ಯುಪಿ ಚುನಾವಣೆ ಕಾವೇರುತ್ತಿದ್ದಂತೆ ಆಂತರಿಕ ಕಲಹ: ಬಿಜೆಪಿ ಮಿತ್ರಪಕ್ಷಕ್ಕೆ ಸಾಮೂಹಿಕ ರಾಜೀನಾಮೆಯ ಶಾಕ್! | SBSP Party

ಲಖನೌ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಓಂಪ್ರಕಾಶ್ ರಾಜ್‌ಭರ್ ಅವರ ಸುಹೇಲಿದೇವ್ ಭಾರತೀಯ ಸಮಾಜ ಪಕ್ಷಕ್ಕೆ (SBSP Party) ದೊಡ್ಡ ರಾಜಕೀಯ ಹಿನ್ನಡೆಯುಂಟಾಗಿದೆ. ಚಂದೋಲಿ ಜಿಲ್ಲೆಯಲ್ಲಿ ಪಕ್ಷದ ಪ್ರಮುಖ ಪದಾಧಿಕಾರಿಗಳು ಹಾಗೂ ಅನೇಕ ಕಾರ್ಯಕರ್ತರು ರಾಜೀನಾಮೆಯನ್ನು ಘೋಷಿಸಿದ್ದಾರೆ.
ಯುಪಿ ಚುನಾವಣೆ ಕಾವೇರುತ್ತಿದ್ದಂತೆ ಆಂತರಿಕ ಕಲಹ: ಬಿಜೆಪಿ ಮಿತ್ರಪಕ್ಷಕ್ಕೆ ಸಾಮೂಹಿಕ ರಾಜೀನಾಮೆಯ ಶಾಕ್! | SBSP Party
Published on: 

ಲಖನೌ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಓಂಪ್ರಕಾಶ್ ರಾಜ್‌ಭರ್ ಅವರ ಸುಹೇಲಿದೇವ್ ಭಾರತೀಯ ಸಮಾಜ ಪಕ್ಷಕ್ಕೆ (SBSP Party) ದೊಡ್ಡ ರಾಜಕೀಯ ಹಿನ್ನಡೆಯುಂಟಾಗಿದೆ. ಚಂದೋಲಿ ಜಿಲ್ಲೆಯಲ್ಲಿ ಪಕ್ಷದ ಪ್ರಮುಖ ಪದಾಧಿಕಾರಿಗಳು ಹಾಗೂ ಅನೇಕ ಕಾರ್ಯಕರ್ತರು ರಾಜೀನಾಮೆಯನ್ನು ಘೋಷಿಸಿದ್ದಾರೆ.

ಪಕ್ಷದ ಆಂತರಿಕ ಬೆಳವಣಿಗೆಗಳು ಮತ್ತು ನಾಯಕತ್ವದ ಧೋರಣೆಯ ವಿರುದ್ಧ ಅಸಮಾಧಾನಗೊಂಡಿರುವ ಕಾರ್ಯಕರ್ತರು, ರಾಜ್‌ಭರ್ ಅವರು ಪಕ್ಷದ ಮೂಲ ಸಿದ್ಧಾಂತಗಳಿಂದ ವಿಮುಖರಾಗಿದ್ದಾರೆ ಮತ್ತು ವರ್ಷಗಟ್ಟಲೆ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದವರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಯುವ ಘಟಕದ ವಾರಣಾಸಿ ವಿಭಾಗದ ಮುಖ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ರಾಜ್‌ಭರ್ ಸೇರಿದಂತೆ ಹಲವರು ಹಿರಿಯ ನಾಯಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ಅಲ್ಬೇನಿಯಾ ಪ್ರಧಾನಿ ವಿರುದ್ಧ ಪ್ರತಿಭಟನೆ: ಇದರಿಂದ ಭಾರತ ಪಾಠ ಕಲಿಯಲಿ ಎಂದ ಸಂಜಯ್ ರಾವುತ್​ಗೆ ಸ್ವಪಕ್ಷೀಯ ನಾಯಕಿಯಿಂದಲೇ ಛೀಮಾರಿ!

ಕಾರ್ಯಕರ್ತರ ನಿರ್ಲಕ್ಷ್ಯ ಮತ್ತು ಟಿಕೆಟ್ ಹಂಚಿಕೆ!

ಕಳೆದ 20 ರಿಂದ 24 ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ತಳಮಟ್ಟದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದು ದೀಪಕ್ ರಾಜ್‌ಭರ್ ಆರೋಪಿಸಿದ್ದಾರೆ. ಹಿರಿಯ ನಾಯಕರು ಸಮುದಾಯದ ಅಭಿವೃದ್ಧಿಗಿಂತ ಸ್ವಾರ್ಥ ಸಾಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಗಂಭೀರ ಆರೋಪ ಮಾಡುತ್ತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗಾಗಿ ನಡೆಯುತ್ತಿರುವ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿರುವ ಅಸಮಾಧಾನಿತರು, ರಾಜ್‌ಭರ್ ಸಮುದಾಯದ ಮತಗಳನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದು, ಬಲಶಾಲಿ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಮಣೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇನ್ನುಮುಂದೆ ಸಮುದಾಯದ ಹಕ್ಕುಗಳು, ಪ್ರಾತಿನಿಧ್ಯ ಮತ್ತು ಸ್ವಾಭಿಮಾನದ ಆಧಾರದ ಮೇಲೆ ಮಾತ್ರ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು, ಮುಂಬರುವ ದಿನಗಳಲ್ಲಿ ಪಕ್ಷದಿಂದ ಹೆಚ್ಚಿನ ಕಾರ್ಯಕರ್ತರು ಹೊರನಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

Also Read
ಉತ್ತರ ಪ್ರದೇಶ ಚುನಾವಣೆ ಸಿದ್ಧತೆ: 150 ಕ್ಷೇತ್ರಗಳಿಗೆ ಕಾಂಗ್ರೆಸ್ ಬೇಡಿಕೆ, ಸೀಟು ಹಂಚಿಕೆ ಬಗ್ಗೆ ಅಖಿಲೇಶ್ ಯಾದವ್​ ಹೇಳೋದೇ ಬೇರೆ! | Congress-SP Alliance
ಯುಪಿ ಚುನಾವಣೆ ಕಾವೇರುತ್ತಿದ್ದಂತೆ ಆಂತರಿಕ ಕಲಹ: ಬಿಜೆಪಿ ಮಿತ್ರಪಕ್ಷಕ್ಕೆ ಸಾಮೂಹಿಕ ರಾಜೀನಾಮೆಯ ಶಾಕ್! | SBSP Party

ಮೂಲಭೂತ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ: ಬಬ್ಲು ರಾಜ್‌ಭರ್

ಪಕ್ಷ ತೊರೆದಿರುವ ಪ್ರಮುಖರಲ್ಲಿ ಯುವ ಘಟಕದ ಅಧ್ಯಕ್ಷ ಹಾಗೂ ಸಚಿವರ ಪ್ರತಿನಿಧಿಯಾಗಿರುವ ಬಬ್ಲು ರಾಜ್‌ಭರ್ ಹಾಗೂ ವಾರಣಾಸಿ ವಿಭಾಗದ ಮುಖ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ರಾಜ್‌ಭರ್ ಸೇರಿದಂತೆ ಅನೇಕ ಪದಾಧಿಕಾರಿಗಳು ಸೇರಿದ್ದಾರೆ. ಓಂಪ್ರಕಾಶ್ ರಾಜ್‌ಭರ್ ಅವರನ್ನು ರಾಜಕೀಯವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಿದ ಸಮುದಾಯದ ಜನರಿಗೆ ಇಂದಿಗೂ ಮೂಲಭೂತ ಸೌಕರ್ಯಗಳಾದ ವಸತಿ, ಚರಂಡಿ, ಮತ್ತು ಉತ್ತಮ ರಸ್ತೆಗಳ ಕೊರತೆ ಕಾಡುತ್ತಿದೆ ಎಂದು ಬಬ್ಲು ರಾಜ್‌ಭರ್ ಅಳಲು ತೋಡಿಕೊಂಡಿದ್ದಾರೆ. ಗ್ರಾಮಸ್ಥರ ಸಮಸ್ಯೆಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸಮಾಜದ ಹಿಂದುಳಿದ ವರ್ಗಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಭರವಸೆಯೊಂದಿಗೆ ಸ್ಥಾಪಿಸಲಾದ ಪಕ್ಷದಲ್ಲಿ, ಈಗ ಹಿರಿಯ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ ಎಂದಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ವ್ಯವಹಾರಗಳು ನಡೆಯುತ್ತಿವೆ ಎಂದು ಅವರು ನೇರ ಆರೋಪ ಮಾಡಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಾಗ 16 ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಸಮುದಾಯಕ್ಕೆ ಸಿಕ್ಕ ಪ್ರಾಮುಖ್ಯತೆ ಎಷ್ಟು ಎಂಬುದನ್ನು ಅವರು ಪ್ರಶ್ನಿಸಿದ್ದು, ಮುಂದಿನ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಮರುಕಳಿಸುವ ಆತಂಕವಿದೆ ಎಂದು ತಿಳಿಸಿದ್ದಾರೆ.

ಸಾಮೂಹಿಕ ನಿರ್ಗಮನದ ಎಚ್ಚರಿಕೆ!

ಸಚಿವರಾದ ಬಳಿಕ ಓಂಪ್ರಕಾಶ್ ರಾಜ್‌ಭರ್ ಅವರು ಸಮುದಾಯದ ಸಮಸ್ಯೆಗಳನ್ನು ಮರೆತು ತಮ್ಮ ಸ್ವಂತ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂದು ರಾಜೀನಾಮೆ ನೀಡಿದ ನಾಯಕರು ಕಿಡಿಕಾರಿದ್ದಾರೆ. ಇದು ಕೇವಲ ಆರಂಭವಷ್ಟೇ ಎಂದು ಹೇಳಿರುವ ಅವರು, ಮುಂದಿನ ದಿನಗಳಲ್ಲಿ ಪಕ್ಷದಿಂದ ದೊಡ್ಡ ಮಟ್ಟದ ವಲಸೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲಾ ಗಂಭೀರ ಆರೋಪಗಳ ಕುರಿತು ಇದುವರೆಗೆ ಒಂಪ್ರಕಾಶ್ ರಾಜ್‌ಭರ್​ ಮತ್ತು ಪ್ರಮುಖ ನಾಯಕರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net