ನವದೆಹಲಿ: ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ನೀಡಲು ವಿರೋಧ ಪಕ್ಷಗಳು ಸಂಚು ರೂಪಿಸುತ್ತಿವೆ ಎಂದು ಗಂಭೀರ ಆರೋಪ ಮಾಡಿರುವ ಪ್ರಧಾನಿ, ಈ ನಡೆ ಅತ್ಯಂತ ಆಘಾತಕಾರಿ ಎಂದು ದೂರಿದ್ದಾರೆ.
ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದ ವಿಶೇಷ ಲೇಖನದಲ್ಲಿ, 1949ರ ನವೆಂಬರ್ 26ರಂದು ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ಐತಿಹಾಸಿಕ ದಿನವನ್ನು ಮೋದಿ ಸ್ಮರಿಸಿದ್ದಾರೆ. ಯಾವುದೇ ಪಕ್ಷದ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಅವರು ಟೀಕಾಪ್ರಹಾರ ನಡೆಸಿದ್ದಾರೆ.
ವಿರೋಧ ಪಕ್ಷದ ಅತಿದೊಡ್ಡ ಪಕ್ಷವು ಒಬಿಸಿ ಮೀಸಲಾತಿಯನ್ನು ಕಡಿಮೆ ಮಾಡಿ ಮುಸ್ಲಿಂ ಮೀಸಲಾತಿಯನ್ನು ತರಲು ಬಯಸುತ್ತಿರುವುದು ಅತ್ಯಂತ ಆಘಾತಕಾರಿಯಾಗಿದ್ದು, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾಕಾರರು ಇದನ್ನು ಸಂಪೂರ್ಣವಾಗಿ ವಿರೋಧಿಸಿದ್ದರು ಎಂದು ಮೋದಿ ಬರೆದಿದ್ದಾರೆ.
ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷಗಳ ಧೋರಣೆಯನ್ನು ಖಂಡಿಸಿದ ಪ್ರಧಾನಿ, ವಿರೋಧ ಪಕ್ಷವು ವಿರೋಧ ಪಕ್ಷವಾಗಿರುವುದಕ್ಕಿಂತ ಹೆಚ್ಚಾಗಿ ಅವರೋಧ ಪಕ್ಷವಾಗಿ (ಅಡ್ಡಿಪಡಿಸುವ ಪಕ್ಷ) ಬದಲಾದಂತೆ ಕಾಣುತ್ತಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವುದು ಸಾಂವಿಧಾನಿಕ ಜವಾಬ್ದಾರಿಗಳನ್ನು ನಿಭಾಯಿಸಲು ಪರ್ಯಾಯವಲ್ಲ ಎಂದು ಚಾಟಿ ಬೀಸಿದ್ದಾರೆ.
ಈ ವರ್ಷದ ಏಪ್ರಿಲ್ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ವಿಫಲಗೊಳಿಸಿದ್ದನ್ನು ಉಲ್ಲೇಖಿಸಿದ ನಮೋ, ಅದೇ ವಿರೋಧ ಪಕ್ಷವು ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡದೆ ಸಾಂವಿಧಾನಿಕ ಮೌಲ್ಯಗಳಿಗೆ ಅಗೌರವ ತೋರಿದೆ ಎಂದು ಆರೋಪಿಸಿದ್ದಾರೆ. ಭಾರತದ ನಾರಿ ಶಕ್ತಿಗೆ ನ್ಯಾಯ ದೊರಕಿಸಿಕೊಡುವುದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.
ಐದು ದಶಕಗಳ ಕಾಲ ದೇಶವನ್ನು ಆಳಿದವರು ಸಂವಿಧಾನವನ್ನು ದುರ್ಬಲಗೊಳಿಸಿದ್ದಾರೆ ಎಂದು ದೂರಿದ ಪ್ರಧಾನಿ, 1951ರ ಮೊದಲ ತಿದ್ದುಪಡಿ (75 ವರ್ಷ) ಹಾಗೂ ತುರ್ತು ಪರಿಸ್ಥಿತಿಯ ವೇಳೆ ತಂದ 42ನೇ ತಿದ್ದುಪಡಿಯನ್ನು (50 ವರ್ಷ) ಉಲ್ಲೇಖಿಸಿದ್ದಾರೆ. ಅಧಿಕಾರದಾಹದ ನಾಯಕತ್ವ ಏನು ಮಾಡಬಹುದು ಎಂಬುದನ್ನು ತಿಳಿಯಲು ಯುವಜನರು 38 ಮತ್ತು 39ನೇ ತಿದ್ದುಪಡಿಗಳನ್ನು ಅಧ್ಯಯನ ಮಾಡಬೇಕೆಂದು ಕರೆ ನೀಡಿದ್ದಾರೆ. ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಲು 356ನೇ ವಿಧಿಯನ್ನು ಸುಮಾರು 100 ಬಾರಿ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಒಬ್ಬ ಮಾಜಿ ಪ್ರಧಾನಿಯಂತೂ ಈ ಕ್ಷೇತ್ರದಲ್ಲಿ ಅರ್ಧಶತಕ ಬಾರಿಸಿದ್ದರು ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ, 370 ಮತ್ತು 35A ವಿಧಿಗಳು 70 ವರ್ಷಗಳ ಕಾಲ ಜಮ್ಮು-ಕಾಶ್ಮೀರದ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿದ್ದವು ಎಂದಿದ್ದಾರೆ.
ಈ ವರ್ಷ ಮಾವೋವಾದಿಗಳ ಅಂತ್ಯವಾಗಿರುವುದು ಅತ್ಯಂತ ಸಂತಸದ ವಿಷಯ ಎಂದಿರುವ ಮೋದಿ, ಬುಡಕಟ್ಟು ನಾಗರಿಕರು ಈಗ ಭಯವಿಲ್ಲದೆ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ ಎಂದಿದ್ದಾರೆ. ಆದರೆ, ದೇಶದ ಅಭಿವೃದ್ಧಿಯ ವೇಗಕ್ಕೆ ಅಡ್ಡಿಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ದಿಮಾಗಿ ನಕ್ಸಲರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಕಿವಿಮಾತು ಹೇಳಿದ್ದಾರೆ.
ತಮ್ಮ ಬಾಲ್ಯದ ಬಡತನದ ದಿನಗಳನ್ನು ನೆನೆದ ಪ್ರಧಾನಿ ಮೋದಿ, ಸಂವಿಧಾನದಿಂದಾಗಿ ಇಂದು ಹುಟ್ಟಿನ ಸಂದರ್ಭಗಳು ಒಬ್ಬರ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂದಿದ್ದಾರೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿರುವ ಅವರು, ಪಿಎಂ ಆವಾಸ್, ಉಜ್ವಲ ಮತ್ತು ಆಯುಷ್ಮಾನ್ ಭಾರತ್ ಯೋಜನೆಗಳು ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸಿವೆ ಎಂದು ಅಭಿಪ್ರಾಯಾಪಟ್ಟಿದ್ದಾರೆ(ಏಜೆನ್ಸೀಸ್).