ನವದೆಹಲಿ: ಜನಪ್ರಿಯ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಬಂದಿದ್ದರೂ, ಅದಕ್ಕೆ ಹೆದರದೆ ವೇದಿಕೆಯಲ್ಲಿ ನಿಂತು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮುಂಬೈನ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ನಡೆದ ಆರಾ ಇಂಡಿಯಾ ಟೂರ್ 2026 ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆದರಿಕೆ ಹಾಕುವವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ತಮ್ಮ ಸಂಗೀತವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಮಾತಿನ ಮೂಲಕವೇ ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮದ ವೇಳೆ ಮಾತನಾಡಿದ ದಿಲ್ಜಿತ್, ದಿಲ್ಜಿತ್‌ನ ಕಾರ್ಯಕ್ರಮವನ್ನು ಬಾಂಬ್ ಹಾಕಿ ಸ್ಫೋಟಿಸಬೇಕು ಎಂಬುದು ಅವರ ಉದ್ದೇಶವಂತೆ. ವಾಹ್ ಜನರು ಕಾರ್ಯಕ್ರಮಕ್ಕೆ ಬರದಂತೆ ತಡೆಯುವುದು, ಅವರನ್ನು ಹೆದರಿಸುವುದು, ಬೆದರಿಸುವುದು ಮತ್ತು ಹೇಗಾದರೂ ಮಾಡಿ ಕಾರ್ಯಕ್ರಮ ನಿಲ್ಲಿಸುವುದೇ ಅವರ ಗುರಿ. ನಾನು ನಿಮಗೆ ಪ್ರೀತಿಯನ್ನಷ್ಟೇ ಕಳುಹಿಸುತ್ತೇನೆ. ನಿಮಗೆ ಬಾಂಬ್ ಹಾಕಬೇಕೆನಿಸಿದರೆ ಹಾಕಿ, ಆದರೆ ನನ್ನಿಂದ ನಿಮಗೆ ಸಿಗುವುದು ಪ್ರೀತಿಯಷ್ಟೇ ಎಂದು ಹೇಳಿದ್ದಾರೆ.
ತಮ್ಮ ಹಾಡುಗಳ ಬಗ್ಗೆ ಮಾತನಾಡಿದ ದಿಲ್ಜಿತ್, ತಾವು ಹಳ್ಳಿಯಿಂದ ಬಂದವರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ನಾನು ಹಾಡುವುದು ಹಳ್ಳಿಗೆ ಸೇರಿದ ಹಾಡುಗಳನ್ನು. ನಾನೂ ಹಳ್ಳಿಯಿಂದಲೇ ಬಂದವನು. ನನ್ನ ಹಾಡುಗಳಲ್ಲಿ ಒಂದೂ ನಿಮಗೆ ಅರ್ಥವಾಗದಿದ್ದರೂ, ಅವುಗಳಲ್ಲಿ ನಮ್ಮ ಹಳ್ಳಿಯ ಮಣ್ಣಿನ ಸೊಗಡನ್ನು ಖಂಡಿತ ಅನುಭವಿಸುತ್ತೀರಿ ಎಂದು ಹೇಳಿದ್ದಾರೆ.
ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳು ಹೊರಗೆ ಕಾಯುತ್ತಿರುವುದನ್ನು ಗಮನಿಸಿದ ಅವರು, ಪೊಲೀಸರು ಎದುರಿಸುತ್ತಿರುವ ಸವಾಲಿನ ಬಗ್ಗೆಯೂ ಮಾತನಾಡಿದ್ದಾರೆ. ಪ್ರತಿಯೊಬ್ಬರನ್ನೂ ಪರಿಶೀಲಿಸಿದ ಬಳಿಕವೇ ಒಳಗೆ ಬಿಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಭದ್ರತಾ ವ್ಯವಸ್ಥೆ ಕಲ್ಪಿಸಿದ ಮುಂಬೈ ಪೊಲೀಸರಿಗೆ ಧನ್ಯವಾದಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಿಲ್ಜಿತ್ ಅವರ ಮುಂಬೈ ಸಂಗೀತ ಕಾರ್ಯಕ್ರಮಕ್ಕೂ ಒಂದು ದಿನ ಮುನ್ನ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೇಯರ್ ರಿತು ತಾವ್ಡೆ ಮತ್ತು ಮುನ್ಸಿಪಲ್ ಕಮಿಷನರ್ ಅಶ್ವಿನಿ ಭಿಡೆ ಅವರಿಗೆ ಬೆದರಿಕೆ ಇ-ಮೇಲ್ ಬಂದಿತ್ತು. ಮುಂಬೈ ಮೇಯರ್ ಕಚೇರಿ, ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಜಲ್ಸಾ ನಿವಾಸ ಸೇರಿದಂತೆ ನಗರದ ವಿವಿಧೆಡೆ ಬಾಂಬ್ ಸ್ಫೋಟ ನಡೆಸುವುದಾಗಿ ಇ-ಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿತ್ತು.
ಈ ಬೆದರಿಕೆ ಸಂದೇಶದ ಬೆನ್ನಲ್ಲೇ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು. ಕಾರ್ಯಕ್ರಮದ ಸ್ಥಳದಲ್ಲಿಯೂ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿದ ಬಳಿಕವೇ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಬೆದರಿಕೆಗಳ ನಡುವೆಯೂ ಕಾರ್ಯಕ್ರಮವನ್ನು ಮುಂದುವರಿಸಿದ ದಿಲ್ಜಿತ್ ಅವರ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ. ಬೆದರಿಕೆಗಳಿಗೆ ಹೆದರುವ ಬದಲು ಪ್ರೀತಿಯ ಸಂದೇಶ ಸಾರಿದ ಅವರ ನಿಲುವು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.