ರಾಜೀನಾಮೆಗೆ ಒತ್ತಾಯಿಸಿ ಪ್ರಧಾನಿ ಮೋದಿ ಮನೆ ಮುಂದೆ ಧರಣಿ; ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು | Rahul Gandhi

ರಾಹುಲ್ ಗಾಂಧಿಯವರನ್ಉ ವಶಕ್ಕೆ ಪಡೆಯುತ್ತಿರುವುದು.
ರಾಹುಲ್ ಗಾಂಧಿಯವರನ್ಉ ವಶಕ್ಕೆ ಪಡೆಯುತ್ತಿರುವುದು.
Published on
ನವದೆಹಲಿ: ಸಿಜೆಪಿ ಪ್ರತಿಭಟನಾಕಾರರ ಮೇಲಿನ ಲಾಠಿ ಚಾರ್ಜ್ ಖಂಡಿಸಿ, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಪ್ರಧಾನಿ ಮೋದಿಯವರ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಪ್ರಿಯಾಂಕಾ ಗಾಂಧಿ ಸೇರಿ ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಧಾನಿಯವರ ನಿವಾಸದ ಹೊರಗೆ ಅಹೋರಾತ್ರಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಪ್ರಧಾನಿ ನಿವಾಸದ ಭದ್ರತೆ ಮತ್ತು ಗಲಭೆಯ ಕಾರಣದಿಂದ ದೆಹಲಿ ಪೊಲೀಸರು ಪ್ರತಿಭಟನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಆದರೆ ಪ್ರತಿಭಟನೆ ಹಿಂಪಡೆಯಲು ನಿರಾಕರಿಸಿದ ಬೆನ್ನಲ್ಲೆ ಪೊಲೀಸರು ರಾಹುಲ್ ಗಾಂಧಿ ಸೇರಿ ಎಲ್ಲಾ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮುನ್ನ, ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಮೇಲಿನ ದಾಳಿಯು ಪ್ರತಿಯೊಂದು ಭಾರತೀಯ ಕುಟುಂಬದ ಮೇಲಿನ ದಾಳಿಯಾಗಿದೆ. ಯಾವುದೇ ಉತ್ತರವಿಲ್ಲದೆ ಅಥವಾ ಯಾವುದೇ ಪರಿಣಾಮಗಳನ್ನು ಎದುರಿಸದೆ ತಾವು ಪಾರಾಗಬಹುದು ಎಂದು ಪ್ರಧಾನಿ ಮೋದಿ ಭಾವಿಸಿದ್ದಾರೆ. ಆದರೆ ಅವರಿಗೆ ಹಾಗೆ ಮಾಡಲು ಸಾಧ್ಯವಿಲ್ಲ. ಈ ಬಾರಿ ಖಂಡಿತವಾಗಿಯೂ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂದು ನಂಬುವ ಪ್ರತಿಯೊಬ್ಬ ದೇಶಭಕ್ತ ಭಾರತೀಯನಿಗೂ ನನ್ನದೊಂದು ಮನವಿ. ಪ್ರಧಾನ ಮಂತ್ರಿಯವರ ನಿವಾಸದ ಮುಂದೆ ನಡೆಯಲಿರುವ ಧರಣಿಯಲ್ಲಿ ನಮ್ಮೊಂದಿಗೆ ಕೈಜೋಡಿಸಿ ಎಂದು ಕರೆ ನೀಡಿದ್ದು, ಭಾರತದ ವಿದ್ಯಾರ್ಥಿಗಳ ಧ್ವನಿಯನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net