ಚೆನ್ನೈ: ಸಿಎಂ ವಿಜಯ್ ಅವರ ಟಿವಿಕೆ ಪಕ್ಷದಂತೆಯೇ ತಮ್ಮದೇ ಸ್ವಂತ ಪಕ್ಷವನ್ನು ಕಟ್ಟುತ್ತಾರಾ ಅಥವಾ ಈಗಿರುವ ಪಾರ್ಟಿಗಳನ್ನೇ ಸೇರಿಕೊಳ್ಳುತ್ತಾರಾ ನಟ ಧನುಷ್ ಎಂಬ ಕುತೂಹಲಗಳು ಸದ್ಯ ತಮಿಳುನಾಡು ರಾಜಕೀಯ ವಲಯದಲ್ಲಿ ಸಖತ್ ಜೋರಾಗಿವೆ. ತಾನು ರಾಜಕಾರಣಕ್ಕೆ ಕಾಲಿಡುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಅಥವಾ ಮಾಹಿತಿಯನ್ನು ಧನುಷ್ ಹಂಚಿಕೊಳ್ಳದೆ ಹೋದರೂ ಅವರ ಇತ್ತೀಚಿನ ಕೆಲವು ನಡೆಗಳು ವದಂತಿಗಳೇ ಸತ್ಯ ಎನ್ನುವಂತೆ ಮಾಡಿದೆ. ಅದಕ್ಕೆ, ಈ ಒಂದು ಘಟನೆ ಕೂಡ ಸಾಕ್ಷಿ ಎನ್ನಬಹುದು.
ತಮಿಳುನಾಡು ರಾಜಕೀಯಕ್ಕೆ ಬರುತ್ತಾರೆ ಎಂಬ ವದಂತಿಗಳ ವ್ಯಾಪಕವಾಗಿ ಹರಿದಾಡುತ್ತಿರುವ ಬೆನ್ನಲ್ಲೇ ಇಂದು ಧನುಷ್ ತಮ್ಮ ಅಭಿಮಾನಿಗಳ ಸಂಘದ 3,000 ಮಹಿಳಾ ಸದಸ್ಯರನ್ನು ಭೇಟಿಯಾಗಿದ್ದಾರೆ. ಚೆನ್ನೈನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಭೆ ನಡೆದಿದ್ದು, ಸ್ಥಳವನ್ನು ನಕ್ಷತ್ರದ ಚಿತ್ರಗಳು ಮತ್ತು ಬ್ಯಾನರ್‌ಗಳಿಂದ ಅಲಂಕರಿಸಲಾಗಿದೆ. ಧನುಷ್ ಅಭಿಮಾನಿಗಳ ಸಂಘವನ್ನು ಅಧಿಕೃತವಾಗಿ 'ಧನುಷ್ ನರ್ಪಾನಿ ಇಯಕಂ' ಎಂದು ಮರುನಾಮಕರಣ ಮಾಡಿದ ನಂತರ ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಗಳು ಹಿಂದಿಗಿಂತ ಜೋರಾಗಿ ಸಾಗುತ್ತಿದೆ.
ಅಕ್ಟೋಬರ್ 14ರಂದು ಕೊಯಮತ್ತೂರಿನಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಅಭಿಮಾನಿ ಬಳಗದ ಹೆಸರನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಸಂಸ್ಥೆಯು ಧನುಷ್ ಅವರು ಕೈಮುಗಿಯುತ್ತಿರುವ ಚಿತ್ರವನ್ನು ಒಳಗೊಂಡ ಹೊಸ ಲೋಗೋವನ್ನು ಬಿಡುಗಡೆ ಮಾಡಿತು. ಅಭಿಮಾನಿ ಬಳಗವನ್ನು ಕ್ಷೇಮೋದ್ದೇಶದ ಸಂಘಟನೆಯಾಗಿ ಪರಿವರ್ತಿಸಿರುವುದು ರಾಜಕೀಯಕ್ಕೆ ಬರಲು ಸಿದ್ಧತೆಯ ಭಾಗವೇ ಎಂಬ ಮಾತುಗಳು ಸದ್ಯ ತಮಿಳುನಾಡಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ.
ಇದೇ ವೇಳೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ಮಾಣಿಕ್ಕಂ ಠಾಗೋರ್ ಮಾತನಾಡಿ, ಸಿನಿಮಾ ಸ್ಟಾರ್ಗಳನ್ನು ಬಳಸಿಕೊಂಡು ತಮಿಳುನಾಡಿನಲ್ಲಿ ಬಿಜೆಪಿ ತನ್ನ ರಾಜಕೀಯ ಪ್ರಭಾವ ಹೆಚ್ಚಿಸಲು ಯತ್ನಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದಲ್ಲಿ 'ಆಪರೇಷನ್ ಡಿ' ಆರಂಭವಾಗಿದೆ. ಈ ರೀತಿ ಮಾಡಿ, ಈಗಾಗಲೇ ಎಐಎಡಿಎಂಕೆಯನ್ನು ಉಡೀಸ್ ಮಾಡಿದ್ದಾರೆ. ರಜನಿಕಾಂತ್ ಅವರನ್ನು ಬಳಸಿಕೊಂಡು ಪಕ್ಷ ಕಟ್ಟುವ ಪ್ರಯತ್ನವನ್ನೂ ಮಾಡಿದ್ದರು. ಇದೀಗ ಅಣ್ಣಾಮಲೈ ಅವರಿಗೆ ಹೊಸ ಸಂಸ್ಥೆಯನ್ನು ರಚಿಸುವಂತೆ ಕೋರಲಾಗಿದೆ. ಇವೆಲ್ಲವೂ ಅಮಿತ್ ಶಾ ಅವರ ವಿಚಾರಧಾರೆಯತ್ತ ವಾಲುತ್ತಿವೆ ಎಂದಿದ್ದಾರೆ.
ಈ ವರ್ಷದ ಜುಲೈನಲ್ಲಿ ತಿರುವಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧನುಷ್ ಮಾತನಾಡಿ, ಅಭಿಮಾನಿಗಳು ಚಿತ್ರರಂಗಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ. ಕಲ್ಯಾಣ ಕಾರ್ಯಗಳಲ್ಲಿ ಸಕ್ರಿಯರಾಗಬೇಕೆಂದು ಮನವಿ ಮಾಡಿದರು. ಇದಾದ ಬಳಿಕ ಕೆಲವು ರಾಜಕೀಯ ನಾಯಕರನ್ನು ಭೇಟಿ ಮಾಡಲು ಧನುಷ್ ಕಳೆದ ವಾರ ದೆಹಲಿಗೂ ಭೇಟಿ ನೀಡಿದರು ಎಂಬ ವರದಿಗಳು ಹೊರಬಿದ್ದ ಕೂಡಲೇ ಈ ವದಂತಿಗಳು ತಮಿಳು ಮಣ್ಣಿನಲ್ಲಿ ಜೋರಾಗಿ ಸದ್ದು ಮಾಡಲು ಆರಂಭಿಸಿವೆ,(ಏಜೆನ್ಸೀಸ್).