ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಕೊಲೆ; ಇದು ಯೋಜಿತ ದಾಳಿ ಎಂದ ಬಿಜೆಪಿ: ಡಿಜಿಪಿ ಹೇಳಿದ್ದೇನು? | West Bengal

ಚಂದ್ರನಾಥ್ ರಥ್ ಮತ್ತು ಸುವೇಂದು ಅಧಿಕಾರಿ
ಚಂದ್ರನಾಥ್ ರಥ್ ಮತ್ತು ಸುವೇಂದು ಅಧಿಕಾರಿ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ರಾಜಕೀಯ ಹತ್ಯೆಗಳು ಆರಂಭವಾಗಿವೆ. ಬಿಜೆಪಿ ಹಿರಿಯ ನಾಯಕ ಮತ್ತು ಮಮತಾ ಬ್ಯಾನರ್ಜಿಯವರನ್ನೇ ಸೋಲಿಸಿದ್ದ ಸುವೇಂದು ಅಧಿಕಾರಿ ಅವರ ವೈಯಕ್ತಿಕ ಸಹಾಯಕ (PA) ಚಂದ್ರನಾಥ್ ರಥ್ ಅವರನ್ನು ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಚಂದ್ರನಾಥ್ ರಥ್​ ಕೊಲೆಯನ್ನು ಉದ್ದೇಶಿತ ಮತ್ತು ಪೂರ್ವಯೋಜಿತ ದಾಳಿ ಎಂದು ಕರೆದಿರುವ ಬಿಜೆಪಿ ನಾಯಕ ಸುಜಯ್ ಕುಮಾರ್ ಡೇ, ಈ ಪ್ರದೇಶದಲ್ಲಿ ಭಯ ಹುಟ್ಟಿಸಲು ಮತ್ತು ಪ್ರಾಬಲ್ಯ ಸಾಧಿಸಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಘಟನೆಯನ್ನು ಸಂಘಟಿಸಿದೆ ಎಂದು ಆರೋಪಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದಕ್ಕೆ ಯಾರು ಹೊಣೆ? ಬೊಂಗಾದಿಂದ ರಾಜರಹತ್ ಮತ್ತು ಗೋಪಾಲಪುರದಂತಹ ಸ್ಥಳಗಳವರೆಗೆ ಬಿಜೆಪಿ ಗೆದ್ದಿದೆ. ಮಧ್ಯಮಗ್ರಾಮದಲ್ಲಿ ಬಿಜೆಪಿ ಯಾಕೆ ಗೆಲ್ಲಲಿಲ್ಲ? ಏಕೆಂದರೆ ಅವರು ಮಧ್ಯಮಗ್ರಾಮವನ್ನು ಟಿಎಂಸಿ ತಮ್ಮ ಭಯೋತ್ಪಾದನೆಯ ಸ್ಥಳವನ್ನಾಗಿ ಮಾಡಲು ಬಯಸುತ್ತಾರೆ. ಇದು ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.
ನಮಗೆ ದೊರೆತ ಮಾಹಿತಿಯ ಪ್ರಕಾರ, ಘಟನೆಯಲ್ಲಿ ನಾಲ್ಕರಿಂದ ಐದು ವ್ಯಕ್ತಿಗಳು ಭಾಗಿಯಾಗಿದ್ದು, ಬೈಕ್​ನಲ್ಲಿ ಬಂದು ಕಾರು ಅಡ್ಡಗಟ್ಟಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಮತ್ತು ಚಾಲಕ ಇಬ್ಬರೂ ಕಾರಿನಲ್ಲಿದ್ದರು. ಆದರೆ ಅಧಿಕಾರಿಯವರ ಆಪ್ತ ಸಹಾಯಕರನ್ನು ಮಾತ್ರ ಗುರಿಯಾಗಿಸಿಕೊಂಡು ಕೊಲ್ಲಲಾಯಿತು ಎಂದು ತಿಳಿಸಿದ್ದಾರೆ.
ಈ ಕೃತ್ಯದ ಮೂಲಕ ಟಿಎಂಸಿ ಮಧ್ಯಮಗ್ರಾಮದಲ್ಲಿ ಭಯವನ್ನು ಹುಟ್ಟುಹಾಕಲು ಮತ್ತು ಅಧಿಕಾರ ಇನ್ನೂ ಟಿಎಂಸಿ ಬಳಿಯೇ ಇದೆ ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಡಿಜಿಪಿ ಸಿದ್ಧ್ ನಾಥ್ ಗುಪ್ತಾ ಹೇಳಿದ್ದೇನು?

ಸುವೇಂದು ಅಧಿಕಾರಿ ಸಹಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಡಿಜಿಪಿ ಸಿದ್ಧ್ ನಾಥ್ ಗುಪ್ತಾ, ಘಟನೆ ನಡೆದ ಸ್ಥಳದಿಂದ ಜೀವಂತ ಗುಂಡುಗಳು ಮತ್ತು ಗುಂಡು ಹಾರಿಸಿದ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯನ್ನು ಪ್ರಾರಂಭಿಸಿದ್ದೇವೆ. ಅಪರಾಧಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅದರ ನಂಬರ್ ಪ್ಲೇಟ್ ನಕಲಿ ಮತ್ತು ಅದನ್ನು ತಿರುಚಲಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net