ಯುಪಿ ಚುನಾವಣೆ ಟಿಕೆಟ್​ ಹಗ್ಗಜಗ್ಗಾಟ: 200 ಸೀಟು ಕೇಳಿದ ಕಾಂಗ್ರೆಸ್‌ಗೆ ಸಮಾಜವಾದಿ ಪಕ್ಷ ನೀಡಿದ ಆಫರ್​ ಎಷ್ಟು ಗೊತ್ತಾ..? | Uttar Pradesh Elections

ಲಖನೌ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ (Uttar Pradesh Assembly Elections) ದಿನಗಳು ಹತ್ತಿರವಾಗುತ್ತಿದ್ದಂತೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಕಗ್ಗಂಟು ತೀವ್ರ ಸ್ವರೂಪ ಪಡೆದುಕೊಂಡಿದೆ.
ಕೈ ಗೆಲುವಿನ ಸಾಮರ್ಥ್ಯ ಪ್ರಶ್ನಿಸಿದ್ರಾ ಅಖಿಲೇಶ್​...?
ಕೈ ಗೆಲುವಿನ ಸಾಮರ್ಥ್ಯ ಪ್ರಶ್ನಿಸಿದ್ರಾ ಅಖಿಲೇಶ್​...?
Published on: 

ಲಖನೌ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ (Uttar Pradesh Assembly Elections) ದಿನಗಳು ಹತ್ತಿರವಾಗುತ್ತಿದ್ದಂತೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಕಗ್ಗಂಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂದಿನ ಚುನಾವಣೆಗಳ ಸಾಧನೆ ಮತ್ತು ಮತಗಳಿಕೆ ಪ್ರಮಾಣವನ್ನು ಉಲ್ಲೇಖಿಸಿರುವ ಸಮಾಜವಾದಿ ಪಕ್ಷವು, ಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ 100 ಕ್ಕಿಂತ ಕಡಿಮೆ ಸೀಟುಗಳನ್ನು ಮಾತ್ರ ಬಿಟ್ಟುಕೊಡಲು ಗಂಭೀರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 6 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಹೊಸ ಉತ್ಸಾಹದಲ್ಲಿರುವ ಕಾಂಗ್ರೆಸ್, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಸ್​​ಪಿಗೆ ಸಮಾನ ಪಾಲು ಕೇಳುತ್ತಿದೆ. ವಿಧಾನಸಭಾ ಕ್ಷೇತ್ರವಾರು ತಮ್ಮ ಸಂಘಟನೆ ಚೆನ್ನಾಗಿರುವ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿರುವ ಕೈ ನಾಯಕರು, ರಾಜ್ಯದಲ್ಲಿ ಬರೋಬ್ಬರಿ 200 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಪ್ರಬಲ ಪ್ರಾದೇಶಿಕ ಶಕ್ತಿಯಾಗಿರುವ ಸಮಾಜವಾದಿ ಪಕ್ಷ ಮಾತ್ರ ಸಿಂಹಪಾಲ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಪಟ್ಟು ಹಿಡಿದಿದೆ. ಎಸ್‌ಪಿ ಮೂಲಗಳ ಪ್ರಕಾರ, ಕಾಂಗ್ರೆಸ್‌ಗೆ ಕೇವಲ 60 ರಿಂದ 70 ರಷ್ಟು ಸೀಟುಗಳನ್ನು ಮಾತ್ರ ನೀಡಲು ಆ ಪಕ್ಷವು ಚಿಂತನೆ ನಡೆಸಿದೆ ಎನ್ನಲಾಗಿದ್ದು, ಈ ಕುರಿತು ಅಂತಿಮ ತೀರ್ಮಾನ ಹಾಗೂ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

ಇದನ್ನೂ ಓದಿ:ಉತ್ತರ ಪ್ರದೇಶ ಚುನಾವಣೆ ಸಿದ್ಧತೆ: 150 ಕ್ಷೇತ್ರಗಳಿಗೆ ಕಾಂಗ್ರೆಸ್ ಬೇಡಿಕೆ, ಸೀಟು ಹಂಚಿಕೆ ಬಗ್ಗೆ ಅಖಿಲೇಶ್ ಯಾದವ್​ ಹೇಳೋದೇ ಬೇರೆ! | Congress-SP Alliance

ಮತ್ತೊಂದೆಡೆ, ಮೈತ್ರಿಕೂಟದ ಮಾತುಕತೆ ವಿಳಂಬವಾದರೆ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆ ನಡೆಸಲು ಸೂಕ್ತ ಸಮಯ ಸಿಗುವುದಿಲ್ಲ ಎಂಬ ಆತಂಕ ಕಾಂಗ್ರೆಸ್‌‌ನಲ್ಲಿದೆ. ಈ ಕಾರಣಕ್ಕಾಗಿ ನವೆಂಬರ್ 15 ರೊಳಗೆ ಸೀಟು ಹಂಚಿಕೆ ಮಾತುಕತೆಯನ್ನು ಅಂತಿಮಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ಈ ಇಡೀ ಪ್ರಕ್ರಿಯೆಯ ಮುಂಚೂಣಿಯಲ್ಲಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ರಾಜ್ಯದ ಹಿರಿಯ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಜನರಿಗೆ ಮನವರಿಕೆ ಮಾಡುತ್ತೇವೆ...

ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಈ ಹಗ್ಗಜಗ್ಗಾಟ ಮುಂದುವರಿದಿರುವುದರ ನಡುವೆಯೇ, ಕಳೆದ ಹತ್ತು ವರ್ಷದಿಂದ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯನ್ನು ಒಗ್ಗಟ್ಟಿನಿಂದ ಸೋಲಿಸುವುದೇ ಮೈತ್ರಿಕೂಟದ ಪ್ರಮುಖ ಗುರಿ ಎಂದು ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟ ಇನ್ನಷ್ಟು ಬಲಗೊಳ್ಳಬೇಕು. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುವ ನಮ್ಮ ಮುಂದಿರುವ ಗುರಿಯಾಗಿದ್ದು, ಇದರ ಅಗತ್ಯತೆಯನ್ನು ನಾವು ಜನರಿಗೆ ಮನವರಿಕೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಮೈತ್ರಿಕೂಟವು ಅತ್ಯಂತ ಪರಿಣಾಮಕಾರಿಯಾಗಿ ಮುಂದೆ ಸಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯು ಪ್ರಮುಖವಾಗಿ ಆಡಳಿತಾರೂಢ ಬಿಜೆಪಿ ಹಾಗೂ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟದ ನಡುವಿನ ನೇರ ಹಣಾಹಣಿಯಂತೆ ಬಿಂಬಿತವಾಗಿದೆ. ಇದರೊಂದಿಗೆ ರಾಷ್ಟ್ರೀಯ ಲೋಕ ದಳ (RLD), ಅಪ್ನಾ ದಳ (ಸೋನೆಲಾಲ್), ನಿಶಾದ್ ಪಕ್ಷ ಮತ್ತು ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ (SBSP) ಮುಂತಾದ ಸಣ್ಣ ಪುಟ್ಟ ಎನ್‌ಡಿಎ (NDA) ಮಿತ್ರಪಕ್ಷಗಳು ಕೂಡ ಚುನಾವಣೆಯ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದ್ದು, ರಾಜ್ಯದ ರಾಜಕೀಯ ಕದನ ತೀವ್ರ ಕುತೂಹಲ ಮೂಡಿಸಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net