ಮುಂಬೈ ರೈಲು ನಿಲ್ದಾಣದಲ್ಲಿ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ: ಯುವಕ ಅರೆಸ್ಟ್! Mumbai crime

ರೈಲು ನಿಲ್ದಾಣದ ಮಹಿಳಾ ಶೌಚಾಲಯದಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲವೇ? ಮುಂಬೈನ ಘಾಟ್ಕೋಪರ್ ರೈಲು ನಿಲ್ದಾಣದಲ್ಲಿ 60 ವರ್ಷದ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 25 ವರ್ಷದ ಯುವಕನನ್ನು ಸರ್ಕಾರಿ ರೈಲ್ವೆ ಪೊಲೀಸರು (GRP) ಬಂಧಿಸಿದ್ದಾರೆ. ನವೆಂಬರ್ 26ರಂದು ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.Mumbai crime
ಮುಂಬೈ ರೈಲು ನಿಲ್ದಾಣದಲ್ಲಿ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ
ಮುಂಬೈ ರೈಲು ನಿಲ್ದಾಣದಲ್ಲಿ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯWEB
Published on: 

ಮುಂಬೈ: ರೈಲು ನಿಲ್ದಾಣದ ಮಹಿಳಾ ಶೌಚಾಲಯದಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲವೇ? ಮುಂಬೈನ ಘಾಟ್ಕೋಪರ್ ರೈಲು ನಿಲ್ದಾಣದಲ್ಲಿ 60 ವರ್ಷದ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 25 ವರ್ಷದ ಯುವಕನನ್ನು ಸರ್ಕಾರಿ ರೈಲ್ವೆ ಪೊಲೀಸರು (GRP) ಬಂಧಿಸಿದ್ದಾರೆ. ನವೆಂಬರ್ 26ರಂದು ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಗಳೊಂದಿಗೆ ರೈಲು ಹತ್ತಲು ಬಂದಿದ್ದ ವೃದ್ಧೆ

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಸಂತ್ರಸ್ತ ಮಹಿಳೆ ತನ್ನ ಮಗಳೊಂದಿಗೆ ಖಡವ್ಲಿಗೆ ತೆರಳಲು ಘಾಟ್ಕೋಪರ್ ರೈಲು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಪ್ಲಾಟ್‌ಫಾರ್ಮ್ 2 ಮತ್ತು 3ರ ಸಿಎಸ್‌ಎಂಟಿ ತುದಿಯಲ್ಲಿರುವ ಮಹಿಳಾ ಶೌಚಾಲಯಕ್ಕೆ ತೆರಳಿದ್ದಾರೆ. ಆಗ ಅಪರಿಚಿತ ವ್ಯಕ್ತಿಯೊಬ್ಬ ಶೌಚಾಲಯದೊಳಗೆ ಪ್ರವೇಶಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಶೌಚಾಲಯದಲ್ಲಿ ಯಾವುದೇ ಸಿಬ್ಬಂದಿ ನಿಯೋಜನೆ ಇರಲಿಲ್ಲ ಎನ್ನಲಾಗಿದೆ. ದೌರ್ಜನ್ಯದ ವೇಳೆ ಮಹಿಳೆಗೆ ತಲೆಗೆ ಗಾಯವಾಗಿದ್ದು, ಬಳಿಕ ಅವರು ಪ್ಲಾಟ್‌ಫಾರ್ಮ್ 4ರಲ್ಲಿ ಕಾಣಿಸಿಕೊಂಡಿದ್ದಾರೆ.

ರಾತ್ರಿ 11.40ಕ್ಕೆ ಪೊಲೀಸರಿಗೆ ಮಾಹಿತಿ

ನವೆಂಬರ್ 26ರ ರಾತ್ರಿ ಸುಮಾರು 11.40ರ ವೇಳೆಗೆ ಘಾಟ್ಕೋಪರ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಮಹಿಳೆಯೊಬ್ಬರಿಗೆ ತಲೆಗೆ ಗಾಯವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸರ್ಕಾರಿ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕರ್ತವ್ಯದಲ್ಲಿದ್ದ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿಯೂ ಮಹಿಳೆಗೆ ನೆರವಾಗಿದ್ದಾರೆ.ಮಹಿಳಾ GRP ಸಿಬ್ಬಂದಿ ನಡೆಸಿದ ಪ್ರಾಥಮಿಕ ವಿಚಾರಣೆ ವೇಳೆ ಸಂತ್ರಸ್ತೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಘಾಟ್ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಮಗಳು ಆಸ್ಪತ್ರೆಯಲ್ಲಿ ಜೊತೆಯಲ್ಲಿದ್ದಾರೆ.

Also Read
ಬೆದರಿಕೆ ನಡುವೆಯೂ ದಿಲ್ಜಿತ್ ದೋಸಾಂಜ್ ದಿಟ್ಟ ಪ್ರತಿಕ್ರಿಯೆ! ಅಭಿಮಾನಿಗಳಿಂದ ಭಾರಿ ಮೆಚ್ಚುಗೆ | Diljit Dosanjh
ಮುಂಬೈ ರೈಲು ನಿಲ್ದಾಣದಲ್ಲಿ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ

ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿ ಪತ್ತೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ರಾತ್ರಿ 11.12ರ ಸುಮಾರಿಗೆ ಮಹಿಳೆ ಶೌಚಾಲಯದೊಳಗೆ ಪ್ರವೇಶಿಸಿದ್ದು, ಸುಮಾರು 11.22ಕ್ಕೆ ಹೊರಬಂದಿರುವುದು ಕಂಡುಬಂದಿದೆ. ಇದೇ ಸಮಯದಲ್ಲಿ ಪ್ಲಾಟ್‌ಫಾರ್ಮ್ 2ರಿಂದ ವ್ಯಕ್ತಿಯೊಬ್ಬ ಶೌಚಾಲಯದೊಳಗೆ ಹೋಗಿ, ರಾತ್ರಿ 11.19ರ ಸುಮಾರಿಗೆ ಆತುರದಿಂದ ಹೊರಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಆತ ಮೆಟ್ರೋ ನಿಲ್ದಾಣದ ಕಡೆಗೆ ತೆರಳಿರುವುದೂ ದೃಶ್ಯಾವಳಿಗಳಲ್ಲಿ ಪತ್ತೆಯಾಗಿದೆ.

ಈ ಸುಳಿವುಗಳ ಆಧಾರದ ಮೇಲೆ ಪೊಲೀಸರು ಶಂಕಿತ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತನಿಗೆ 25 ವರ್ಷ ವಯಸ್ಸಾಗಿದ್ದು, ಸದ್ಯ ಆತನ ಉದ್ಯೋಗ ಮತ್ತು ವಿಳಾಸದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಆತ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಂತೆ ಕಂಡುಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ರೈಲು ನಿಲ್ದಾಣದಂತಹ ಜನನಿಬಿಡ ಸಾರ್ವಜನಿಕ ಸ್ಥಳದಲ್ಲಿರುವ ಮಹಿಳಾ ಶೌಚಾಲಯದಲ್ಲೇ ಇಂತಹ ಘಟನೆ ನಡೆದಿರುವುದು ಮಹಿಳೆಯರ ಸುರಕ್ಷತೆ ಮತ್ತು ನಿಲ್ದಾಣಗಳ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.