

ನಾಗ್ಪುರ್: ಆರ್‌ಎಸ್‌ಎಸ್ ಕೇಂದ್ರ ಕಚೇರಿ ನಾಗ್ಪುರದಲ್ಲಿ ನಡೆದ ವಿಜಯದಶಮಿ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಈ ಸಮಯದಲ್ಲಿ ತಮ್ಮ ಭಾಷಣದಲ್ಲಿ, ಫ್ಲೈದುಬೈ ವಿಮಾನ ಪತನವಾಗುದನ್ನು ತಡೆದು ಸಾಹಸ ಮೆರೆದ ಭಾರತ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಭಾಗತವ್ ಮುಕ್ತ ಕಂಠದಿಂದ ಹೊಗಳಿದ್ದಾರೆ.
ವಿಜಯದಶಮಿ ಹಾಗೂ ಸಂಘ ಸ್ಥಾಪನೆಯಾದ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸರಸಂಘಚಾಲಕರಾದ ಮೋಹನ್ ಭಾಗವತ್, ಇತ್ತೀಚೆಗೆ ಸ್ಮಿತ್ ಮಚ್ಚಾರ್ ಎಂಬ ಭಾರತ ಮೂಲದ ಪೈಲಟ್ ಮಾಡಿರುವ ಸಾಹಸದ ಬಗ್ಗೆ ಎಲ್ಲರೂ ಕೇಳಿರುತ್ತೇವೆ. ಸ್ಮಿತ್ ಮಚ್ಚಾರ್ ತೋರಿರುವ ಸಾಹಸ ಆತನ ಹಿನ್ನೆಲೆ, ಬೆಳೆದ ವಾತಾವರಣ ಹಾಗೂ ಪಾಲಿಸುತ್ತಿದ್ದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.
ಸ್ಮಿತ್ ಮಚ್ಚಾರ್, ಮೂಲತಃ ಒಬ್ಬ ವಿಮಾನದ ಪೈಲಟ್. ಆದರೆ ಒಮ್ಮೆಲೇ ಆವರ ಮೇಲೆ ದಾಳಿ ನಡೆದಾಗ ಅದನ್ನುಎದುರಿಸಿ, ಹೋರಾಟ ನಡೆಸಿ, ದುಷ್ಟನನ್ನು ಬಗ್ಗುಬಡಿಯುವುದು ಹಿಂದೂ ಸಂಸ್ಕೃತಿಯ ಭಾಗವಾಗಿದೆ. ಇದಕ್ಕೆ ಯಾವುದೇ ತರಬೇತಿ ಬೇಕಿಲ್ಲ. ತನ್ನನ್ನು ನಂಬಿರುವ ಜನರನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನಲ್ಲಿರುವ ಸ್ವಾಭಾವಿಕ ಸ್ವಭಾವವಾಗಿದೆ ಎಂದಿದ್ದಾರೆ.
ಒಂದು ಸಮುದಾಯ, ಅದರ ನೈತಿಕ ಮೌಲ್ಯಗಳು ಒಬ್ಬನನ್ನು ಹೇಗೆ ಸಕಾರಾತ್ಮಕವಾಗಿ ಬೆಳೆಸುತ್ತದೆ ಎನ್ನುವುದಕ್ಕೆ ಸ್ಮಿತ್ ಮಚ್ಚಾರ್ ತಾಜಾ ಉದಾಹರಣೆಯಾಗಿದ್ದಾರೆ. ಇವರ ಈ ಸಾಹಸವನ್ನು ಈಡೀ ವಿಶ್ವವೇ ಕೊಂಡಾಡುತ್ತಿದ್ದು, ಜಾಗತಿಕವಾಗಿ ಭಾರತದ ಹಿರಿಮೆಯನ್ನು ಸ್ಮಿತ್ ಹೆಚ್ಚಿಸಿದ್ದಾರೆ ಎನ್ನುವುದರಲ್ಲಿ ದ್ವಂದ್ವವಿಲ್ಲವೆಂದು ಮೋಹನ್ ಭಾಗವತ್ ಹೇಳಿದ್ದಾರೆ.
ಸೆಪ್ಟೆಂಬರ್ 30 ರಂದು ದುಬೈನಿಂದ ಇಸ್ರೇಲ್ನ ಟೆಲ್ ಅವೀವ್ ಗೆ ಪ್ರಯಾಣ ಬೆಳೆಸಿದ್ದ ಫ್ಲೈದುಬೈ ವಿಮಾನದ ಪೈಲಟ್ ಆಗಿ ಸ್ಮಿತ್ ಮಚ್ಚಾರ್ ಕಾರ್ಯನಿರ್ವಹಿಸುತ್ತಿದ್ದರು. ಕೆಲ ಸಮಯದ ನಂತರ ಓಮಾನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಒಮ್ಮೆಲೇ ಕ್ಯಾಪ್ಟನ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸ್ಮಿತ್ ಮಚ್ಚಾರ್ ಅವರನ್ನು ಕೊಂದು, ವಿಮಾನವನ್ನು ತಮ್ಮ ಹಿಡಿತಕ್ಕೆ ಪಡೆದು, ಇಸ್ರೇಲ್ನ ಕಟ್ಟಡಕ್ಕೆ ಈ ವಿಮಾನವನ್ನು ಕ್ರ್ಯಾಶ್ ಮಾಡುವುದು ಇವನ ಯೋಜನೆಯಾಗಿತ್ತೆಂದು ಹೇಳಲಾಗುತ್ತಿದೆ. ಆದರೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಯಾಪ್ಟನ್ ಹರ ಸಾಹಸ ಪಟ್ಟು, ಕ್ಯಾಬಿನ್ ದ್ವಾರವನ್ನು ತೆರೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಕಾಕ್ಪಿಟ್ನಲ್ಲಿ ಜಗಳ ವಾಗುತ್ತಿದ್ದಾಗ, ವಿಮಾನ ಸುಮಾರು 14 ಸಾವಿರ ಅಡಿ ಕೆಳಕ್ಕೆ ಬಿದ್ದಿದೆ. ಬಾಗಿಲು ತೆರೆದ ನಂತರ, ಪ್ರಯಾಣಿಕರು, ಸಹ ಪೈಲಟ್ ನನ್ನು ಬಂಧಿಸಿ, ಕ್ಯಾಪ್ಟನ್ ಮಚ್ಚಾರ್ಗೆ ಪ್ರಥಮ ಚಿಕಿತ್ಸೆ ನೀಡಿದರು.
ನಂತರ ವಿಮಾನದಲ್ಲಿದ್ದ ಹೆಚ್ಚುವರಿ ಪೈಲಟ್ಗಳು ವಿಮಾವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ಈ ಮೂಲಕ ಸ್ಮಿತ್ ಮಚ್ಚಾರ್ ವಿಮಾನದಲ್ಲಿದ್ದ ಸುಮಾರು 174 ಪ್ರಯಾಣಿಕರ ಪ್ರಾಣವನ್ನು ಕಾಪಾಡಿದರು. ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು, ಇಸ್ರೇಲ್ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಸ್ಮಿತ್ ಮಚ್ಚಾರ್ಗೆ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ದೇಶದ ಸ್ವಾತಂತ್ರ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಕೇಳಿಕೊಂಡಿದ್ದಾರೆ, (ಏಜೆನ್ಸೀಸ್).