Also Read
ರಾತ್ರೋ ರಾತ್ರಿ ಬದಲಾಯ್ತು ಈಕೆಯ ಅದೃಷ್ಟ! 2 ಕೋಳಿ ಕೇಳಿದ್ದ ಅನಾಥ ಯುವತಿಯ ಮದುವೆಗೆ ಹರಿದುಬಂತು ಜನಸಾಗರ | Orphaned Wedding
Cheruvayal Raman

ಚೆರುವಯಲ್ ರಾಮನ್ ಅವರ ನಿಧನ ಸುದ್ದಿ ತಿಳಿದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮಾತನಾಡಿ, "ರಾಮನ್ ಅವರು ವಯನಾಡಿನ ಕೃಷಿ ಪರಂಪರೆಯ ನಿಜವಾದ ರಕ್ಷಕರಾಗಿದ್ದರು ಮತ್ತು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಿದ್ದರು. ಅವರು ಸಂರಕ್ಷಿಸಿರುವ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದೇ ಅವರಿಗೆ ಸಲ್ಲಿಸುವ ಅತ್ಯುತ್ತಮ ಗೌರವ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net