

ಮುಂಬೈ: 26/11 ರ ದಾಳಿ ನಡೆದು ಇಂದಿಗೆ ಭರ್ತಿ 18 ವರ್ಷ ತುಂಬಿದೆ. 2008 ರ ಆ ನಾಲ್ಕು ದಿನವನ್ನು ಭಾರತ ಅದರಲ್ಲೂ ಮುಂಬೈ ಕಂಡ ಅತ್ಯಂತ ಕರಾಳ ದಿನಗಳಲ್ಲಿ ಒಂದಾಗಿದೆ. ಪರ ದೇಶದಿಂದ ಬಂದಿಳಿದ ಭಯೋತ್ಪಾದರು ಮುಂಬೈಅನ್ನು ಗುರಿಯಾಗಿಸಿ, ರಕ್ತದೊಕುಳಿಯನ್ನೇ ಹರಿಸಿದರು.
ಈ ಸಂದರ್ಭದಲ್ಲಿ ನಾವು ಅಂದು ಪ್ರಾಣವನ್ನು ಲೆಕ್ಕಿಸದೇ ಹೋರಾಡಿದ ಸೈನಿಕರು, ಎನ್ಎಸ್ಜಿ ಕಮಾಂಡೋಗಳು ಹಾಗೂ ಮುಂಬೈ ಪೊಲೀಸರುನ್ನು ನೆನಪಿಸಿಕೊಳ್ಳಬೇಕು, ನೆನಪಿಸಿಕೊಳ್ಳುತ್ತೇವೆ. ಆದರೆ, ಇದೇ ಸಂದಿಗ್ದ ಪರಿಸ್ಥಿತಿಯಲ್ಲಿ ಆ ನಾಲ್ಕು ಶ್ವಾನಗಳ ಸಾಹಸಗಾಥೆಯನ್ನು ಕೂಡ ನಾವಿಂದು ನೆನಪಿಸಿಕೊಳ್ಳಲೇ ಬೇಕು.
ಪಾಕಿಸ್ತಾನದಿಂದ ತರಬೇತಿ ಪಡೆದು, ಮುಂಬೈನ ಪ್ರಮುಖ ಪ್ರದೇಶಗಳಾದ ತಾಜ್ ಹೋಟೆಲ್, ನಾರಿಮನ್ ಹೌಸ್, ಕಾಮಾ ಆಸ್ಪತ್ರೆ, ಕೇಂದ್ರ ರೈಲ್ವೆ ನಿಲ್ದಾಣ ಮೊದಲಾದ ಕಡೆ ಈ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು.
ಕಂಡಕಂಡಲ್ಲಿ ಬಾಂಬ್, ಗ್ರೆನೇಡ್ ಎಸೆಯುತ್ತಾ, ಕಣ್ಮುಂದೆ ಕಾಣಿಸಿದವರಿಗೆ ಗುಂಡನ್ನು ಸಿಡಿಸುತ್ತಾ ಉದ್ವಿಗ್ನ ಸ್ಥಿತಿ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಗುರುತಿಸಿ, ಅವರ ಬಳಿಯಿದ್ದ ಸ್ಪೋಟಕಗಳನ್ನು ಪತ್ತೆಹಚ್ಚಿ, ಅಪರ ಯೋಜನೆಗಳನೆಲ್ಲಾ ತಲೆಕೆಳಗೆ ಮಾಡಿದ್ದೆ ಈ ಬಾಂಬ್ ಸ್ಕ್ವಾಡ್ ನಾಯಿಗಳಾಗಿವೆ.
ಮುಂಬೈ ಪೊಲೀಸರ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಲ್ಲಿದ್ದ ನಾಲ್ಕು ಲ್ಯಾಬ್ರಡಾರ್ ತಳಿಯ ನಾಯಿಗಳಾದ ಮ್ಯಾಕ್ಸ್, ಟೈಗರ್, ಸುಲ್ತಾನ್ ಮತ್ತು ಸೀಸರ್ ಈ ಶ್ವಾನಗಳು ಸಲ್ಲಿಸಿದೆ ಅದ್ವೀತಿಯ ಸಾಹಸದ ಫಲವಾಗಿಯೇ ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರು ತಪ್ಪಾಗದು.
2008 ರ ಈ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಮ್ಯಾಕ್ಸ್ ಸುಮಾರು 8 ಕೆ.ಜಿ ಆರ್ಡಿಎಕ್ಸ್ ಹಾಗೂ 25 ಕ್ಕೂ ಹೆಚ್ಚಿನ ಹ್ಯಾಂಡ್ ಗ್ರೇನೆಡ್ಗಳನ್ನು ಪತ್ತೆ ಹಚ್ಚಿ, ದಾಳಿಯ ತೀವ್ರತೆಯನ್ನು ತೀರಾ ಕಡಿಮೆಗೊಳಿಸಿತು.
ತಾಜ್ ಹೋಟೆಲ್ನಲ್ಲಿ ಅಡಗಿ ಕುಳಿತಿದ್ದ, ಉಗ್ರರ ಬಳಿ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಧೈರ್ಯವಾಗಿ ಮುನ್ನುಗುತ್ತಿದ್ದ ಮ್ಯಾಕ್ಸ್ ತನ್ನ ಅದ್ವತೀಯ ಸಾಧನಗೆಗಾಗಿ ಚಿನ್ನದ ಪದಕವನ್ನು ಪಡೆದುಕೊಂಡಿತು. 2015 ರಲ್ಲಿ ಸೇವಾ ನಿವೃತ್ತಿ ಹೊಂದಿದ ಈ ಶ್ವಾನ 2016 ರಲ್ಲಿ ನಿಧನಹೊಂದಿತು.
ಮುಂಬೈ ಪ್ರವೇಶಿಸಿದ ಉಗ್ರರು ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ನಿಲ್ದಾಣದಲ್ಲಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿ, ಅಲ್ಲಿಂದ ಬೇರೆಡೆ ಪರಾರಿ ಆಗಿದ್ದರು. ಆದರೆ, ಅಲ್ಲಿ ಕೆಲವೊಂದಿಷ್ಟು ಬಾಂಬ್ಗಳನ್ನು ಹಾಗೂ ಆರ್ಡಿಎಕ್ಸ್ ಗಳನ್ನೂ ಹೂತಿಟ್ಟು ಹೋಗಿದ್ದಾರೆಂಬ ಮಾಹಿತಿ ಇತ್ತು.
ಇದರ ಬೆನ್ನಲ್ಲೇ ಸೀಸರ್ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 10 ಕ್ಕೂ ಅಧಿಕ ಗ್ರೇನೆಡ್ಗಳನ್ನು ಪತ್ತೆ ಹಚ್ಚಿವ ಮೂಲಕ ರೈಲ್ವೆ ನಿಲ್ದಾಣವನ್ನು ರಕ್ಷಿಸಿತು.
ಇನ್ನೂ ಟೈಗರ್, ತಾಜ್ ಹೋಟೆಲ್ ಬಳಿ ಸುಮಾರು 8 ದಿನಗಳ ಗಸ್ತುನಿಂತಿದ್ದು, ಭಯೋತ್ಪಾದರೆಲ್ಲರೂ ಸತ್ತ ನಂತರವೂ ಹೋಟೆಲ್ನ ಮೂಲೆ ಮೂಲೆಗೆ ತೆರಳಿ, ಅಲ್ಲಿ ಅಡಗಿರಬಹುದಾದ ಸ್ಪೋಟಕಗಳನ್ನು ಪತ್ತೆ ಹಚ್ಚುವಲ್ಲಿ ಟೈಗರ್ ಮೆರೆದ ಸಾಹಸ ಅಷ್ಟಿಷ್ಟಲ್ಲ. 2016 ರಲ್ಲಿ ಟೈಗರ್ ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪಿತು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಸಲ್ಲಿಸಲಾಗಿತ್ತು.
ಇನ್ನು ಸುಲ್ತಾನ್ ಬೇರೆ ನಾಯಿಗಳ ರೀತಿ ಬಾಂಬ್ಗಳನ್ನು ಪತ್ತೆಹಚ್ಚಲು ನೇರವಾಗಿ ಭಾಗಿಯಾಗದಿದ್ದರೂ, ಇತರ ನಾಯಿಗಳ ಜತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದ, ಅದರಲ್ಲೂ ಟೈಗರ್ ಇತನ ಆಪ್ತಮಿತ್ರನಾಗಿದ್ದ. ತಾಜ್ನಲ್ಲಿ ಇವನು ಬಾಂಬ್ ಪತ್ತೆ ಹಚ್ಚಿಲ್ಲದಿದ್ದರೂ, ಗೊರೆಗಾಂವ್ನಲ್ಲಿ ಇದೇ ಉಗ್ರರು ಹೂತಿಟ್ಟಿದ್ದ ಸ್ಪೋಟಕವನ್ನು ಸುಲ್ತಾನ್ ಬಯಲಿಗೆಳೆದಿದ್ದ. ಇವನು ಕೂಡ ತನ್ನ ಮಿತ್ರನಂತೆ 2016 ರಲ್ಲಿಯೇ ನಿಧನ ಹೊಂದಿದ.
ಈ ಮ್ಯಾಕ್ಸ್, ಟೈಗರ್, ಸುಲ್ತಾನ್ ಮತ್ತು ಸೀಸರ್ ಎಂಬ ಮೂಕ ಪ್ರಾಣಿಗಳಿಗೆ ತಮ್ಮ ಸುತ್ತಲೂ ನಡೆಯುತ್ತಿದ್ದ ಆ ದುರಂತವನ್ನಾಗಲಿ ಅಥವಾ ಇತಿಹಾಸದಲ್ಲಿ ಅದಕ್ಕಿರುವ ಮಹತ್ವವನ್ನಾಗಲಿ ಅರ್ಥಮಾಡಿಕೊಳ್ಳುವ ಶಕ್ತಿ ಅವಕ್ಕಿರಲಿಲ್ಲ. ಆದರೂ ತಮ್ಮ ಪ್ರಾಣವನ್ನು ಲೆಕ್ಕಿಸದೇ ಅವುಗಳು ಸಲ್ಲಿಸಿದ ಸೇವೆಯನ್ನು ನಾವಿಂದು ನೆನಪಿಸಿಕೊಳ್ಳಲೇಬೇಕು, (ಏಜೆನ್ಸೀಸ್).