Pawan Yadav: ಮಧ್ಯಪ್ರದೇಶದ ಸೇನಾ ಯೋಧ ಪವನ್ ಯಾದವ್ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟಿದ್ದಾರೆ. 14 ವರ್ಷ 5 ತಿಂಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, 28 ದಿನಗಳ ರಜೆ ಪಡೆದು ಮನೆಗೆ ಬರಬೇಕಿತ್ತು. ಆದ್ರೆ, ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಕರ್ತವ್ಯದಲ್ಲಿದ್ದಾಗ ಎತ್ತರದ ಪ್ರದೇಶದಿಂದ ಬಿದ್ದು ನವೆಂಬರ್ 17ರಂದು ಕೊನೆಯುಸಿರೆಳೆದಿದ್ದಾರೆ.
ನವೆಂಬರ್ 19ರಂದು 35 ವರ್ಷದ ಪವನ್ ಅವರ ಪಾರ್ಥಿವ ಶರೀರವನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿ, ದೇವಾಸ್ ಜಿಲ್ಲೆಯ ಅವರ ಸ್ವಗ್ರಾಮ ಪೊಲೇ ಜಾಗೀರ್ಗೆ ತರಲಾಯಿತು. ಪತಿ ರಜೆ ಮುಗಿಸಿ ಮನೆಗೆ ಬರ್ತಾರೆ ಅಂತ ಕಾಯುತ್ತಿದ್ದ ಶೋಭಾ ಯಾದವ್ಗೆ, ರಾಷ್ಟ್ರಧ್ವಜ ಹೊದ್ದ ಪತಿಯ ಪಾರ್ಥಿವ ಶರೀರವನ್ನು ಕಂಡು ದುಃಖ ತಡೆಯಲಾಗಲಿಲ್ಲ. ಈ ವೇಳೆ ಅವರು ಭಾವುಕರಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಪವನ್, ನೀನು ಸಿಂಹ ಇದ್ದಂತೆ. ನನ್ನ ಪತಿ ಸಿಂಹದ ಹಾಗೆ ಧೈರ್ಯವಂತರಾಗಿದ್ದರು. ನಾನು ಅಳಲ್ಲ, ಹೆಮ್ಮೆಯಿಂದ ಬೀಳ್ಕೊಡುತ್ತೇನೆ. ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿರುತ್ತೇನೆ ಎಂದು ಅವರು ಮಾತು ಕೊಟ್ಟಿದ್ದರು. ಅವರ ಪ್ರತಿಯೊಂದು ಮಾತನ್ನೂ ನಾನು ಉಳಿಸಿಕೊಳ್ಳುತ್ತೇನೆ’ ಎಂದು ಶೋಭಾ ಹೇಳಿದ್ದಾರೆ.
ಪವನ್ ಮತ್ತು ಶೋಭಾ ದಂಪತಿಗೆ 11 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಅಂತ್ಯಕ್ರಿಯೆ ವೇಳೆ ಹಿರಿಯ ಮಗನೇ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾನೆ. ಕುಟುಂಬಸ್ಥರು, ಗ್ರಾಮಸ್ಥರು ಪವನ್ಗೆ ಅಂತಿಮ ನಮನ ಸಲ್ಲಿಸಿದ್ದು, ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಭದ್ರತಾ ಸಿಬ್ಬಂದಿ ಗಾರ್ಡ್ ಆಫ್ ಆನರ್ ನೀಡಿ ಗೌರವ ಸಲ್ಲಿಸಿದ್ದಾರೆ.
ಕುಟುಂಬದ ಜತೆ 28 ದಿನ ಕಳೆಯಲು ರಜೆ ಪಡೆದಿದ್ದ ಪವನ್, ನವೆಂಬರ್ 18ರಂದು ಮನೆಗೆ ಬರಬೇಕಿತ್ತು. ಅದಕ್ಕೂ ಒಂದು ದಿನ ಮೊದಲು, ಅಂದ್ರೆ ನವೆಂಬರ್ 17ರ ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿ ಶೋಭಾಗೆ ಕರೆ ಮಾಡಿ ಮನೆಯವರ ಮತ್ತು ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದರು ಎಂದು ಅವರ ತಂದೆ ತಿಳಿಸಿದ್ದಾರೆ. ಆದರೆ, ಮರುದಿನ ಮನೆಗೆ ಬರಬೇಕಿದ್ದ ಮಗನ ಸಾವಿನ ಸುದ್ದಿ ಅದೇ ದಿನ ಕುಟುಂಬಕ್ಕೆ ತಲುಪಿತ್ತು.