ಮದ್ವೆಯಾದ 16 ವರ್ಷಗಳ ಬಳಿಕ ಗರ್ಭಿಣಿ: ಕಂದ ಬರ್ತಾನೆ ಅಂತ ಖುಷಿಯಲ್ಲಿದ್ದ ಕುಟುಂಬಕ್ಕೆ ಹೆರಿಗೆಗೂ ಮುನ್ನವೇ ಆಘಾತ! Pregnancy

ಕದಿರಿ ಪಟ್ಟಣದ ವಾಣಿ ಬೀದಿ ನಿವಾಸಿ 31 ವರ್ಷದ ಜ್ಯೋತಿ ಅವರು ಸರ್ಕಾರಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತಿ ಗೋಪಾಲ್ ನಾಯಕ್ ಕೂಡ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ವಿವಾಹವಾಗಿ ಬರೋಬ್ಬರಿ 16 ವರ್ಷಗಳಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ.
Pregnancy
ಮೃತ ಜ್ಯೋತಿ
Published on: 

ವಿಜಯವಾಡ: ಮದುವೆಯಾಗಿ 16 ವರ್ಷಗಳ ವನವಾಸದ ಬಳಿಕ ಮನೆಗೆ ತೊಟ್ಟಿಲು ತೂಗುವ ಸಂತಸದಲ್ಲಿದ್ದ ಆ ಕುಟುಂಬಕ್ಕೆ ವಿಧಿಯಾಟದ ಬರಸಿಡಿಲು ಬಡಿದಿದೆ. ಹೆರಿಗೆಯ ಹತ್ತಿರದ ದಿನಗಳಲ್ಲಿಯೇ ತಾಯಿ ಹಾಗೂ ಗರ್ಭದಲ್ಲಿದ್ದ ( Pregnancy ) ಮಗು ಇಬ್ಬರೂ ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆಯು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿ ಪಟ್ಟಣದಲ್ಲಿ ವರದಿಯಾಗಿದೆ.

ಕದಿರಿ ಪಟ್ಟಣದ ವಾಣಿ ಬೀದಿ ನಿವಾಸಿ 31 ವರ್ಷದ ಜ್ಯೋತಿ ಅವರು ಸರ್ಕಾರಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತಿ ಗೋಪಾಲ್ ನಾಯಕ್ ಕೂಡ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ವಿವಾಹವಾಗಿ ಬರೋಬ್ಬರಿ 16 ವರ್ಷಗಳಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಒಂದಲ್ಲ ಒಂದು ದಿನ ಖಂಡಿತ ಮಗು ಆಗೇ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಅದೇ ರೀತಿ ಜ್ಯೋತಿ ಗರ್ಭಿಣಿಯಾದಾಗ ಇಡೀ ಕುಟುಂಬದಲ್ಲಿ ಸಂತಸ ತುಂಬಿತ್ತು. ಇಷ್ಟು ವರ್ಷಗಳ ನಂತರ ಮನೆಯಲ್ಲಿ ಮಗುವಿನ ನಗು ಕೇಳಲಿದೆ ಎಂಬ ಕನಸಿನಲ್ಲಿ ಇಡೀ ಕುಟುಂಬವೇ ಮಿಂದೆದ್ದಿತ್ತು.

Also Read
6 ವರ್ಷದ ಮಗಳನ್ನು ಕರೆಗೆ ಬಿಸಾಡಿ ಹೋದ ತಾಯಿ! ಕಾರಣ ಕೇಳಿದ್ರೆ ನಿಜಕ್ಕೂ ಕಣ್ಣೀರು ತರಿಸುತ್ತೆ | Hussain Sagar
Pregnancy

ತಮ್ಮ ಮನೆಯಲ್ಲಿ ಹೊಸ ಅತಿಥಿಯ ಆಗಮನಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದ ಸಮಯದಲ್ಲೇ ದುರಂತ ಸಂಭವಿಸಿದೆ. ಗುರುವಾರ ಮಧ್ಯರಾತ್ರಿ ಜ್ಯೋತಿ ಅವರಿಗೆ ದಿಢೀರನೇ ತೀವ್ರ ಅಸ್ವಸ್ಥತೆ ಉಂಟಾಗಿದೆ. ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದ ಪತ್ನಿಯನ್ನು ಕಂಡು ಆತಂಕಗೊಂಡ ಪತಿ ಗೋಪಾಲ್ ನಾಯಕ್, ತಕ್ಷಣವೇ ಕದಿರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ ವಿಧಿಯ ಕ್ರೂರ ಆಟ ಹೇಗಿದೆ ಎಂದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಜ್ಯೋತಿ ಕೊನೆಸಿರೆಳೆದಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಹೆರಿಗೆಯ ದಿನಗಳು ಹತ್ತಿರ ಬರುತ್ತಿರುವ ಅಂತಿಮ ಹಂತದಲ್ಲೇ ತಾಯಿ ಹಾಗೂ ಗರ್ಭದಲ್ಲಿದ್ದ ಹಸುಗೂಸು ಎರಡೂ ಸಾವಿಗೀಡಾಗಿರುವುದು ಇಡೀ ಕುಟುಂಬವನ್ನು ದುಃಖದ ಕಾರ್ಮೋಡಕ್ಕೆ ತಳ್ಳಿದಂತಾಗಿದೆ.

ಜ್ಯೋತಿ ಮತ್ತು ಗೋಪಾಲ್ ನಾಯಕ್ ಇಬ್ಬರೂ ಆರೋಗ್ಯ ಇಲಾಖೆಯಲ್ಲೇ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕಾರಣ, ತಮ್ಮದೇ ಇಲಾಖೆಯ ಸಹೋದ್ಯೋಗಿಗೆ ಬಂದೊದಗಿದ ಈ ಪರಿಸ್ಥಿತಿಯನ್ನು ಕಂಡು ಇಡೀ ಆಸ್ಪತ್ರೆ ಸಿಬ್ಬಂದಿ ಹಾಗೂ ಸ್ಥಳೀಯರು ಕಣ್ಣೀರಿಟ್ಟಿದ್ದಾರೆ. ಹತ್ತು ಹಲವು ಹರಕೆ, ಪೂಜೆಗಳು ಮತ್ತು ಚಿಕಿತ್ಸೆಗಳ ಬಳಿಕ ಒಲಿದುಬಂದ ಸಂತೋಷವು ಕೇವಲ ಕೆಲವೇ ದಿನಗಳಲ್ಲಿ ಕಣ್ಣೀರಲ್ಲಿ ಕರಗಿಹೋಗಿದೆ ಎಂದು ದುಃಖಿಸುತ್ತಿದ್ದಾರೆ.

Also Read
ಎಂಥಾ ಅದೃಷ್ಟ? ಒಂದೇ ದಿನದಲ್ಲಿ ಮಿಲಿಯನೇರ್​ ಆದ ಸೂಪರ್‌ಮಾರ್ಕೆಟ್ ಓನರ್​, ಬೆಳಗ್ಗೆ ಎದ್ದ ಕೂಡಲೇ ಕಂಡಿದ್ದು 3,500 ಕೋಟಿ ರೂ.! Millionaire
Pregnancy

ಹದಿನಾರು ವರ್ಷಗಳ ಕಾಲ ಕಾಯ್ದು ಪಡೆದ ಖುಷಿ ಕೇವಲ ಕೆಲವೇ ಗಂಟೆಗಳಲ್ಲಿ ಕಮರಿಹೋಗಿರುವುದು ಆ ದಂಪತಿಯ ಕುಟುಂಬದಲ್ಲಿ ಮೌನ ಆವರಿಸುವಂತೆ ಮಾಡಿದೆ. ಸಮಾಜದಲ್ಲಿ ಎಲ್ಲರ ಆರೋಗ್ಯಕ್ಕಾಗಿ ಶ್ರಮಿಸುವವರ ಮನೆಯಲ್ಲೇ ಇಂತಹ ಭೀಕರ ದುರಂತ ಸಂಭವಿಸಿರುವುದು ಕದಿರಿ ಪಟ್ಟಣದ ಜನರನ್ನು ದಿಗ್ಭ್ರಮೆಗೊಳಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net