

ನವದೆಹಲಿ: ನಿರ್ಬಂಧಿತ ಜಂತರ್ ಮಂತರ್ನಲ್ಲಿ ಪ್ರವೇಶಿಸಿ ಪ್ರತಿಭಟನೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು, ದೆಹಲಿಯ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ನೂತನವಾಗಿ ನೇಮಕಗೊಂಡ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಸೋಮವಾರ(ಅ. 19) ಹಾಜರುಪಡಿಸಿದ್ದು, ಮತ್ತೆ ಎರಡು ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ತಮ್ಮ ಇಬ್ಬರು ನಾಯಕರು ಬಿಡುಗಡೆಯಾಗುವುದನ್ನು ತಡೆಯಲು ಜಾಮೀನು ವಿಷಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಉದ್ದೇಶಪೂರ್ವಕವಾಗಿಯೇ ವಿಳಂಬಗೊಳಿಸಲಾಗುತ್ತಿದೆ ಎಂದು ಸಿಜೆಪಿ ಆರೋಪಿಸಿರುವ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ.
ಸಾರ್ವಜನಿಕರ ಭದ್ರತೆಯ ನೆಪವೊಡ್ಡಿ ಜಂತರ್ ಮಂತರ್ನಲ್ಲಿ ಪ್ರತಿಭಟನೆಯನ್ನು ನಿರ್ಬಂಧಿಸಿ ದೆಹಲಿ ಪೊಲೀಸರು ಆದೇಶ ಹೊರಡಿಸಿದ್ದರು. ಮತ್ತು ರಾಮಲೀಲಾ ಮೈದಾನ ಸೇರಿ ಇತರ ಮೂರು ಸ್ಥಳಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಅವಕಾಶ ನೀಡಿದ್ದರು. ಆದ್ರೆ ಸಿಜೆಪಿ ನಾಯಕರು ಜಂತರ್ ಮಂತರ್ ಪ್ರವೇಶಿಸಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದಾರೆ. ಅ. 13ರಂದು ಮ್ಯಾಜಿಸ್ಟ್ರೇಟ್ ಅವರಿಗೆ 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಸೋಮವಾರ ಇಬ್ಬರ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಅವುಗಳನ್ನು ತಿರಸ್ಕರಿಸಿದ್ದಾರೆ. ಹೊಸ ಜಾಮೀನು ಪತ್ರಗಳನ್ನು ಸಲ್ಲಿಸಿದರೂ ಸಹ, ಅವುಗಳಲ್ಲಿ ವ್ಯತ್ಯಾಸವಿದೆಯೆಂದು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸಿಜೆಪಿ ಪರ ವಕೀಲರು ಆರೋಪಿಸಿದ್ದಾರೆ (ಏಜೆನ್ಸೀಸ್).