ಮಹಾರಾಷ್ಟ್ರದಲ್ಲಿ FDA ಭರ್ಜರಿ ದಾಳಿ: ಕೃತಕವಾಗಿ ಮಾಗಿಸಿದ 1,400 ಕೆಜಿ ಬಾಳೆಹಣ್ಣು, ಕೆಮಿಕಲ್ ಬೆರೆತ 16,730 ಲೀ. ನಕಲಿ ಹಾಲು ವಶಕ್ಕೆ

ಮಹಾರಾಷ್ಟ್ರದಲ್ಲಿ FDA ಭರ್ಜರಿ ದಾಳಿ: ಕೃತಕವಾಗಿ ಮಾಗಿಸಿದ 1,400 ಕೆಜಿ ಬಾಳೆಹಣ್ಣು, ಕೆಮಿಕಲ್ ಬೆರೆತ 16,730 ಲೀ. ನಕಲಿ ಹಾಲು ವಶಕ್ಕೆ
Published on: 
  • ರಾಸಾಯನಿಕ ಬಳಸಿ ಹಣ್ಣುಗಳನ್ನು ಕೃತಕವಾಗಿ ಮಾಗಿಸುತ್ತಿದ್ದ ಪ್ರಕರಣ ಬೆಳಕಿಗೆ

  • ಮುಂಬೈ ವಿಭಾಗದಲ್ಲಿ ಆಹಾರ ಸುರಕ್ಷತೆ, ನೈರ್ಮಲ್ಯ ಕಾಪಾಡದ 8 ಹೋಟೆಲ್​ಗಳ ಪರವಾನಾಗಿ ರದ್ದು

  • ಪುಣೆಯಲ್ಲಿ 6.69 ಲಕ್ಷ ರೂ. ಮೌಲ್ಯದ 16,730 ಲೀಟರ್ ಕಲುಷಿತ ಹಾಲು ನಾಶ

ಮಹಾರಾಷ್ಟ್ರದಾದ್ಯಂತ ರೆಸ್ಟೋರೆಂಟ್‌ಗಳು ಮತ್ತು ಆಹಾರ ಮಳಿಗೆಗಳಲ್ಲಿನ ಆಹಾರ ಸುರಕ್ಷತೆ ನಿಯಮಗಳ ಉಲ್ಲಂಘನೆ ವಿರುದ್ಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ದಾಳಿ ಮುಂದುವರೆಸಿದೆ. ಮುಂಬೈ ಸಮೀಪದ ನವಿ ಮುಂಬೈನ APMC ಮಾರುಕಟ್ಟೆಯ ಮೇಲೆ ದಾಳಿ ನಡೆಸಿ, ಕೃತಕವಾಗಿ ಬಾಳೆಹಣ್ಣು ಮಾಗಿಸುತ್ತಿದ್ದ ಸುಮಾರು 1,394 ಕೆಜಿ ಬಾಳೆಹಣ್ಣುಗಳನ್ನು ವಶಪಡಿಸಿಕೊಂಡಿದೆ.

ಮುಂಬೈನಲ್ಲಿ ಆಹಾರ ಸುರಕ್ಷತೆ, ನೈರ್ಮಲ್ಯ, ಸಂಗ್ರಹಣೆ ಹಾಗೂ ದಾಖಲಾತಿಗಳಲ್ಲಿ ಲೋಪವೆಸಗಿದ ಒಟ್ಟು 11 ಸಂಸ್ಥೆಗಳ ವಿರುದ್ಧ ಹಾಗೂ 8 ಹೋಟೆಲ್​​ಗಳ ಪರವಾನಾಗ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.

ಕೃತಕವಾಗಿ ಬಾಳೆ ಮಾಗಿಸುತ್ತಿದ್ದವರ ವಿರುದ್ಧ ಕೇಸ್

APMC ಮಾರುಕಟ್ಟೆಯಲ್ಲಿ ಕಾರ್ಮಿಕನೊಬ್ಬ ಅಪಾಯಕಾರಿ ಎಥೆಫಾನ್ ದ್ರಾವಣದಲ್ಲಿ ಬಾಳೆಹಣ್ಣನ್ನು ಅದ್ದಿ ಕೃತಕವಾಗಿ ಮಾಗಿಸಲು ಮುಂದಾಗಿದ್ದ. ಆತನ ವಿರುದ್ಧ ದೂರು ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ 67,814 ರೂ. ಮೌಲ್ಯದ ಒಟ್ಟು 1,394 ಕೆಜಿ ಬಾಳೆಹಣ್ಣುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿರಳೆ, ನೊಣ ಪತ್ತೆ

ವಿಲೆಪಾರ್ಲೆಯ ಆರ್.ಎನ್. ಕೂಪರ್ ಮುನ್ಸಿಪಲ್ ಜನರಲ್ ಆಸ್ಪತ್ರೆಯ ಕ್ಯಾಂಟೀನ್ ನಡೆಸುತ್ತಿರುವ 'ಸತ್ಕರ್ ಕ್ಯಾಟರರ್ಸ್'ನಲ್ಲಿ ನೊಣಗಳು ಮತ್ತು ಜಿರಳೆಗಳು ಪತ್ತೆಯಾಗಿವೆ. ಅಂಧೇರಿಯ 'ಸುರಾಜ್ ಲಾಮಾ ಮೊಮೋಸ್'ನಲ್ಲಿ ಆಹಾರ ಮತ್ತು ಶುಚಿಗೊಳಿಸುವ ರಾಸಾಯನಿಕಗಳನ್ನು ಒಟ್ಟಿಗೆ ಸಂಗ್ರಹಿಸಿರುವುದು, ಅಸಮರ್ಪಕ ಶುಚಿಗೊಳಿಸುವಿಕೆ ಕಂಡುಬಂದಿದೆ.

ಮುಂಬೈ ಸೆಂಟ್ರಲ್‌ನ ತಾರ್ಡಿಯೋ ಲಂಚ್ ಹೋಮ್ ಹಾಗೂ ಶಕುನ್ ವೆಜ್ ರೆಸ್ಟೋರೆಂಟ್‌ಗಳಲ್ಲಿ ಅಡುಗೆ ಕೋಣೆಯ ನೈರ್ಮಲ್ಯ ಕೊರತೆ, ಮುಚ್ಚದ ಆಹಾರ ಮತ್ತು ಕಳಪೆ ನಿರ್ವಹಣೆ ಪತ್ತೆಯಾಗಿದೆ. ಮಝಗಾಂವ್‌ನ ರೋಷನ್ ಬೇಕರಿಯಲ್ಲಿ ತುಕ್ಕು ಹಿಡಿದ ಮತ್ತು ಅಶುಚಿಯಾದ ಉಪಕರಣಗಳು ಕಂಡುಬಂದಿವೆ.

ಡಿಟರ್ಜೆಂಟ್ ಬೆರೆಸಿದ ಹಾಲು ಪತ್ತೆ

ಇದಲ್ಲದೆ, ಮುಂಬೈನ ಮೂರು ಸಂಸ್ಥೆಗಳಿಂದ 31.14 ಲಕ್ಷ ರೂ. ಮೌಲ್ಯದ ನಿಷೇಧಿತ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಪಾಲ್ಘರ್‌ನಲ್ಲಿ ಬಾನ್ಡ್ ಪಾನ್ ಮಸಾಲಾ ಮತ್ತು ಗುಟ್ಕಾ ಜಪ್ತಿ ಮಾಡಲಾಗಿದೆ. ಪುಣೆ ವಿಭಾಗದ ಮಾಳಶಿರಾಸ್‌ನಲ್ಲಿ ಡಿಟರ್ಜೆಂಟ್ ಬೆರೆಸಿದ ಹಾಲಿನ ಪ್ರಕರಣದಲ್ಲಿ 6.69 ಲಕ್ಷ ರೂ. ಮೌಲ್ಯದ 16,730 ಲೀಟರ್ ಹಾಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ತುಕಾರಾಂ ಮುಂಡೆ ಬಗ್ಗೆ ವರದಿ

'ಸಿಂಘಂ' ಅಥವಾ 'ನಾಯಕ' ಎಂದು ಕರೆಯ ಲಾಗುವ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಆಯುಕ್ತ ತುಕಾರಾಂ ಮುಂಡೆ, ಜಾಗತಿಕ ಮಾಧ್ಯಮದ ಗಮನವನ್ನೂ ಸೆಳೆದಿದ್ದಾರೆ. ಮಹಾರಾಷ್ಟ್ರದಾದ್ಯಂತ ರೆಸ್ಟೋರೆಂಟ್‌ಗಳು ಮತ್ತು ಆಹಾರ ಮಳಿಗೆಗಳಲ್ಲಿನ ಆಹಾರ ಸುರಕ್ಷತೆ ನಿಯಮಗಳ ಉಲ್ಲಂಘನೆಗಾಗಿ ತೀವ್ರ ರೀತಿಯ ದಾಳಿ ನಡೆಸುತ್ತಿರುವ ಅವರನ್ನು 'ರಾಕ್‌ಸ್ಟಾರ್' ಎಂದು ಅಮೆರಿಕದ 'ನ್ಯೂಯಾರ್ಕ್ ಟೈಮ್ಸ್' ಮುಖಪುಟ ವರದಿಯಲ್ಲೇ ಉಲ್ಲೇಖಿಸಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net