

ನವದೆಹಲಿ: ಕಳೆದ ಕೆಲ ದಿನಗಳಿಂದ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತರ ಬಗ್ಗೆ ದೇಶದಲ್ಲಿ ನಾನಾ ರೀತಿಯ ಚರ್ಚೆ-ವಿಚರ್ಚೆ ನಡೆಯುತ್ತಿದೆ. ಇದರ ಹಿನ್ನಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಮಂಗಳವಾರ (ಸೆ.29) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಜ್ಞಾನೇಶ್ ಕುಮಾರ್ ಒಬ್ಬ ನರೇಂದ್ರ ಮೋದಿ ಸರ್ಕಾರದ ಕೈಗೊಂಬೆ ಎಂದು ಹರಿಹಾಯ್ದಿದ್ದು, ಅವರಿಗೆ ಮುಖ್ಯ ಚುನಾವಣಾಧಿಕಾರಿಯಾಗಿ ಮುಂದುವರಿಯಲು ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಮೀಟಿಂಗ್ನಲ್ಲಿ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ವಿರುದ್ಧ ಹರಿದಾಯ್ದ ಖರ್ಗೆ, ಕೇಂದ್ರ ಚುನಾವಣಾ ಆಯೋಗದ ಎದುರು ಪ್ರಮುಖ 5 ಬೇಡಿಕೆಗಳನ್ನು ಇಟ್ಟಿದ್ದರೆ.
ಮೊದಲನೆಯದಾಗಿ ಪರಿಷ್ಕೃತ ಎಸ್ಐಆರ್ ಪ್ರತಿಗಳನ್ನು ಸಾರ್ವಜನಿಕಗೊಳಿಸಬೇಕು. ಇದನ್ನು ಪ್ರತಿಯೊಬ್ಬ ನಾಗರಿಕ ನೋಡಲು ಅವಕಾಶ ನೀಡಬೇಕು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ದಾಖಲಾಗದಿದ್ದರೆ, ಅದನ್ನು ಸರಿಪಡಿಸಲು ಸಮಯವಕಾಶ ನೀಡಬೇಕು. ಎಸ್ಐಆರ್ನ ಫಾರ್ಮ್ಗಳಲ್ಲಿ ಸರಳ ಭಾಷೆ ಹಾಗೂ ಸರಳ ಪ್ರಶ್ನೆಗಳನ್ನು ಕೇಳಬೇಕು. ಜನರಿಗೆ ಮತದಾನದ ಹಕ್ಕನ್ನು ನೀಡುವುದು ಆಯೋಗದ ಪ್ರಮುಖ ಗುರಿಯಾಗಿರಬೇಕು.
ಈ ನಡುವೆ ನಡೆದಿರುವ ಎಸ್ಐಆರ್ನಲ್ಲಿ ಹಲವು ಸಂದರ್ಭಗಳಲ್ಲಿ ಪಿತೂರಿ ಮೂಲಕ ಕೆಲ ವರ್ಗದ ಜನರನ್ನು ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲಾಗಿದ್ದು, ಈ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದಾರೆ.
ಮುಖ್ಯ ಚುನಾವಣಾಧಿಕಾರಿಗಳ ಕೆಲ ನಿರ್ಧಾರಗಳ ಬಗ್ಗೆ ತಮಗೇ ಸಮ್ಮತಿ ಹಾಗೂ ಮಾಹಿತಿ ಇರಲಿಲ್ಲ ಎಂದು ಇಬ್ಬರು ಚುನಾವಣಾಧಿಕಾರಿಗಳು ಮಾಡಿರುವ ಆರೋಪ, ಗಂಭೀರ ಸ್ವರೂಪದ್ದಾಗಿದೆ. ಹೀಗಾಗಿ ಇದನ್ನು ಇಲ್ಲಿಗೆ ಬಿಡುವಂತಿಲ್ಲ ಎಂದು ವರು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪತ್ರಿಕೆಯೊಂದರ ತನಿಖಾ ವರದಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ಕೆಲವೊಂದಿಷ್ಟು ನಿರ್ಧಾರಗಳ ವಿರುದ್ಧ ಇತರ ಆಯಕ್ತರು ವಿರೋಧವನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿತ್ತು.
ವರದಿ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಗಮನಕ್ಕೆ ತರದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೊರಡಿಸಿದ ನಿರ್ಧಾರಗಳು ಮತ್ತು ಆದೇಶಗಳ ವಿರುದ್ಧ ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪಣೆಯನ್ನು ದಾಖಲಿಸಿದ್ದಾರೆ. ಈ ಆಕ್ಷೇಪಣೆಗಳಲ್ಲಿ ಮತದಾರರ ನೋಂದಣಿಯ ಶಾಸನಬದ್ಧ ಅರ್ಜಿ ಫಾರ್ಮ್ 6 ರಲ್ಲಿ ಮಾಡಲಾದ ಬದಲಾವಣೆಗಳು ಮತ್ತು ಮತದಾರರ ಪಟ್ಟಿಯ ಡೇಟಾಬೇಸ್ ಮೇಲಿನ ಕೇಂದ್ರೀಕೃತ ನಿಯಂತ್ರಣವೂ ಸೇರಿದೆ ಎಂದು ಹೇಳಲಾಗಿದೆ.
ಆದರೆ, ಚುನಾವಣಾ ಆಯೋಗ, ವಿಭಿನ್ನ ಅಭಿಪ್ರಾಯಗಳು ಸಮಾಲೋಚನೆಯ ಸಾಮಾನ್ಯ ಭಾಗವಾಗಿದ್ದು, ಎಸ್ಐಆರ್ಗೆ ಸಂಬಂಧಿಸಿದ ನಿರ್ಧಾರಗಳು ಸೇರಿದಂತೆ ಅಂತಿಮ ನಿರ್ಧಾರಗಳು ಸರ್ವಾನುಮತದಿಂದ ಕೂಡಿದ್ದವು ಎಂದು ಹೇಳಿದೆ. ಇತ್ತ ಸಂಧು ಅಥವಾ ಜೋಶಿ ಇಬ್ಬರೂ ತಮ್ಮ ಹೆಸರಿನಲ್ಲಿ ಪ್ರಕಟವಾದ ಈ ಆಕ್ಷೇಪಣೆಗಳ ಬಗ್ಗೆ ಸಾರ್ವಜನಿಕವಾಗಿ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ಈ ವಿಷಯ ಬಹಿರಂಗವಾದ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮೇಲಿನ ಅನುಮಾನ ಇನ್ನಷ್ಟು ಹೆಚ್ಚಾಗಿದ್ದು, ಎಸ್ಐಆರ್ ನೆಪದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಟ್ಟು, ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಆದರೆ, ಚುನಾವಣಾ ಆಯೋಗವು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ, (ಏಜೆನ್ಸೀಸ್).