ಹಣಕ್ಕಾಗಿ ಪ್ರಶ್ನೆ ಪ್ರಕರಣ: ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ಲೋಕಪಾಲ್ ಆದೇಶ ರದ್ದುಗೊಳಿಸಿದ ಹೈಕೋರ್ಟ್ ​| Mahua Moitra

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ
Published on
ನವದೆಹಲಿ: ಹಣಕ್ಕಾಗಿ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ ಆರೋಪ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ(Mahua Moitra) ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲಯ ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ಶುಕ್ರವಾರ(ಡಿ. 19) ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.
ಲೋಕಪಾಲ್ ನೀಡಿದ್ದ ಅನುಮತಿ ವಿರುದ್ಧ ಮಹುವಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತರ್‌ಪಾಲ್‌ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ದ್ವಿಸದಸ್ಯ ಪೀಠ ಲೋಕಪಾಲ್ ತನ್ನ ಆದೇಶದಲ್ಲಿ ತಪ್ಪು ಮಾಡಿದೆ. ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.
ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆಯ ಸೆಕ್ಷನ್‌ 20ರ ಅಡಿಯಲ್ಲಿ ಸಂಬಂಧಿತ ನಿಬಂಧನೆಗಳಿಗೆ ಅನುಗುಣವಾಗಿ ಪ್ರಕರಣ ಮರುಪರಿಶೀಲಿಸಿ ಒಂದು ತಿಂಗಳೊಳಗೆ ಹೊಸ ನಿರ್ಧಾರ ತೆಗೆದುಕೊಳ್ಳುವಂತೆ ಲೋಕಪಾಲ್​ಗೆ ಹೈಕೋರ್ಟ್​ ನಿರ್ದೇಶನ ನೀಡಿದೆ.
ಸಂಸದೆ ಮಹುವಾ ಮೊಯಿತ್ರಾ ಪರ ಹಿರಿಯ ವಕೀಲ ನಿಧೇಶ್ ಗುಪ್ತಾ ವಾದಿಸಿದ್ದು, ಲೋಕಪಾಲ್ ಅಳವಡಿಸಿಕೊಂಡ ಕಾರ್ಯವಿಧಾನದಲ್ಲಿ ಸ್ಪಷ್ಟವಾದ ದೌರ್ಬಲ್ಯವಿದೆ. ಮಹುವಾ ಅವರ ವಿವರವಾದ ಲಿಖಿತ ಮತ್ತು ಮೌಖಿಕವಾದಗಳನ್ನು ಪರಿಗಣಿಸದೆಯೇ ಲೋಕಪಾಲ್‌ ಹೊರಡಿಸಿದ ಆದೇಶ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ 2013ಕ್ಕೆ ವಿರುದ್ಧವಾಗಿದೆ. ಸ್ವಾಭಾವಿಕ ನ್ಯಾಯ ತತ್ವಗಳ ಉಲ್ಲಂಘಿಸಿದೆ. ಕಾನೂನಿನ ಪ್ರಕಾರ ಆರೋಪಪಟ್ಟಿ ಸಲ್ಲಿಸಲು ಅನುಮತಿಸುವ ಮೊದಲು ಸಂಬಂಧಿಸಿದ ವ್ಯಕ್ತಿಯ ಅಭಿಪ್ರಾಯಗಳನ್ನು ಸಮರ್ಪಕವಾಗಿ ಪರಿಗಣಿಸಬೇಕೆಂಬ ವಾದವನ್ನು ಹೈಕೋರ್ಟ್ ಪುರಸ್ಕರಿಸಿತು.
ಇನ್ನೂ ಸಿಬಿಐ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಕಾನೂನು ಪ್ರಕಾರವೇ ಸಿಬಿಐ ಪರವಾಗಿ ಲೋಕಪಾಲ್‌ ಆದೇಶ ಬಂದಿದೆ ಎಂದರು. ಆದರೆ ಅವರ ವಾದವನ್ನು ಪುರಸ್ಕರಿಸದೇ ಲೋಕಪಾಲ್ ಆದೇಶ ರದ್ದಗೊಳಿಸಿ ಪ್ರಕರಣ ಮರುಪರಿಶೀಲಿಸುವಂತೆ ಹೈಕೋರ್ಟ್​ ನಿರ್ದೇಶಿಸಿತು.

ಪ್ರಕರಣದ ಹಿನ್ನೆಲೆ ಏನು?

ಹಣಕ್ಕಾಗಿ ಪ್ರಶ್ನೆ ಪ್ರಕರಣವೂ ಉದ್ಯಮಿಯೊಬ್ಬರಿಂದ ನಗದು ಮತ್ತು ಉಡುಗೊರೆಗಳನ್ನು ಪಡೆಯಲು ಮಹುವಾ ಮೊಹಿತ್ರಾ ಅವರು ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ್ದಾಗಿದೆ.
ಉದ್ಯಮಿ ದರ್ಶನ್ ಹಿರಾನಂದಾನಿ ಪರವಾಗಿ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ನಗದು ಹಾಗೂ ಉಡುಗೊರೆಗಳನ್ನು ಮಹುವಾ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆರೋಪಿಸಿದ್ದರು.
ಈ ಕುರಿತು ಕಾಯಿದೆಯ ಸೆಕ್ಷನ್ 20(3)(ಎ) ಅಡಿಯಲ್ಲಿ ಎಲ್ಲಾ ಅಂಶಗಳನ್ನು ತನಿಖೆ ಮಾಡಿ 6 ತಿಂಗಳೊಳಗೆ ವರದಿ ಸಲ್ಲಿಸುವಂತೆ ಲೋಕಪಾಲ್ ಈ ಹಿಂದೆ ಸಿಬಿಐಗೆ ನಿರ್ದೇಶಿಸಿತ್ತು. ಈ ಕುರಿತು ತನಿಖೆ ನಡೆಸಿದ್ದ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯನ್ನು ಜುಲೈನಲ್ಲಿ ಲೋಕಪಾಲ್‌ಗೆ ಸಲ್ಲಿಸಿತ್ತು.
ಲೋಕಪಾಲ್‌ ಮತ್ತು ಲೋಕಾಯುಕ್ತ ಕಾಯಿದೆ- 2013ರ ಸೆಕ್ಷನ್ 20ರ ಅಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿದ್ದ ಲೋಕಪಾಲ್‌, ಸಿಬಿಐಗೆ ಆರೋಪಪಟ್ಟಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು. ಆ ಆದೇಶವನ್ನು ಪ್ರಶ್ನಿಸಿ ಮಹುವಾ ಕೋರ್ಟ್​ ಮೆಟ್ಟಿಲೇರಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net