

ಚಾಂಗ್‌ಲಾಂಗ್: ಅರುಣಾಚಲ ಪ್ರದೇಶದ, ಭಾರತ-ಮಯನ್ಮಾರ್ ಗಡಿಯಲ್ಲಿ, ಅಸ್ಸಾಂ ರೈಫಲ್ಸ್ ಹಾಗೂ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದು, ಅಸ್ಸಾಂ ರೈಫಲ್ಸ್ (Assam Rifles)ನ ಒಬ್ಬ ಅಧಿಕಾರಿ ಸಾವನ್ನಪ್ಪಿದ್ದರೆ, ನಾಲ್ವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ಇಂಡೋ-ಮಯನ್ಮಾರ್ ಗಡಿ ಜಿಲ್ಲೆಯಾದ ಚಾಂಗ್ಲಾಂಗ್ನಲ್ಲಿ, ಉಗ್ರಗಾಮಿಗಳು ಅಡಗಿರುವ ಮಾಹಿತಿ ಹಿನ್ನಲೆ ಅಸ್ಸಾಂ ರೈಫಲ್ಸ್ನ ತಂಡವೊಂದು ಪೆಟ್ರೋಲಿಂಗ್ಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪೆಟ್ರೋಲಿಂಗ್ಗೆ ತೆರಳಿದ್ದ 21 ನೇ ಅಸ್ಸಾಂ ರೈಫಲ್ಸ್ನ ಹವಲ್ದಾರ್ ಜಂಖೋಕೈ ಕುಕಿ (42) ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ನಾಲ್ವರಿಗೆ ಗುಂಡು ತಗುಲಿ ಗಂಭೀರ ಗಾಯವಾಗಿದೆ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ, ಗಾಯಗೊಂಡವರನ್ನು, ಹತ್ತಿರದ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಗುಪ್ತಚರ ಮಾಹಿತಿ ಮೆರೆಗೆ, ಪೆಟ್ರೋಲಿಂಗ್ಗೆ ತೆರಳಿದ್ದ ಸೈನ್ಯದ ತುಕಡಿ ಮೇಲೆ, ಒಂದೇ ಸಮನೇ ಗುಂಡಿನ ದಾಳಿ ನಡೆದಿದೆ ಎಂದು ಪ್ರಾಥಮಿಕ ವರದಿ ಹೇಳುತ್ತಿದ್ದು, ಈ ದಾಳಿಯ ಹಿಂದೆ ಯಾವ ಉಗ್ರಗಾಮಿ ಗುಂಪಿನ ಕೈವಾಡವಿದೆ ಎನ್ನವುದು ತನಿಖೆ ನಂತರ ತಿಳಿದು ಬರಬೇಕಿದೆ.
ಈ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಾಂಗ್‌ಲಾಂಗ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಕಿರ್ಲಿ ಪಾಡು, ಅಸ್ಸಾಂ ರೈಫಲ್ಸ್ ಮೇಲಿನ ಗುಂಡಿನ ದಾಳಿ ಬಗ್ಗೆ ನಮಗೆ ಮಾಹಿತಿ ದೊರೆತಿದ್ದು, ಇದರ ಹಿಂದಿರುವ ಸ್ಥಳೀಯ ಶಕ್ತಿ ಯಾವುದೆಂದು ತಿಳಿಯಲು ಪೊಲೀಸ್ ಪಡೆ ಮುಂದಾಗಿದೆ ಎಂದಿದ್ದಾರೆ.
ಇದನ್ನು ತನಿಖೆ ಮಾಡಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಸದ್ಯದಲ್ಲೇ ಸತ್ಯಾಸತ್ಯೆಗೆ ಬಯಲಾಗಲಿದೆ, ಅಷ್ಟೇ ಅಲ್ಲದೇ, ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಅಸ್ಸಾಂ ರೈಫಲ್ಸ್ ನಡೆಸುವ ತನಿಖೆಯಲ್ಲಿ ಕೂಡ ಪೊಲೀಸರು ಸಕ್ರೀಯವಾಗಿ ಭಾಗಹಿಸುತ್ತಾರೆ ಎಂದು ಆಶ್ವಾಸನೆ ನೀಡಿದ್ದಾರೆ.
ಪೆಟ್ರೋಲಿಂಗ್ಗೆ ತೆರಳಿದ್ದ ಅಸ್ಸಾಂ ರೈಫಲ್ಸ್ ತುಕಡಿ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಅಸ್ಸಾಂ ರೈಫಲ್ಸ್ ಅಧಿಕಾರಿಗಳು, ನಮ್ಮ ಮೇಲೆ ಗುಂಡನ್ನು ಹಾರಿಸಿದವರ ವಿರುದ್ಧ ಮಿಲಿಟರಿ ಕಾರ್ಯಚರಣೆಯನ್ನು ಈಗಾಗಲೇ ಆರಂಭಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಅವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಲಿದ್ದೆವೆಂದು ಹೇಳಿದ್ದಾರೆ. ಈ ಉಗ್ರ ಕೃತ್ಯವು, ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿರುವ ಹಿನ್ನಲೆ ಭಾರತ ಹಾಗೂ ಮಯನ್ಮಾರ್ ದೇಶಗಳ ವಿದೇಶಾಂಗ ಇಲಾಖೆ ಕೂಡ ತನಿಖೆಯಲ್ಲಿ ಭಾಗವಹಿಸಬಹುದೆಂದು ಹೇಳಲಾಗುತ್ತಿದೆ, (ಏಜೆನ್ಸೀಸ್).