ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮಾತೃವಿಯೋಗ: ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ನರೇಂದ್ರ ಮೋದಿ! | Yogi Adityanath Mother

ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮಾತೃವಿಯೋಗ: ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ನರೇಂದ್ರ ಮೋದಿ!
ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮಾತೃವಿಯೋಗ: ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ನರೇಂದ್ರ ಮೋದಿ!
Published on: 

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ (91) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ (ನವೆಂಬರ್ 20) ನಿಧನರಾಗಿದ್ದಾರೆ. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ತಮ್ಮ ಸ್ವಗ್ರಾಮವಾದ ಪಂಚೂರ್‌ನಲ್ಲಿರುವ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಅಂತಿಮ ದರ್ಶನ ಪಡೆಯಲು ಉತ್ತರಾಖಂಡಕ್ಕೆ ತೆರಳಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಸಾವಿತ್ರಿ ದೇವಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಯೋಗಿ ಆದಿತ್ಯನಾಥ್ ಅವರು ಆಸ್ಪತ್ರೆಗೆ ಹಲವು ಬಾರಿ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಶುಕ್ರವಾರ ಅವರು ಇಹಲೋಕ ತ್ಯಜಿಸಿರುವುದನ್ನು ಪೌರಿ ಗರ್ವಾಲ್ ಎಸ್‌ಎಸ್‌ಪಿ ಸರ್ವೇಶ್ ಪನ್ವಾರ್ ಖಚಿತಪಡಿಸಿದ್ದು, ಸ್ಥಳೀಯ ಜಿಲ್ಲಾಡಳಿತವು ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. ಶನಿವಾರ ಹರಿದ್ವಾರದಲ್ಲಿ ಸಾವಿತ್ರಿ ದೇವಿ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ, ಅಮಿತ್ ಷಾ ಸೇರಿ ಗಣ್ಯರ ಸಂತಾಪ

ಸಾವಿತ್ರಿ ದೇವಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಮಾತೃವಿಯೋಗದ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಅನೇಕ ನಾಯಕರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದು, ತಾಯಿಯ ಅಗಲಿಕೆಯು ಜೀವನದಲ್ಲಿ ಎಂದಿಗೂ ತುಂಬಲಾರದ ನಷ್ಟ ಮತ್ತು ಸಹಿಸಲಾಗದ ನೋವು ಎಂದು ಕರೆದಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಶ್ರೀಮತಿ ಸಾವಿತ್ರಿ ದೇವಿ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ತಾಯಿಯ ಅಗಲಿಕೆಯು ಜೀವನದಲ್ಲಿ ಎಂದಿಗೂ ಭರಿಸಲಾಗದ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ ಯೋಗಿ ಜೀ ಮತ್ತು ಅವರ ಕುಟುಂಬದೊಂದಿಗೆ ನನ್ನ ಸಂತಾಪವಿದೆ. ಅಗಲಿದ ಆತ್ಮಕ್ಕೆ ಭಗವಂತ ತನ್ನ ದಿವ್ಯ ಪಾದಗಳಲ್ಲಿ ಸ್ಥಾನ ನೀಡಲಿ ಮತ್ತು ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಮಿತ್ ಷಾ ಟ್ವೀಟ್ ಮಾಡಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಾವಿತ್ರಿ ದೇವಿ ಅವರ ನಿಧನವನ್ನು ಅತ್ಯಂತ ದುಃಖಕರ ಘಟನೆ ಎಂದು ಕರೆದಿದ್ದು, ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದಾರೆ.

Also Read
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಮಾತೃವಿಯೋಗ: ಸಭೆಯಲ್ಲಿ ಮಾತನಾಡುವಾಗಲೇ ಬಂತು ನಿಧನದ ಸುದ್ದಿ! Yogi Adityanath
ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮಾತೃವಿಯೋಗ: ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ನರೇಂದ್ರ ಮೋದಿ!

ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಸಿಎಂ ಯೋಗಿ

ತಾಯಿಯ ನಿಧನದ ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಪೂರ್ವನಿಗದಿತ ಗೊಂಡಾ ಪ್ರವಾಸವನ್ನು ರದ್ದುಗೊಳಿಸಿದರು. ಅಲ್ಲದೆ, ಶ್ರೀ ರಾಮ ಕಥಾ ಕಾರ್ಯಕ್ರಮ ಹಾಗೂ ಲಖನೌದಲ್ಲಿ ನಿಗದಿಯಾಗಿದ್ದ ಇತರ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಯಿತು. ಗೋರಖ್‌ಪುರದಿಂದ ನೇರವಾಗಿ ರಾಜಧಾನಿ ಲಖನೌಗೆ ಆಗಮಿಸಿದ ಯೋಗಿ, ಅಲ್ಲಿಂದ ವಿಮಾನ ನಿಲ್ದಾಣದ ಮೂಲಕ ತಾಯಿಯ ಅಂತಿಮ ದರ್ಶನಕ್ಕಾಗಿ ಉತ್ತರಾಖಂಡದ ಪೌರಿ ಗರ್ವಾಲ್‌ಗೆ ಪ್ರಯಾಣ ಬೆಳೆಸಿದರು(ಏಜೆನ್ಸೀಸ್​).