ಥಾಯ್ಲೆಂಡ್​ಗೆ ಬಡಿದ ರಣ ಪ್ರವಾಹ: ಮುಳುಗಿ ಹೋದ ಕಾರುಗಳ ದೃಶ್ಯಗಳು ವೈರಲ್, ​ತುರ್ತು ಪರಿಸ್ಥಿತಿ ಘೋಷಣೆ | Thailand Floods

ಪ್ರಕೃತಿಯ ವಿಕೋಪಕ್ಕೆ, ಥೈಲ್ಯಾಂಡ್​ ಸರ್ಕಾರವು ಬ್ಯಾಂಕಾಕ್‌ನ 50 ಜಿಲ್ಲೆಗಳನ್ನು ವಿಪತ್ತು ಪೀಡಿತ ಪ್ರದೇಶಗಳೆಂದು ಘೋಷಿಸಿ, ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆಗೆ ವಿಪತ್ತು ನಿರ್ವಹಣಾ ಪಡೆಗಳನ್ನು ಕಳುಹಿಸಿದೆ.
Thailand Floods
ಥಾಯ್ಲೆಂಡ್​ಗೆ ಬಡಿದ ರಣ ಪ್ರವಾಹ: ಕೊಚ್ಚಿ ಹೋದ ಕಾರುಗಳ ದೃಶ್ಯಗಳು ವೈರಲ್, ​ತುರ್ತು ಪರಿಸ್ಥಿತಿ ಘೋಷಣೆ
Published on: 
  • ಥಾಯ್ಲೆಂಡ್​ಗೆ ಬಡಿದ ರಣ ಪ್ರವಾಹ

  • ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ನೂರಾರು ಕಾರುಗಳು

  • 50 ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Thailand Floods: ಇತ್ತೀಚೆಗಷ್ಟೇ ನೇಪಾಳವನ್ನು ಸಮಾಧಿ ಮಾಡಿದ ಜಲಪ್ರಳಯದ ಘಟನೆ ಇಡೀ ಜಗತ್ತನ್ನೇ ಅಕ್ಷರಶಃ ಬೆಚ್ಚಿಬೀಳಿಸಿತ್ತು. ಈಗ ಅಂತಹದ್ದೇ ಒಂದು ಘಟನೆ ಥಾಯ್ಲೆಂಡ್​ನಲ್ಲಿ ಆವರಿಸಿದ್ದು, ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹ ಉಂಟಾಗಿ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ.

ರಾಜಧಾನಿ ಬ್ಯಾಂಕಾಕ್ 48 ಗಂಟೆಗಳ ನಿರಂತರ ಮಳೆಗೆ ಮುಳುಗಿ ಹೋಗಿದೆ. ನಗರದ ರಸ್ತೆಗಳು, ಕಾಲೋನಿಗಳು, ಮನೆಗಳು ಪ್ರವಾಹದಲ್ಲಿ ಜಲಾವೃತಗೊಂಡಿವೆ. ನೂರಾರು ಕಾರುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರವ ದೃಶ್ಯಗಳು ಎಂಥವರ ಮೈನಡುಗಿಸುವಂತಿದೆ. ಪ್ರಕೃತಿಯ ವಿಕೋಪಕ್ಕೆ, ಥೈಲ್ಯಾಂಡ್​ ಸರ್ಕಾರವು ಬ್ಯಾಂಕಾಕ್‌ನ 50 ಜಿಲ್ಲೆಗಳನ್ನು ವಿಪತ್ತು ಪೀಡಿತ ಪ್ರದೇಶಗಳೆಂದು ಘೋಷಿಸಿ, ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆಗೆ ವಿಪತ್ತು ನಿರ್ವಹಣಾ ಪಡೆಗಳನ್ನು ಕಳುಹಿಸಿದೆ.

ಬ್ಯಾಂಕಾಕ್ ಮೆಟ್ರೋಪಾಲಿಟನ್ ಅಡ್ಮಿನಿಸ್ಟ್ರೇಷನ್ (BMA) ಶನಿವಾರ ನಗರದ ಎಲ್ಲ 50 ಜಿಲ್ಲೆಗಳನ್ನು ವಿಪತ್ತು ಪ್ರದೇಶಗಳೆಂದು ಘೋಷಿಸಿದೆ. ಇದಕ್ಕೂ ಮುನ್ನ ಶುಕ್ರವಾರ ನಾಂಗ್ ಚೋಕ್, ಸುವಾನ್ ಲುವಾಂಗ್ ಮತ್ತು ಖಾನ್ ನಾ ಯಾವೊ ಜಿಲ್ಲೆಗಳನ್ನು ಮಾತ್ರ ವಿಪತ್ತು ಪ್ರದೇಶಗಳೆಂದು ಗುರುತಿಸಲಾಗಿತ್ತು. ಪರಿಸ್ಥಿತಿ ವಿಪರೀತ ಹದಗೆಟ್ಟಂತೆ, ಈ ವ್ಯಾಪ್ತಿಯನ್ನು ಇಡೀ ನಗರಕ್ಕೆ ವಿಸ್ತರಿಸಲಾಗಿದೆ. ಇತರ ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ತುರ್ತು ಪರಿಹಾರ ಕ್ರಮಗಳನ್ನು ತ್ವರಿತವಾಗಿ ಜಾರಿಗೊಳಿಸಲು ಅನುವು ಮಾಡಿಕೊಡಲಾಗಿದೆ.

300 ಮಿಲಿಮೀಟರ್ ಮಳೆ

ಗುರುವಾರ ಮಧ್ಯಾಹ್ನದಿಂದ ಬ್ಯಾಂಕಾಕ್‌ನಲ್ಲಿ ಸುಮಾರು 300 ಮಿಲಿಮೀಟರ್‌ಗಳಷ್ಟು ಮಳೆಯಾಗಿದ್ದು, ಇದು ನಗರದ ಒಳಚರಂಡಿ ವ್ಯವಸ್ಥೆಗೆ ತೀವ್ರ ಒತ್ತಡವನ್ನುಂಟು ಮಾಡಿದೆ ಎಂದು ಗವರ್ನರ್ ಚಾಡ್‌ಚಾರ್ಟ್ ಹೇಳಿದ್ದಾರೆ. ವ್ಯಾಪಕವಾದ ಕಾಲುವೆಗಳು ಸಹ ನೀರಿನಿಂದ ತುಂಬಿರುವುದರಿಂದ ಪ್ರವಾಹದ ನೀರು ಅನೇಕ ಪ್ರದೇಶಗಳಲ್ಲಿ ಮನೆಗಳು, ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ರಸ್ತೆಗಳಿಗೆ ನುಗ್ಗಿದೆ. ಪೂರ್ವ ಬ್ಯಾಂಕಾಕ್‌ನ ಕಾಲುವೆಗಳ ಸಮೀಪವಿರುವ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ 13 ಪ್ರಮುಖ ರಸ್ತೆಗಳು ಪ್ರವಾಹದಲ್ಲಿ ಮುಳುಗಿವೆ. ಈ ನಿಟ್ಟಿನಲ್ಲಿ, ವಾಹನಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಜನರಿಗೆ ಸಲಹೆ ನೀಡಿದ್ದಾರೆ.

ಪ್ರವಾಹದಿಂದಾಗಿ ಸುಮಾರು 980 ಜನರು ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದು, ಹಾಸಿಗೆ ಹಿಡಿದ 36 ಮಂದಿಯನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಬ್ಯಾಂಕಾಕ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಗುರುವಾರ ಮಧ್ಯಾಹ್ನದಿಂದ ಬಹುತೇಕ ನಿರಂತರ ಮಳೆಯ ನಂತರ ಬ್ಯಾಂಕಾಕ್‌ನ ಕಾಲುವೆಗಳು ನೀರಿನ ಗರಿಷ್ಠ ಮಟ್ಟವನ್ನು ತಲುಪಿವೆ. ನಗರದಲ್ಲಿ ಪಂಪಿಂಗ್ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಪಂಪಿಂಗ್ ಸ್ಟೇಷನ್‌ಗಳು ಸೇರಿ ಸೆಕೆಂಡಿಗೆ ಸುಮಾರು 1,200 ಕ್ಯೂಬಿಕ್ ಮೀಟರ್ ನೀರನ್ನು ಪಂಪ್ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿ ಸೆಪ್ಟೆಂಬರ್ 1ರಿಂದ 25 ರವರೆಗೆ ಒಟ್ಟು 487 ಮಿಮೀ ಮಳೆಯಾಗಿದೆ. 1991-2020ರ ನಡುವೆ ಇದೇ ಅವಧಿಯಲ್ಲಿ ದಾಖಲಾದ ಸರಾಸರಿ ಮಳೆಯು ಸುಮಾರು 269 ಮಿಮೀ ಮಾತ್ರ. ಅಂದರೆ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸೆಪ್ಟೆಂಬರ್ ಸಾಮಾನ್ಯವಾಗಿ ಬ್ಯಾಂಕಾಕ್‌ನಲ್ಲಿ ಮಳೆಗಾಲವು ತನ್ನ ಉತ್ತುಂಗವನ್ನು ತಲುಪುವ ತಿಂಗಳು. ಆದರೆ, ಈ ಬಾರಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ದಾಖಲಾಗುತ್ತಿದೆ. ಥಾಯ್ಲೆಂಡ್‌ನ ಹವಾಮಾನ ಇಲಾಖೆಯ ಪ್ರಕಾರ, ಕಡಿಮೆ ಮಧ್ಯ ಪ್ರದೇಶದಲ್ಲಿ ನಡೆಯುತ್ತಿರುವ ಕಡಿಮೆ ಒತ್ತಡದಿಂದಾಗಿ ಸೆಪ್ಟೆಂಬರ್ 27 ರವರೆಗೆ ಬ್ಯಾಂಕಾಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದೆ.

Also Read
ಭಾರತ ಪರ ಇದೇ ನನ್ನ... ಏಕದಿನ ವಿಶ್ವಕಪ್​ಗೂ ಮುನ್ನ ಅಚ್ಚರಿ ಹೇಳಿಕೆ ನೀಡಿದ ಕಿಂಗ್ ಕೊಹ್ಲಿ | Virat Kohli
Thailand Floods

ಹಠಾತ್ ಪ್ರವಾಹ, ಕಾಲುವೆಗಳು ಮತ್ತು ಜಲಮಾರ್ಗಗಳು ತುಂಬಿ ಹರಿಯುವ ಅಪಾಯದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಶನಿವಾರದ ಹೊತ್ತಿಗೆ, ಥಾಯ್ಲೆಂಡ್‌ನ 21 ಪ್ರಾಂತ್ಯಗಳಲ್ಲಿ 84,000ಕ್ಕೂ ಹೆಚ್ಚು ಜನರು ಪ್ರವಾಹದಿಂದ ತೊಂದರೆಗೆ ಸಿಲುಕಿದ್ದಾರೆ ಎಂದು ಸ್ಥಳೀಯ ವರದಿಗಳು ಬಹಿರಂಗಪಡಿಸಿವೆ. ಅಧಿಕಾರಿಗಳು ಮಳೆ ಮತ್ತು ನೀರಿನ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಭಾನುವಾರದವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿರುವುದರಿಂದ ಜನರು ಜಾಗರೂಕರಾಗಿರಲು ಅಧಿಕಾರಿಗಳು ಸಲಹೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net