

ನವದೆಹಲಿ: ಪ್ರಸ್ತಾವಿತ ಡಿಲಿಮಿಟೇಷನ್ ಮಸೂದೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಎನ್ಸಿಪಿ(ಎಸ್ಪಿ) ಬಳಿಕ ಮತ್ತೊಂದು ಆನೆಬಲ ಬಂದಿದ್ದು, ಪ್ರಮುಖ ವಿರೋಧ ಪಕ್ಷ ಡಿಎಂಕೆ ಶನಿವಾರ(ನ. 28) ತನ್ನ ನಿಲುವಿನ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಡಿಲಿಮಿಟೇಷನ್ ಪ್ರಕ್ರಿಯೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ.
ಮುಂದಿನ ವಾರ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಗೆ ಬೆಂಬಲ ನೀಡುವುದಾಗಿ ಡಿಎಂಕೆ ಸ್ಪಷ್ಟಪಡಿಸಿದೆ. ಇಂದು ಬೆಳಿಗ್ಗೆ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಮಸೂದೆಗೆ ಬೆಂಬಲ ನೀಡಲು ಪಕ್ಷ ನಿರ್ಧಾರ ತೆಗೆದುಕೊಂಡಿದೆ.
ಸಭೆಯ ಬಳಿಕ ಮಾತನಾಡಿರುವ ಸಂಸದ ಎ.ರಾಜಾ, ಹೊಸ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಇನ್ನೊರ್ವ ಸಂಸದ ದಯಾನಿಧಿ ಮಾರನ್ ಸಹ, ಸದನದಲ್ಲಿ ಈ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂದಿದ್ದಾರೆ.
ಈ ಹಿಂದೆ ಡಿಲಿಮಿಟೇಷನ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಡಿಎಂಕೆ, ತಮಿಳುನಾಡಿಗೆ ಪ್ರಸ್ತುತ ಲಭ್ಯವಿರುವ ಶೇಕಡಾ 7.18 ರಷ್ಟು ಸ್ಥಾನಗಳ ಪಾಲನ್ನು ಕಡಿಮೆ ಮಾಡಬಾರದು. 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವೆ ಇರುವ ಸಂಸದೀಯ ಪ್ರಾತಿನಿಧ್ಯದ ಪ್ರಸ್ತುತ ಪ್ರಮಾಣವನ್ನು ಮುಂದಿನ 25 ವರ್ಷಗಳವರೆಗೆ ಬದಲಾಗದಂತೆ (ಯಥಾಸ್ಥಿತಿಯಲ್ಲಿ) ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿತ್ತು.
ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಪರಿಷ್ಕೃತ ರೂಪಕ್ಕೆ ಸಂಪುಟ ಅನುಮೋದನೆ ನೀಡಿದೆ. ಹೊಸ ಚೌಕಟ್ಟಿನ ಪ್ರಕಾರ, ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವುದು ಮತ್ತು ರಾಜ್ಯಗಳ ಸ್ಥಾನ ಹಂಚಿಕೆಯ ಅನುಪಾತವನ್ನು ಮುಂದಿನ 25 ವರ್ಷಗಳ ಕಾಲ ಅಂದರೆ 2051ರವರೆಗೆ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ತಮ್ಮ ಬೇಡಿಕೆಗೆ ಒಪ್ಪಿರುವ ಹಿನ್ನೆಲೆ ಡಿಎಂಕೆ ಮಸೂದೆಗೆ ಬೆಂಬಲಿಸಿದೆ ಎನ್ನಲಾಗಿದೆ (ಏಜೆನ್ಸೀಸ್).