

ನವದೆಹಲಿ: ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ (ಪಿಸಿ ಕಾಯ್ದೆ) ಸರ್ಕಾರಿ ನೌಕರ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ತನಿಖೆ ನಡೆಸಲು ಯಾವುದೇ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.
ರಾಜಸ್ಥಾನದ ಪೊಲೀಸ್ ಕಾನ್ಸ್ಟೆಬಲ್ ವಿರುದ್ಧ ಭ್ರಷ್ಟಾಚಾರದ ಆರೋಪ ನಿಗದಿಪಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಸ್.ವಿ.ಎನ್. ಭಟ್ಟಿ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠ ಅಕ್ಟೋಬರ್ 16ರಂದು ನೀಡಿದ ತೀರ್ಪಿನಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಕಾನ್ಸ್ಟೆಬಲ್ ತೇಜಾ ರಾಮ್ ವಿರುದ್ಧ ಪಿಸಿ ಕಾಯ್ದೆಯ ಸೆಕ್ಷನ್ 7ರ ಅಡಿ ಆರೋಪ ನಿಗದಿಪಡಿಸಿದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ನ್ಯಾಯಪೀಠ ಎತ್ತಿಹಿಡಿದಿದೆ.
ಪಿಸಿ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಸರ್ಕಾರಿ ನೌಕರರು ತಮ್ಮ ಅಧಿಕೃತ ಕರ್ತವ್ಯಗಳ ನಿರ್ವಹಣೆೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಅಥವಾ ಶಿಫಾರಸುಗಳಿಗೆ ಸಂಬಂಧಿಸಿದ ಕೆಲವು ಅಪರಾಧಗಳ ವಿಚಾರಣೆ ಅಥವಾ ತನಿಖೆಗೆ ತನಿಖಾ ಸಂಸ್ಥೆ ಪೂರ್ವಾನುಮತಿ ಪಡೆದಿಲ್ಲ ಎಂಬ ಪೊಲೀಸ್ ಕಾನ್ಸ್ಟೆಬಲ್ನ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ವಿವಿಧ ತೀರ್ಪಗಳನ್ನು ಉಲ್ಲೇಖಿಸಿದ ಪೀಠ, ಹಣ ದುರುಪಯೋಗ, ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ, ಲಂಚ ಪಡೆಯುವಂತಹ ಅಪರಾಧಗಳು ಈ ನಿಬಂಧನೆಯ ವ್ಯಾಪ್ತಿಯಿಂದ ಹೊರಗಿವೆ ಎಂದು ಹೇಳಿದೆ.
ಕಾನ್ಸ್ಟೆಬಲ್ ತೇಜಾರಾಮ್ ರಾಜಸ್ಥಾನದ ಸಿರೋಹಿಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಇವರೊಂದಿಗೆ ಕೆಲಸ ಮಾಡುತ್ತಿದ್ದ ಕಾನ್ಸ್ಟೆಬಲ್ ದೇವೇಂದ್ರ ಕುಮಾರ್ 2021 ರ ಏ.22 ರಂದು ನೀಡಿದ ದೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪರವಾಗಿ ತೇಜಾರಾಮ್ 1.5 ಲಕ್ಷ ರೂ.ಗೆ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದರು. 2021ರ ಜೂನ್ 4ರಂದು ಪಿಸಿ ಕಾಯ್ದೆಯ ಸೆಕ್ಷನ್ 7ಎ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ತೇಜಾರಾಮ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಬಳಿಕ ತೇಜಾರಾಮ್ನ್ನು 2021 ರ ಸೆ.1 ರಂದು ಬಂಧಿಸಲಾಯಿತು. 2023ರ ಡಿಸೆಂಬರ್ 8 ರಂದು ಕಾಯ್ದೆಯ ಸೆಕ್ಷನ್ 19 ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಅನುಮತಿ ನೀಡಿದ ನಂತರ, 2024 ರ ಜನವರಿ 19 ರಂದು ಆರೋಪ ಪಟ್ಟಿ ಸಲ್ಲಿಸಲಾಯಿತು. ರಾಜಸ್ಥಾನದ ಪಾಲಿ ವಿಶೇಷ ನ್ಯಾಯಾಲಯ 2024 ರ ಸೆಪ್ಟೆಂಬರ್ 12 ರಂದು ಪಿಸಿ ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ ಆರೋಪ ನಿಗದಿಪಡಿಸಿತು. ತೇಜಾರಾಮ್ ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು, 2025ರಲ್ಲಿ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂಕೋರ್ಟ್ ರಾಜಸ್ಥಾನ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
ನವದೆಹಲಿ: ಸರ್ಕಾರಿ ನೌಕರನೊಬ್ಬನನ್ನು ಸೇವೆಯಿಂದ ವಜಾಗೊಳಿಸುವ ಕಠಿಣ ಶಿಕ್ಷೆ ಆತನಿಗೆ ನೀಡುವ ಮರಣದಂಡನೆಗಿಂತ ಕಡಿಮೆ ಏನಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ವಜಾಗೊಂಡಿದ್ದ ತಮಿಳುನಾಡಿನ ಪೆರಿಯಾರ್ ವಿಶ್ವವಿದ್ಯಾಲಯದ ಉಪ ಕುಲಸಚಿವ ಆರ್. ಶರವಣನ್ ಅವರನ್ನು ಮರುನೇಮಕ ಮಾಡುವಂತೆ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರಿದ್ದ ನ್ಯಾಯಪೀಠ ಆದೇಶಿಸಿದೆ. ಈ ಮೂಲಕ ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠದ ಆದೇಶವನ್ನು ರದ್ದುಪಡಿಸಿ, ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದಿದೆ. ‘ಸೇವೆಯಿಂದ ವಜಾಗೊಳಿಸುವುದು ಅತ್ಯಂತ ಕಠಿಣ ಕ್ರಮವಾಗಿದ್ದು, ಇದು ನೌಕರ ಹಾಗೂ ಆತನ ಕುಟುಂಬದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ ಎಲ್ಲ ಸೇವಾ ಸೌಲಭ್ಯಗಳನ್ನು ಕಿತ್ತುಕೊಂಡು ಆತನನ್ನು ಆರ್ಥಿಕವಾಗಿ ಅಸಹಾಯಕನನ್ನಾಗಿ ಮಾಡುತ್ತದೆ. ಇಂತಹ ಅನ್ಯಾಯ ನಡೆದಾಗ ಸಾಂವಿಧಾನಿಕ ನ್ಯಾಯಾಲಯಗಳು ಮೂಕಪ್ರೇಕ್ಷಕರಾಗಿರಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.