Amur Falcons: ನೀಲಿಮಯ ಆಕಾಶದಲ್ಲಿ ಯಾರ ಅಪ್ಪಣೆ, ಗಡಿಗಳ ಅಡಚಣೆ, ಭೇದ ಭಾವದ ಅಂತರವಿಲ್ಲದೆ ಮುಗಿಲೆತ್ತರದಲ್ಲಿ ಸ್ವ ಚ್ಛಂದವಾಗಿ ಹಾರಾಡುವ ಹಕ್ಕಿಗಳ ಜೀವನ ನೋಡಿದಾಗ ಮನುಷ್ಯನಿಗೆ ಹೊಟ್ಟೆಕಿಚ್ಚು ಆಗುವುದಂತು ಸತ್ಯ ಬಿಡಿ. ಕಾರಣ, ಭೂಮಿ ಮೇಲೆ ನೀವು ಯಾವ ಪ್ರಾಣಿಯಂತೆ ಜೀವಿಸಲು ಬಯಸುತ್ತೀರಾ ಎಂಬ ಪ್ರಶ್ನೆ ಏನಾದರೂ ಕೇಳಿದರೆ, ಅದಕ್ಕೆ ಮೊದಲು ಬರುವ ಉತ್ತರವೇ ಪಕ್ಷಿ ಎಂದು. ಏಕೆಂದರೆ, ಭೂಮಂಡಲದ ವಿಹಂಗಮ ನೋಟ ನೋಡಲು ಸಿಗುವುದು ಈ ಹಕ್ಕಿಗಳಿಗೆ ಮಾತ್ರ. ಹೀಗಿರುವಾಗ, ಇಲ್ಲೊಂದು ಪಕ್ಷಿಯು ಸುಮಾರು 11 ದಿನ 23 ದೇಶಗಳನ್ನು ಸುತ್ತಾಡಿಕೊಂಡು ಬಂದಿರುವ ಸುದ್ದಿ ಹಲವರ ಹುಬ್ಬೇರಿಸಿದೆ.
ಅಮುರ್ ಫಾಲ್ಕನ್ ಎಂಬ ಎರಡು ಪಕ್ಷಿಗಳು ಚೀನಾದಿಂದ 23 ದೇಶಗಳನ್ನು ದಾಟಿ, ಸಮುದ್ರದ ಹಾದಿಯಲ್ಲಿ ಸುಮಾರು 6 ಸಾವಿರ ಕಿ.ಮೀ ಸಾಗಿಬಂದು ಕೊನೆಗೆ ಮಣಿಪುರಕ್ಕೆ ಹಿಂತಿರುಗಿವೆ. ಇವುಗಳ ಸಂಚಾರವನ್ನು ಸ್ಯಾಟಿಲೈಟ್ ಟ್ರ್ಯಾಕಿಂಗ್ ಮೂಲಕ ಗಮನಿಸಲಾಗಿದೆ. 'ಅಪಾಪಾಂಗ್' ಮತ್ತು 'ಅಲಂಗ್' ಎಂಬ ಹೆಸರಿನ ಎರಡು ಅಮುರ್ ಫಾಲ್ಕನ್‌ಗಳು ಈ ಅಪರೂಪದ ವಲಸೆಗಳನ್ನು ದಾಖಲಿಸಿವೆ. ಈ ಪುಟ್ಟ ಹಕ್ಕಿಗಳ ಬಗ್ಗೆಗಿನ ರೋಚಕ ಮಾಹಿತಿಯನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹಂಚಿಕೊಂಡಿದ್ದಾರೆ.
ಈಶಾನ್ಯ ಚೀನಾದಲ್ಲಿನ ತಮ್ಮ ಸಂತಾನೋತ್ಪತ್ತಿ ಸ್ಥಳದಿಂದ ಹಿಂದಿರುಗಿದ 11 ದಿನಗಳ ನಂತರ ಪಕ್ಷಿಗಳು ಮಣಿಪುರಕ್ಕೆ ಬಂದಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (WII) ವಿಜ್ಞಾನಿಗಳು ಅವುಗಳನ್ನು ಸ್ಯಾಟಿಲೈಟ್-ಟ್ಯಾಗ್ ಮಾಡಿದ್ದಾರೆ. ಟ್ರ್ಯಾಕಿಂಗ್ ಪ್ರಪಂಚದ ಅತಿ ಉದ್ದದ-ವಲಸೆ ಹಕ್ಕಿಗಳಲ್ಲಿ ಒಂದಾದ ಅಮುರ್ ಫಾಲ್ಕನ್‌ಗಳ ವಲಸೆ ಮಾರ್ಗಗಳು ಮತ್ತು ಬದುಕುಳಿಯುವಿಕೆಯ ಒಳನೋಟವನ್ನು ಇದು ತೋರಿಸಿವೆ. ಪಕ್ಷಿಗಳ ಪಯಣದ ಕುರಿತು ಸಚಿವ ಭೂಪೇಂದರ್ ಯಾದವ್ ಅವರು, ‘'ಇವು ನಿಜವಾಗಿಯೂ ಜಗತ್ತಿನ ಪ್ರಜೆಗಳು' ಎಂದು ಮೆಚ್ಚಿದ್ದಾರೆ.
ಅಪಾಪಾಂಗ್ ಮತ್ತು ಅಲಂಗ್ ಮುಂದಿನ ಎರಡು ಮೂರು ವಾರಗಳನ್ನು ಮಣಿಪುರದ ತಮೆಂಗ್‌ಲಾಂಗ್ ಜಿಲ್ಲೆಯ ಪರ್ವತ ಪ್ರದೇಶಗಳ ಆಯ್ದ ಸ್ಥಳಗಳಲ್ಲಿ ಕಳೆಯಲಿದ್ದು, ಈ ಪ್ರದೇಶವು ಈಗಾಗಲೇ ತಮ್ಮ ವಾರ್ಷಿಕ ವಲಸೆಯ ಸಮಯದಲ್ಲಿ ಅಮುರ್ ಫಾಲ್ಕನ್‌ಗಳಿಗೆ ಬಹಳ ಮುಖ್ಯವಾದ ವಿಶ್ರಾಂತಿ ಸ್ಥಳ ಎನ್ನಲಾಗಿದೆ. ಈ ವಿಶ್ರಾಂತಿ ಸಮಯದಲ್ಲಿ, ಹಕ್ಕಿಗಳು ಮುಖ್ಯವಾಗಿ ತಮೆಂಗ್ಲಾಂಗ್‌ನ ವಿವಿಧ ಭಾಗಗಳಲ್ಲಿ ಕಂಡುಬರುವ ಗೆದ್ದಲುಗಳನ್ನು ತಿನ್ನುತ್ತವೆ. ಈ ಆಹಾರವು ಅವುಗಳ ದೇಹದಲ್ಲಿ ಸಾಕಷ್ಟು ಕೊಬ್ಬನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಮುಂದಿನ ದೀರ್ಘ ಪ್ರಯಾಣಕ್ಕೆ ಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳುವುದು ಈ ವಿಶ್ರಾಂತಿಯ ಮುಖ್ಯ ಉದ್ದೇಶವಾಗಿದೆ.
ಮಣಿಪುರದಿಂದ ಈ ಪಕ್ಷಿಗಳ ಮುಂದಿನ ತಾಣ ಆಫ್ರಿಕಾದ ಸೊಮಾಲಿಯಾ ಎಂದು ಹೇಳಲಾಗಿದೆ. ಸುಮಾರು 6,000 ಕಿ.ಮೀ ದೂರ ಕ್ರಮಿಸುವ ಇವು ಆರು ದಿನಗಳ ಕಾಲ ನಾನ್ಸ್ಟಾಪ್ ಹಾರಾಟ ನಡೆಸಲಿವೆ. ಇದರಲ್ಲಿ ಅರೇಬಿಯನ್ ಸಮುದ್ರದ ಮೇಲೆ ಸುಮಾರು 3,000 ಕಿಮೀ ಸಾಹಸಮಯ ಸಮುದ್ರ ಪ್ರಯಾಣವೂ ಸೇರಿದ್ದು, ಇದು ಈ ಪಕ್ಷಿಗಳ ಅಗಾಧ ಪ್ರತಿಭೆ, ಸಾಮರ್ಥ್ಯವನ್ನು ಎತ್ತಿಹಿಡಿಯಲಿದೆ. ವೈಜ್ಞಾನಿಕವಾಗಿ 'ಫಾಲ್ಕೊ ಅಮುರೆನ್ಸಿಸ್' ಎಂದು ಕರೆಯಲ್ಪಡುವ ಅಮುರ್ ಫಾಲ್ಕನ್‌ಗಳು, ಈಶಾನ್ಯ ಏಷ್ಯಾದಲ್ಲಿ ಸಂತಾನೋತ್ಪತ್ತಿ ಮಾಡುವ ಸಣ್ಣ ರಾಪ್ಟರ್‌ಗಳಾಗಿವೆ.
ಚಳಿಗಾಲವನ್ನು ಕಳೆಯಲು ಆಫ್ರಿಕಾಕ್ಕೆ ಸಾವಿರಾರು ಕಿಲೋಮೀಟರ್ ಪ್ರಯಾಣಿಸುವ ಈ ಹಕ್ಕಿಗಳು, ಭಾರತ, ಈಶಾನ್ಯ ರಾಜ್ಯಗಳನ್ನು ತಮ್ಮ ವಲಸೆ ಮಾರ್ಗದಲ್ಲಿನ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿ ಮಾಡಿಕೊಂಡಿದೆ. ಮಣಿಪುರಕ್ಕೆ ಈ ಪಕ್ಷಿಗಳ ವಾರ್ಷಿಕ ಆಗಮನವು ಸಮುದಾಯ ಆಧಾರಿತ ವನ್ಯಜೀವಿ ಸಂರಕ್ಷಣೆಗೆ ಉತ್ತಮ ಉದಾಹರಣೆಯಾಗಿದೆ. ಅಪಪಾಂಗ್ ಮತ್ತು ಅಲಾಂಗ್ ಫಾಲ್ಕನ್‌ಗಳನ್ನು ಸ್ಯಾಟಿಲೈಟ್ ಟ್ರ್ಯಾಕಿಂಗ್ ಮೂಲಕ ಸಂಶೋಧಕರು ಈ ವಲಸೆಯ ನಿಜವಾದ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇವುಗಳ ಅದ್ಭುತ ಪ್ರಯಾಣವು ವನ್ಯಜೀವಿ ವಿಜ್ಞಾನ ಸಂಶೋಧನೆಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿದೆ,(ಏಜೆನ್ಸೀಸ್).