ಇಂಡಿಗೋದಲ್ಲಿ ಪವರ್ ಬ್ಯಾಂಕ್‌ ಸ್ಫೋಟ!...ವಿಮಾನದಲ್ಲಿ ಈ ತಪ್ಪು ಮಾಡಿದ್ರೆ ನಿಮ್ಮ ಪ್ರಾಣಕ್ಕೇ ಅಪಾಯ: ನಿಯಮ ಹೇಳೋದೇನು ಗೊತ್ತಾ..? | IndiGo Flight

ನವದೆಹಲಿ: ದೆಹಲಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಓವರ್‌ಹೆಡ್ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಇಡಲಾಗಿದ್ದ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ, ತುರ್ತು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಹೈದರಾಬಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಈ ಘಟನೆಯಿಂದ ವಿಮಾನದಲ್ಲಿದ್ದವರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು.
ವಿಮಾನದಲ್ಲಿ ಈ ತಪ್ಪು ಮಾಡಿದ್ರೆ ನಿಮ್ಮ ಪ್ರಾಣಕ್ಕೇ ಅಪಾಯ!
ವಿಮಾನದಲ್ಲಿ ಈ ತಪ್ಪು ಮಾಡಿದ್ರೆ ನಿಮ್ಮ ಪ್ರಾಣಕ್ಕೇ ಅಪಾಯ!
Published on: 

ನವದೆಹಲಿ: ದೆಹಲಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಓವರ್‌ಹೆಡ್ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಇಡಲಾಗಿದ್ದ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ, ತುರ್ತು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಹೈದರಾಬಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಈ ಘಟನೆಯಿಂದ ವಿಮಾನದಲ್ಲಿದ್ದವರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು. ಫ್ಲೈಟ್ 6E 6115 ರ ಕ್ಯಾಬಿನ್ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ನೆರವು ಪಡೆಯಲಾಯಿತು. ಈ ಘಟನೆ ಇಂತಹ ಗ್ಯಾಜೆಟ್‌ಗಳನ್ನು ವಿಮಾನಗಳಲ್ಲಿ ತೆಗೆದುಕೊಂಡು ಹೋಗುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಇದು ಮತ್ತೊಮ್ಮೆ ಪ್ರಶ್ನೆ ಹುಟ್ಟುಹಾಕಿದೆ.

ಕ್ಯಾಬಿನ್ ಒಳಗಿನಿಂದ ತೆಗೆದ 36 ಸೆಕೆಂಡ್‌ಗಳ ವಿಡಿಯೋ ತುಣುಕಿನಲ್ಲಿ, ಪ್ರಯಾಣಿಕರು ಮೊದಲು ತಮ್ಮ ಬ್ಯಾಗ್‌ಗಳನ್ನು ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ, ಆದರೆ ಅಂತಿಮವಾಗಿ ಬೆಂಕಿಯನ್ನು ನಂದಿಸಿದ್ದು ಯಾರು ಎಂಬುದು ಸ್ಪಷ್ಟವಾಗಿಲ್ಲ.

ಈ ಕುರಿತು ಹೇಳಿಕೆ ನೀಡಿರುವ ವಿಮಾನಯಾನ ಸಂಸ್ಥೆ, ಇಂದು ದೆಹಲಿಯಿಂದ ಚೆನ್ನೈಗೆ ಕಾರ್ಯಾಚರಣೆ ನಡೆಸುತ್ತಿದ್ದ ಇಂಡಿಗೋ ವಿಮಾನ 6E 6115, ಗ್ರಾಹಕರ ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನದಿಂದ ಹೊಗೆ ಕಾಣಿಸಿಕೊಂಡ ನಂತರ ಹೈದರಾಬಾದ್​ನಲ್ಲಿ ಇಳಿಸಲಾಗಿದೆ. ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಸ್ಪಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಚೆನ್ನೈಗೆ ಪ್ರಯಾಣವನ್ನು ಮುಂದುವರಿಸಲು ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ಪವರ್‌ಬ್ಯಾಂಕ್ ಫಜೀತಿ: ಮಾರ್ಗ ಮಧ್ಯದಲ್ಲೇ ಇಂಡಿಗೋ ವಿಮಾನದಲ್ಲಿ ಬೆಂಕಿ, ಹೈದರಾಬಾದ್​ನಲ್ಲಿ ತುರ್ತು ಲ್ಯಾಂಡಿಂಗ್! IndiGo Flight

ಇಂಡಿಗೋ ನಿಯಮ ಹೇಳೋದೇನು..?

ಇಂಡಿಗೋ ವಿಮಾನಯಾನ ಸಂಸ್ಥೆಯ ಲಗೇಜ್ ನಿಯಮಗಳ ಪ್ರಕಾರ, ಪವರ್ ಬ್ಯಾಂಕ್‌ಗಳು ಸೇರಿದಂತೆ ಲಿಥಿಯಂ ಬ್ಯಾಟರಿಗಳನ್ನು ಪ್ರಯಾಣಿಕರು ತಮ್ಮ ಹ್ಯಾಂಡ್ ಬ್ಯಾಗ್​​ನಲ್ಲಿ ಮಾತ್ರ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಈ ನಿಯಮದ ಪ್ರಕಾರ, ಆ ವಸ್ತುಗಳು ಯಾವಾಗಲೂ ಪ್ರಯಾಣಿಕರ ಹತ್ತಿರವೇ ಇರಬೇಕು ಅಂದರೆ ಸೀಟಿನ ಕೆಳಗೆ, ಸೀಟಿನ ಪಾಕೆಟ್‌ನಲ್ಲಿ ಅಥವಾ ಪ್ರಯಾಣಿಕರ ಬಳಿಯೇ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.

ಆ ಗ್ಯಾಜೆಟ್‌ಗಳನ್ನು ಯಾವುದೇ ಕಾರಣಕ್ಕೂ ವಿಮಾನದ ಮೇಲಿನ ಸಾಮಾನುಗಳ ಡಬ್ಬಿಗಳಲ್ಲಿ ಅಂದರೆ ಓವರ್‌ಹೆಡ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಅಥವಾ ಚೆಕ್-ಇನ್ ಮಾಡುವ ಲಗೇಜ್‌ನಲ್ಲಿ ಇಡಬಾರದು ಎಂದು ಇಂಡಿಗೋ ಸ್ಪಷ್ಟವಾಗಿ ಎಚ್ಚರಿಸಿದೆ. ಆದರೆ ಪ್ರಸ್ತುತ ಘಟನೆಯಲ್ಲಿ, ವಿಡಿಯೋ ತುಣುಕನ್ನು ಗಮನಿಸಿದಾಗ ಬೆಂಕಿ ಹೊತ್ತಿಕೊಂಡಿದ್ದ ಪವರ್ ಬ್ಯಾಂಕ್ ಅನ್ನು ನಿಯಮ ಉಲ್ಲಂಘಿಸಿ ಓವರ್‌ಹೆಡ್ ಕಂಪಾರ್ಟ್‌ಮೆಂಟ್‌ನಲ್ಲಿ ಇರಿಸಲಾಗಿತ್ತು ಎಂಬುದು ತಿಳಿದುಬಂದಿದೆ.

ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ನಡೆಸಿದ ಬಳಿಕ 100 ವ್ಯಾಟ್-ಅವರ್‌ (Wh) ವರೆಗಿನ ಸಾಮರ್ಥ್ಯದ ಪವರ್ ಬ್ಯಾಂಕ್‌ಗಳು ಹಾಗೂ ಗರಿಷ್ಠ ಎರಡು ಬಿಡಿ ಲಿಥಿಯಂ-ಅಯಾನ್ ಬ್ಯಾಟರಿಗಳನ್ನು ಮಾತ್ರ ಕೊಂಡೊಯ್ಯಲು ಅನುಮತಿ ನೀಡಲಾಗುತ್ತದೆ. ಇಲ್ಲಿ ಸಾಮಾನ್ಯವಾದ 100 Wh ಬ್ಯಾಟರಿಯು ಸುಮಾರು 27,000 mAh ಸಾಮರ್ಥ್ಯಕ್ಕೆ ಸಮನಾಗಿರುತ್ತದೆ. ಆದರೂ, ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಜನ ಬಳಸುವ ಪವರ್ ಬ್ಯಾಂಕ್‌ಗಳು 10,000 ದಿಂದ 20,000 mAh ಸಾಮರ್ಥ್ಯ ಹೊಂದಿರುತ್ತವೆ. ಈ ಘಟನೆಯಲ್ಲಿ ಬೆಂಕಿ ಹೊತ್ತಿಕೊಂಡ ಪವರ್ ಬ್ಯಾಂಕ್‌ನ ನಿಖರವಾದ ಸಾಮರ್ಥ್ಯ ಎಷ್ಟು ಎಂಬುದು ಇನ್ನೂ ತಿಳಿದುಬಂದಿಲ್ಲ.

ಒಂದು ವೇಳೆ 100 Wh ಗಿಂತ ಹೆಚ್ಚು ಮತ್ತು 160 Wh ವರೆಗಿನ ಸಾಮರ್ಥ್ಯವಿರುವ ಬ್ಯಾಟರಿಗಳಾದರೆ, ಅವುಗಳನ್ನು ಕೇವಲ ವೈದ್ಯಕೀಯ ಉಪಕರಣಗಳಿಗಾಗಿ ಬಳಸುತ್ತಿದ್ದರೆ ಮಾತ್ರ ಗರಿಷ್ಠ ಎರಡರವರೆಗೆ ಕೊಂಡೊಯ್ಯಲು ಅವಕಾಶವಿರುತ್ತದೆ. ಆದರೆ ಇಂತಹ ಬ್ಯಾಟರಿಗಳನ್ನು ತೆಗೆದುಕೊಂಡು ಹೋಗಲು ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲಿ ಕಡ್ಡಾಯವಾಗಿ ಇಂಡಿಗೋ ಸಂಸ್ಥೆಯ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಪವರ್ ಬ್ಯಾಂಕ್‌ಗಳನ್ನು ಸಾಗಿಸುವಾಗ ಕೆಲವು ಕಟ್ಟುನಿಟ್ಟಾದ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಪವರ್ ಬ್ಯಾಂಕ್‌ಗಳನ್ನು ಅವುಗಳ ಅಸಲಿ ಬಾಕ್ಸ್‌ನಲ್ಲಿ ಅಥವಾ ಪ್ರತ್ಯೇಕವಾದ ಪ್ಲಾಸ್ಟಿಕ್ ಚೀಲಗಳಲ್ಲಿ ಸುರಕ್ಷಿತವಾಗಿ ಪ್ಯಾಕ್ ಮಾಡಿರಬೇಕು. ಶಾರ್ಟ್ ಸರ್ಕ್ಯೂಟ್ ಉಂಟಾಗುವುದನ್ನು ತಡೆಯಲು ಅವುಗಳ ತುದಿಯ ಭಾಗಗಳನ್ನು ಟೇಪ್ ಬಳಸಿ ಚೆನ್ನಾಗಿ ಇನ್ಸುಲೇಟ್ ಮಾಡಿರಬೇಕು. ಇದರೊಂದಿಗೆ, ವಿಮಾನದೊಳಗೆ ಪ್ರಯಾಣಿಸುವಾಗ ಯಾವುದೇ ಕಾರಣಕ್ಕೂ ಆ ಪವರ್ ಬ್ಯಾಂಕ್‌ಗಳನ್ನು ರೀಚಾರ್ಜ್ ಮಾಡಬಾರದು ಹಾಗೂ ಮೊಬೈಲ್ ಅಥವಾ ಇತ್ಯಾದಿ ಬೇರೆ ಸಾಧನಗಳನ್ನು ಚಾರ್ಜ್ ಮಾಡಲು ಕೂಡ ಅವುಗಳನ್ನು ಬಳಸಬಾರದು ಎಂದು ಇಂಡಿಗೋ ಸ್ಪಷ್ಟವಾಗಿ ತಿಳಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳೆರಡಕ್ಕೂ ಇದೇ ನಿಯಮ ಅನ್ವಯಿಸುತ್ತವೆ.

ಡಿಜಿಸಿಎ ಸುತ್ತೋಲೆ ಹೀಗಿದೆ!

ನಾಗರಿಕ ವಿಮಾನಯಾನ ಮಹಾನನಿರ್ದೇಶನಾಲಯವು (DGCA) 2025ರ ನವೆಂಬರ್​ನಲ್ಲಿ ಅಪಾಯಕಾರಿ ಸರಕುಗಳ ಸಲಹಾ ಸುತ್ತೋಲೆಯನ್ನು ಹೊರಡಿಸಿದ್ದು, ವಿಮಾನದ ಸೀಟಿನ ಪವರ್ ಔಟ್‌ಲೆಟ್‌ಗಳ ಮೂಲಕವೂ ಸೇರಿದಂತೆ ವಿಮಾನಯಾನದ ಸಮಯದಲ್ಲಿ ಸಾಧನಗಳನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್‌ಗಳನ್ನು ಬಳಸುವುದನ್ನು ನಿಷೇಧಿಸಿದೆ. ಪವರ್ ಬ್ಯಾಂಕ್‌ಗಳು ಮತ್ತು ಬಿಡಿ ಬ್ಯಾಟರಿಗಳನ್ನು ಓವರ್‌ಹೆಡ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಸಂಗ್ರಹಿಸಬಾರದು ಎಂದೂ ಈ ಸುತ್ತೋಲೆಯು ಕಡ್ಡಾಯಗೊಳಿಸಿದೆ, ಏಕೆಂದರೆ ಅಲ್ಲಿ ಬೆಂಕಿಯನ್ನು ಪತ್ತೆಹಚ್ಚುವುದು ಮತ್ತು ನಿಯಂತ್ರಿಸುವುದು ಹೆಚ್ಚು ಕಷ್ಟಕರವಾಗಿರುತ್ತದೆ. ಇಂಡಿಗೋ ನೀತಿಯು ಇದನ್ನೇ ಹೇಳುತ್ತದೆ.

ಪವರ್ ಬ್ಯಾಂಕ್ ಸ್ಫೋಟ: ಇದೇ ಮೊದಲಲ್ಲ!

ಕಳೆದ ಮಾರ್ಚ್ 5 ರಂದು ಚಂಡೀಘಢದಲ್ಲಿ ವಿಮಾನವು ಬಂದಿಳಿದ ನಂತರ, ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸೀಟಿನ ಪಾಕೆಟ್‌ನಲ್ಲಿ ಇದ್ದಾಗಲೇ ಅದಕ್ಕೆ ಬೆಂಕಿ ಹತ್ತಿಕೊಂಡಿದ್ದರಿಂದ ಮತ್ತೊಂದು ಇಂಡಿಗೋ ವಿಮಾನವನ್ನು ತುರ್ತಾಗಿ ಖಾಲಿ ಮಾಡಿಸಲಾಗಿತ್ತು. ಆ ಘಟನೆ ನಡೆದು ಒಂದುವರೆ ವರ್ಷ ಕಳೆಯುವುದರೊಳಗೆ ಈಗ ಈ ಭಾನುವಾರದ ಮತ್ತೊಂದು ಅನಾಹುತ ಸಂಭವಿಸಿದೆ. ಚಂಡೀಘಢದ ಆ ಘಟನೆಯ ಸಂದರ್ಭದಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಎರಡು ಅಗ್ನಿಶಾಮಕ ಯಂತ್ರಗಳನ್ನು ಬಳಸಲಾಗಿತ್ತು ಮತ್ತು ಎಲ್ಲಾ ಪ್ರಯಾಣಿಕರನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಕೆಳಗೆ ಇಳಿಸಿ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಕರೆದೊಯ್ಯಲಾಗಿತ್ತು ಎಂದು ನಾಗರಿಕ ವಿಮಾನಯಾನ ಮಹಾನನಿರ್ದೇಶನಾಲಯ ತಿಳಿಸಿತ್ತು.

ಚಂಡೀಘಢದಲ್ಲಿ ನಡೆದ ಆ ಅಹಿತಕರ ಘಟನೆಯ ನಂತರ, ಭಾರತದ ವಿಮಾನಯಾನ ಉದ್ಯಮ ಒಕ್ಕೂಟದ (FAII) ವಿಮಾನಯಾನ ಸರಕು ಸಾಗಣೆ ವಿಭಾಗದ ಅಧ್ಯಕ್ಷೆ ವಂದನಾ ಸಿಂಗ್ ಅವರು ಎನ್‌ಡಿಟಿವಿ ಜೊತೆ ಮಾತನಾಡುತ್ತಾ, ಇದಕ್ಕೆ ಪವರ್ ಬ್ಯಾಂಕ್‌ಗಳ ಮೇಲಿನ ಸಂಪೂರ್ಣ ನಿಷೇಧವೇ ಸರಿಯಾದ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಪವರ್ ಬ್ಯಾಂಕ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು, ವಿಮಾನಯಾನ ಕ್ಷೇತ್ರವು ಈಗ ಇರುವ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರ ಕಡೆಗೆ ಹೆಚ್ಚು ಗಮನಹರಿಸಬೇಕು. ಕೇವಲ ಕ್ಯಾಬಿನ್ ಲಗೇಜ್‌ನಲ್ಲಿ ಮಾತ್ರ ಇವುಗಳನ್ನು ಸಾಗಿಸುವುದನ್ನು ಕಡ್ಡಾಯವಾಗಿ ಪಾಲಿಸುವುದು, ಬ್ಯಾಟರಿಗಳ ಸಾಮರ್ಥ್ಯದ ಮೇಲೆ ಸ್ಪಷ್ಟ ಮಿತಿಗಳನ್ನು ವಿಧಿಸುವುದು ಮತ್ತು ಸರಿಯಾದ ನಿರ್ವಹಣೆ ಹಾಗೂ ಸುರಕ್ಷಿತ ಸಂಗ್ರಹಣೆಯ ವಿಧಾನಗಳ ಬಗ್ಗೆ ಪ್ರಯಾಣಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಅವರು ಅಂದು ತಿಳಿಸಿದ್ದರು.

ಇದಷ್ಟೆ ಅಲ್ಲದೇ ವಿಮಾನದೊಳಗೆ ಬ್ಯಾಟರಿಗಳಿಗೆ ಸಂಬಂಧಿಸಿದ ಯಾವುದೇ ಅನಿರೀಕ್ಷಿತ ತುರ್ತು ಘಟನೆಗಳು ಎದುರಾದಾಗ, ಸಿಬ್ಬಂದಿಗಳು ತಕ್ಷಣವೇ ಹಾಗೂ ಸಮರ್ಥವಾಗಿ ಸ್ಪಂದಿಸಲು ಸಾಧ್ಯವಾಗುವಂತೆ ಅವರಿಗೆ ಅತ್ಯುತ್ತಮವಾದ ವಿಶೇಷ ತರಬೇತಿಯನ್ನು ನೀಡುವುದನ್ನು ವಿಮಾನಯಾನ ಸಂಸ್ಥೆಗಳು ಮಾಡಬೇಕು ಎಂದು ವಂದನಾ ಸಿಂಗ್​ ಹೇಳಿದ್ದರು.(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net