

ಮುಂಬೈ: ನಾಳೆ(ನ. 30) ವಿಶೇಷ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಯ ಕುರಿತು ಪ್ರತಿಕ್ರಿಯಿಸಿರುವ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ, ಭವಿಷ್ಯದಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಸಂಘರ್ಷ ಉಂಟಾಗುವುದು ಖಚಿತ ಎಂದು ಹೇಳಿದ್ದಾರೆ.
ಈ ಕುರಿತು ಥಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಉತ್ತರ ಭಾರತದ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆ ಬರುವ ಅಪಾಯವಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಗೋವಾದಂತಹ ರಾಜ್ಯಗಳು ಭವಿಷ್ಯದಲ್ಲಿ ಅನ್ಯಾಯವನ್ನು ಎದುರಿಸಬಹುದು ಎಂದು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರ ಕೂಡ ದಕ್ಷಿಣ ಭಾರತದ ಭಾಗವೇ ಆಗಿದೆ ಎಂದಿರುವ ಠಾಕ್ರೆ, ಮೊಘಲರ ಕಾಲದಲ್ಲಿ ಈ ಪ್ರದೇಶವನ್ನು 'ದಕ್ಕನ್' ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರು ಕೂಡ ಇದೇ ಪದವನ್ನು ಬಳಸುತ್ತಿದ್ದರು. ಉತ್ತರ ಮತ್ತು ದಕ್ಷಿಣದ ರಾಜ್ಯಗಳ ಸ್ಥಾನಗಳನ್ನು ನೋಡಿದ್ರೆ, ಕ್ಷೇತ್ರ ಪುನರ್ವಿಂಗಡಣೆಯು ದಕ್ಷಿಣದ ರಾಜ್ಯಗಳಿಗೆ ಎಸಗುವ ಘೋರ ಅನ್ಯಾಯವಾಗಲಿದೆ ಎಂದಿದ್ದಾರೆ.
ರಾಜ್ಯಗಳನ್ನು ಕೇಂದ್ರ ಸರ್ಕಾರದ ಮೇಲೆ ಅವಲಂಬಿತವಾಗಿಸುವ ಮತ್ತು ಇಡೀ ದೇಶದ ಅಧಿಕಾರವನ್ನು ಕೇಂದ್ರೀಕರಿಸುವ ದೊಡ್ಡ ಪಿತೂರಿ ಇದಾಗಿದೆ. ಈ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿದಾಗ ಇದರ ಮತ್ತಷ್ಟು ಪರಿಣಾಮಗಳು ತಿಳಿಯಲಿವೆ. ಮುಂದಿನ ದಿನಗಳಲ್ಲಿ ಜನರಿಗೂ ಇದು ಹಂತಹಂತವಾಗಿ ಅರ್ಥವಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಸೂದೆಗೆ ಎನ್ಸಿಪಿ(ಎಸ್ಪಿ) ಬೆಂಬಲದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಶರದ್ ಪವಾರ್ ಅವರ ರಾಜಕೀಯ ನಡೆಗಳ ಬಗ್ಗೆ ನಾನು ಈಗಾಗಲೇ ದೆಹಲಿಯ ಜಂತರ್ ಮಂತರ್‌ನಲ್ಲಿ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ. ಖೋಕಾ ಯಂತ್ರವು ದಾರಿ ತೋರಿಸುವಂತೆ ತೋರಬಹುದು, ಆದರೆ ವಾಸ್ತವದಲ್ಲಿ ಇದೊಂದು 'ಧೋಕಾ ಯಂತ್ರ' ಆಗಿದೆ ಎಂದು ಹೇಳಿದ್ದಾರೆ.
ನೂತನ ಮಸೂದೆ ಪ್ರಕಾರ, ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಲೋಕಸಭಾ ಸ್ಥಾನಗಳಲ್ಲಿ ಶೇಕಡಾ 50ರಷ್ಟು ಹೆಚ್ಚಳವಾಗಲಿದೆ. ವಿಶೇಷವೆಂದರೆ, ಈ ಹೆಚ್ಚಳ ಎಲ್ಲಾ ರಾಜ್ಯಗಳಿಗೂ ಏಕರೂಪವಾಗಿ ಇರಲಿದ್ದು, 2051ರವರೆಗೆ ಈ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ, ಪ್ರಸ್ತುತ ಲೋಕಸಭೆಯಲ್ಲಿರುವ 543 ಸ್ಥಾನಗಳ ಬಲ ಬರೋಬ್ಬರಿ 816ಕ್ಕೆ ಏರಿಕೆಯಾಗಲಿದೆ.
ಪ್ರಸ್ತುತ ದಕ್ಷಿಣ ಭಾರತದ 5 ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 130 ಲೋಕಸಭಾ ಸ್ಥಾನಗಳಿವೆ. ಡಿಲಿಮಿಟೇಷನ್ ಬಳಿಕ ಒಟ್ಟು ಸ್ಥಾನಗಳು 197ಕ್ಕೆ ಏರಿಕೆಯಾಗಲಿವೆ ಎನ್ನಲಾಗಿದೆ (ಏಜೆನ್ಸೀಸ್).