ಏರ್ ಇಂಡಿಯಾ ವಿಮಾನ ದುರಂತ​: ಫೈನಲ್​ ರಿಪೋರ್ಟ್​ಗೆ ಪೈಲಟ್‌ ಸಂಘ ಆಕ್ಷೇಪ ಬೆನ್ನಲ್ಲೇ ಕೇಂದ್ರ ಸಚಿವರಿಗೆ ಪತ್ರ | Ahmedabad Plane Crash

ಅಂತಿಮ ವರದಿಯನ್ನು ಕೊನೆಯ ಹಂತಕ್ಕೆ ತರುವ ಮೊದಲು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿರುವ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವನ್ನು ಕೋರಲಾಗಿದೆ.
ಏರ್ ಇಂಡಿಯಾ ವಿಮಾನ ದುರಂತ​: ಫೈನಲ್​ ರಿಪೋರ್ಟ್​ಗೆ ಪೈಲಟ್‌ ಸಂಘ ತೀವ್ರ ಆಕ್ಷೇಪ ಬೆನ್ನಲ್ಲೇ ಕೇಂದ್ರ ಸಚಿವರಿಗೆ ಪತ್ರ
ಏರ್ ಇಂಡಿಯಾ ವಿಮಾನ ದುರಂತ​: ಫೈನಲ್​ ರಿಪೋರ್ಟ್​ಗೆ ಪೈಲಟ್‌ ಸಂಘ ತೀವ್ರ ಆಕ್ಷೇಪ ಬೆನ್ನಲ್ಲೇ ಕೇಂದ್ರ ಸಚಿವರಿಗೆ ಪತ್ರ
Published on: 
  • ಇನ್ನೂ ಅಂತ್ಯ ಕಾಣದ ಅಹಮದಾಬಾದ್ ವಿಮಾನ ದುರಂತದ ಪ್ರಕರಣ

  • ಅಂತಿಮ ವರದಿ ಸಿದ್ಧಗೊಂಡ ಬೆನ್ನಲ್ಲೇ ಪೈಲಟ್‌ ಸಂಘ ಆಕ್ಷೇಪ

  • ಕೆಲವು ವಿಷಯಗಳನ್ನು ಪರಿಶೀಲಿಸುವಂತೆ ಕೇಂದ್ರ ಸಚಿವರಿಗೆ ಪತ್ರ

Ahmedabad Plane Crash: ಕಳೆದ ವರ್ಷ ಜೂನ್​ 12ರಂದು ಸಂಭವಿಸಿದ ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾದ ಅಹಮದಾಬಾದ್ ಏರ್ ಇಂಡಿಯಾ ಅಪಘಾತದ ಕುರಿತು ಇದೀಗ ಅಂತಿಮ ವರದಿ ಸಿದ್ಧವಾಗುತ್ತಿದ್ದಂತೆ ಪ್ರಮುಖ ಬೆಳವಣಿಗೆಯೊಂದು ಹೊರಬಿದ್ದಿದೆ.

ಅಪಘಾತದ ತನಿಖೆಯ ಕರಡು ಅಂತಿಮ ವರದಿಯನ್ನು ಪರಿಶೀಲಿಸುವ ಯಾವುದೇ ಸ್ವತಂತ್ರ ಸಮಿತಿಯಲ್ಲಿ ಭಾರತೀಯ ಪೈಲಟ್‌ಗಳ ಒಕ್ಕೂಟವು ಪ್ರಾತಿನಿಧ್ಯವನ್ನು ಕೋರಿದೆ. ಅಂತಿಮ ವರದಿಯನ್ನು ಕೊನೆಯ ಹಂತಕ್ಕೆ ತರುವ ಮೊದಲು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿರುವ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವನ್ನು ಕೋರಲಾಗಿದೆ.

ಸೆ.25ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪೈಲಟ್‌ ಸಂಘವು ಪತ್ರ ಬರೆದಿದ್ದು, ವಿಮಾನ ಅಪಘಾತದ ಅಂತಿಮ ಕರಡು ವರದಿಯ ಸ್ವತಂತ್ರ ಪರಾಮರ್ಶೆಯನ್ನು ಸರ್ಕಾರ ಅಥವಾ ಸಚಿವಾಲಯ ಪರಿಗಣಿಸುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ಸಂದರ್ಭದಲ್ಲಿ, ವೃತ್ತಿಪರ ಪೈಲಟ್‌ಗಳನ್ನು ಪ್ರತಿನಿಧಿಸುವ ಸ್ವತಂತ್ರ ತಾಂತ್ರಿಕ ಪಾಲುದಾರನಾಗಿ ತನ್ನ ಔಪಚಾರಿಕ ನಾಮನಿರ್ದೇಶನವನ್ನು ಕೇಳಿದೆ.

ಪ್ರಸ್ತುತ, ಏರ್‌ಕ್ರಾಫ್ಟ್ ಆ್ಯಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ (AAIB) ತನಿಖೆಯನ್ನು ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿದೆ. 2026ರ ಅಕ್ಟೋಬರ್‌ ವೇಳೆಗೆ ಅಂತಿಮ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಜುಲೈನಲ್ಲಿ ಎಎಐಬಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ಭಾರತೀಯ ವಾಯು ಅಪಘಾತ ತನಿಖಾ ನಿಯಮಗಳು, ICAO ಅನೆಕ್ಸ್ 13ರ ಅಡಿಯಲ್ಲಿ ತನಿಖೆಯನ್ನು ಕೈಗೊಂಡಿರುವುದಾಗಿ ವರದಿಗಳು ಉಲ್ಲೇಖಿಸಿವೆ.

4 ಅಥವಾ 18 ಸೆಕೆಂಡ್?

ರಾಮ್ ಏರ್ ಟರ್ಬೈನ್ (RAT) ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ಸಮಯವನ್ನು ಅಪಘಾತದ ತನಿಖೆಯಲ್ಲಿ ಪ್ರಮುಖ ಅಂಶವಾಗಿ ಪೈಲಟ್‌ಗಳ ಸಂಘ ಗುರುತಿಸಿದೆ. RAT ಎನ್ನುವುದು ಮುಖ್ಯ ವಿದ್ಯುತ್ ಶಕ್ತಿಯ ನಷ್ಟದ ಸಂದರ್ಭದಲ್ಲಿ ವಿಮಾನಕ್ಕೆ ತುರ್ತು ಶಕ್ತಿಯನ್ನು ಒದಗಿಸುವ ವ್ಯವಸ್ಥೆಯಾಗಿದೆ. ಎಎಐಬಿನ ಪ್ರಾಥಮಿಕ ವರದಿಯ ಪ್ರಕಾರ, ಇಂಧನ ವ್ಯವಸ್ಥೆಯ ವೈಫಲ್ಯವು 08:08:42 ಯುಟಿಸಿಯಲ್ಲಿ ಸಂಭವಿಸಿದೆ ಮತ್ತು ಸರಿಸುಮಾರು ನಾಲ್ಕು ಸೆಕೆಂಡುಗಳ ನಂತರ RAT ಮೂಲಕ ಹೈಡ್ರಾಲಿಕ್ ಶಕ್ತಿಯನ್ನು ಮರು ಸ್ಥಾಪಿಸಲಾಯಿತು.

ಆದಾಗ್ಯೂ, ನಂತರ ನಡೆಸಿದ ಸ್ವತಂತ್ರ ಸಿಮ್ಯುಲೇಟರ್ ಪರೀಕ್ಷೆಗಳು ವಿಭಿನ್ನ ಫಲಿತಾಂಶಗಳನ್ನು ನೀಡಿವೆ ಎಂದು ಪೈಲಟ್‌ಗಳ ಸಂಘ ತಿಳಿಸಿದೆ. ಸಾರ್ವಜನಿಕವಾಗಿ ಲಭ್ಯವಿರುವ ಸಿಮ್ಯುಲೇಟರ್ ಪರೀಕ್ಷೆಗಳನ್ನು ಉಲ್ಲೇಖಿಸಿ, ಇಂಧನ ವ್ಯವಸ್ಥೆಯ ವೈಫಲ್ಯದ ನಂತರ RAT ಕಾರ್ಯನಿರ್ವಹಿಸಲು ಬೋಯಿಂಗ್ 787 ಸಿಮ್ಯುಲೇಟರ್‌ನಲ್ಲಿ ಸರಿಸುಮಾರು 18 ಸೆಕೆಂಡುಗಳನ್ನು ತೆಗೆದುಕೊಂಡಿತು. ಘಟನೆಗಳ ಅನುಕ್ರಮವನ್ನು ಅರ್ಥಮಾಡಿಕೊಳ್ಳುವಲ್ಲಿ ಈ ನಾಲ್ಕು ಸೆಕೆಂಡುಗಳು ಮತ್ತು 18 ಸೆಕೆಂಡುಗಳ ನಡುವಿನ ವ್ಯತ್ಯಾಸವು ಘಟನೆಯನ್ನು ಅಳೆಯುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು FIP (ಭಾರತೀಯ ಪೈಲಟ್‌ಗಳ ಒಕ್ಕೂಟ) ತಿಳಿಸಿದೆ.

18 ಸೆಕೆಂಡ್​ ಫೈನಲ್​ ಅಲ್ಲ

ಆದಾಗ್ಯೂ, 18 ಸೆಕೆಂಡುಗಳ ಸಿಮ್ಯುಲೇಟರ್ ಫಲಿತಾಂಶವೇ ಅಂತಿಮ ಅಥವಾ ಸತ್ಯ ಎಂದು ಒಪ್ಪಿಕೊಳ್ಳಲು ಎಫ್​ಐಪಿ ಸರ್ಕಾರಕ್ಕೆ ತಿಳಿಸಿಲ್ಲ. ಬದಲಿಗೆ, ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸಲು ಮತ್ತು ಎರಡು ಫಲಿತಾಂಶಗಳ ನಡುವಿನ ವ್ಯತ್ಯಾಸದ ಕಾರಣವನ್ನು ನಿರ್ಧರಿಸಲು AAIB ಅಥವಾ ಸ್ವತಂತ್ರ ಪರಿಶೀಲನಾ ಸಂಸ್ಥೆಯನ್ನು ಕೋರಿದೆ. ಅಪಘಾತಕ್ಕೀಡಾದ ವಿಮಾನಗಳು ಮತ್ತು ಸಿಮ್ಯುಲೇಟರ್‌ನಲ್ಲಿ ಬಳಸಿದ ವಿಮಾನಗಳು ಒಂದೇ ಸಾಫ್ಟ್‌ವೇರ್ ಕಾನ್ಫಿಗರೇಶನ್ ಅನ್ನು ಹೊಂದಿದೆಯೇ ಎಂಬಂತಹ ಅಂಶಗಳನ್ನು FIP ಕೇಳಿದೆ. RAT ಅನ್ನು ಸಕ್ರಿಯಗೊಳಿಸಲು ಎಷ್ಟು ಸಮಯ ಬೇಕು? RAT ಸಂಪೂರ್ಣ ಕಾರ್ಯಾಚರಣೆ ಮತ್ತು ಬಳಸಬಹುದಾದ ಹೈಡ್ರಾಲಿಕ್ ಶಕ್ತಿಯನ್ನು ಒದಗಿಸಲು ಅವಧಿ ಎಷ್ಟೊತ್ತು? ಇಂಧನ ವ್ಯವಸ್ಥೆಯಲ್ಲಿನ ಅಡಚಣೆ ಮತ್ತು RAT ಸಕ್ರಿಯಗೊಳಿಸುವಿಕೆಯ ನಡುವಿನ ಸಂಬಂಧವೇನು ಎಂಬ ಒಂದಷ್ಟು ಪ್ರಶ್ನೆಗಳು ಮುಂದಿಟ್ಟಿದೆ.

ಟೇಕಾಫ್ ಸಮಯದ ಬಗ್ಗೆಯೂ ಪ್ರಶ್ನೆ

ಪೈಲಟ್‌ಗಳ ಸಂಘವು RAT ಸಮಯದ ಜತೆಗೆ ಟೇಕಾಫ್ ಸಮಯದಲ್ಲಿ ದಾಖಲಾದ ಕಾರ್ಯಕ್ಷಮತೆಯ ಸಮಯದ ಬಗ್ಗೆಯೂ ಅನುಮಾನಗಳನ್ನು ಹುಟ್ಟುಹಾಕಿದೆ. ಆರಂಭಿಕ ವರದಿಯು V1 ಅನ್ನು ಸರಿಸುಮಾರು 56 ಸೆಕೆಂಡುಗಳಲ್ಲಿ ಮತ್ತು VR ಅನ್ನು ಸರಿಸುಮಾರು 58 ಸೆಕೆಂಡುಗಳಲ್ಲಿ ದಾಖಲಿಸಲಾಗಿದೆ ಎಂದು ಹೇಳಿದೆ. ಆದಾಗ್ಯೂ, ಸಿಮ್ಯುಲೇಟರ್ ಪರೀಕ್ಷೆಗಳು ಇವುಗಳಿಗಿಂತ ಕಡಿಮೆ ಸಮಯವನ್ನು ದಾಖಲಿಸಿವೆ ಎಂದು ತಿಳಿಸಿದೆ.

ಈ ವ್ಯತ್ಯಾಸಗಳನ್ನು ಕೇವಲ ಅವಲೋಕನಗಳಾಗಿ ದಾಖಲಿಸಬಾರದು. ಆದರೆ, ಇದು ಏಕೆ ಸಂಭವಿಸಿತು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಲು ತಾಂತ್ರಿಕವಾಗಿ ಪರಿಶೀಲಿಸಬೇಕು ಎಂದು ಕೇಳಲಾಗಿದೆ. ಸಂಬಂಧಿತ ಸಮಯವನ್ನು ಪರಿಶೀಲಿಸಲು ಬೋಯಿಂಗ್ 787ರಲ್ಲಿ ಸಮಗ್ರ ಸಿಮ್ಯುಲೇಟರ್ ಪರೀಕ್ಷೆಗಳನ್ನು ನಡೆಸಬೇಕೆಂದು ಈ ಹಿಂದೆ ವಿನಂತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.

ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತ

ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿತು. 2025, ಜೂನ್​ 12ರಂದು ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವಿಗೀಡಾದರು.

ಬೇಕಂತಲೇ ಮಾಡಿದ ಶಂಕೆ

ಕೊರಿಯೆರ್ ಡೆಲ್ಲಾ ಸೆರಾ ವರದಿಯ ಪ್ರಕಾರ, ಜೂನ್ 12, 2025 ರಂದು ವಿಮಾನದ ಇಂಜಿನ್‌ಗೆ ಇಂಧನ ಕಡಿತಗೊಂಡ ನಂತರ ಸಂಭವಿಸಿದ ಅಪಘಾತವು ಯಾಂತ್ರಿಕ ವೈಫಲ್ಯದಿಂದಲ್ಲ, ಬದಲಾಗಿ ಉದ್ದೇಶಪೂರ್ವಕ ಕ್ರಮದಿಂದ ಸಂಭವಿಸಿದೆ ಎಂದು ಭಾರತೀಯ ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ. ಈ ತನಿಖೆಯಲ್ಲಿ ಸಹಾಯ ಮಾಡುತ್ತಿರುವ ಅಮೆರಿಕದ ತಜ್ಞರು ಈ ಸಂಶೋಧನೆಗಳನ್ನು "ಒಂದು ಪ್ರಗತಿ" ಎಂದು ಬಣ್ಣಿಸಿದ್ದಾರೆ ಅಂತ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಘಟನೆಯ ಬಗ್ಗೆ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) 2025ರ ಜುಲೈ ತಿಂಗಳಲ್ಲಿ 15 ಪುಟಗಳ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ವಿಮಾನ ದುರಂತಕ್ಕೆ ಕಾರಣವಾದ ನಿರ್ಣಾಯಕ ತಾಂತ್ರಿಕ ಘಟನೆಗಳು ಮತ್ತು ಕಾಕ್‌ಪಿಟ್​ನಲ್ಲಿ ಪೈಲಟ್​​ಗಳಿಬ್ಬರ ಸಂಭಾಷಣೆ ವಿನಿಮಯಗಳನ್ನು ಕಾಲಾನುಕ್ರಮದಲ್ಲಿ ವಿವರಿಸಿತು. ವಿಮಾನದಲ್ಲಿದ್ದ ಪೈಲಟ್ "ನೀವು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ?" ಎಂದು ಕೇಳುವುದನ್ನು ಹಾಗೂ ನಾನದನ್ನು ಮಾಡಿಲ್ಲ ಎಂದು ಎರಡನೇ ಪೈಲಟ್​ ಹೇಳುವುದನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಸೆರೆಹಿಡಿದಿದೆ ಎಂಬ ಅಂಶ ವರದಿಯಲ್ಲಿತ್ತು.

Also Read
ಥಾಯ್ಲೆಂಡ್​ಗೆ ಬಡಿದ ರಣ ಪ್ರವಾಹ: ಮುಳುಗಿ ಹೋದ ಕಾರುಗಳ ದೃಶ್ಯಗಳು ವೈರಲ್, ​ತುರ್ತು ಪರಿಸ್ಥಿತಿ ಘೋಷಣೆ | Thailand Floods
ಏರ್ ಇಂಡಿಯಾ ವಿಮಾನ ದುರಂತ​: ಫೈನಲ್​ ರಿಪೋರ್ಟ್​ಗೆ ಪೈಲಟ್‌ ಸಂಘ ತೀವ್ರ ಆಕ್ಷೇಪ ಬೆನ್ನಲ್ಲೇ ಕೇಂದ್ರ ಸಚಿವರಿಗೆ ಪತ್ರ

ಇದೇ ಅಂಶವನ್ನು ಇಟಾಲಿಯನ್ ಪತ್ರಿಕೆಯು ಸಹ ಉಲ್ಲೇಖಿಸಿದೆ. ಪೈಲಟ್‌ಗಳಲ್ಲಿ ಒಬ್ಬರು ಇಂಜಿನ್ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಆಫ್ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಇದರಿಂದಾಗಿ ವಿಮಾನವು ಶಕ್ತಿಯನ್ನು ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿದೆ ಎಂದು ಪತ್ರಿಕೆ ವರದಿ ಮಾಡಿದೆ. ಅಂದಹಾಗೆ, ಈ ವಿಮಾನದಲ್ಲಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಪೈಲಟ್-ಇನ್-ಕಮಾಂಡ್ ಆಗಿದ್ದರೆ, ಮೊದಲ ಅಧಿಕಾರಿ ಕ್ಲೈವ್ ಕುಂದರ್ ಸಹ-ಪೈಲಟ್ ಆಗಿದ್ದರು ಎಂಬುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net