

ಹೈದರಾಬಾದ್: ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ಭಾರತ ರಾಷ್ಟ್ರ ಸಮಿತಿ (BRS) ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ (ಕೆಟಿಆರ್) ಶನಿವಾರ ಘೋಷಿಸಿದ್ದಾರೆ. ಲೋಕಸಭಾ ಸ್ಥಾನಗಳಲ್ಲಿ ಶೇ. 50ರಷ್ಟು ಹೆಚ್ಚಳ ಮಾಡುವ ಕೇಂದ್ರದ ಪ್ರಸ್ತಾವನೆಯು ತಮ್ಮ ಪಕ್ಷದ ಪ್ರಮುಖ ಕಳವಳವನ್ನು ನಿವಾರಿಸಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೆಟಿಆರ್, ತೆಲಂಗಾಣದ ಹಿತಾಸಕ್ತಿಗಳನ್ನು ಕಾಪಾಡಲು ಬಿಆರ್‌ಎಸ್ ಸದಾ ಬದ್ಧವಾಗಿದೆ ಮತ್ತು ಮಹಿಳಾ ಮೀಸಲಾತಿ ಜಾರಿಯನ್ನು ಪಕ್ಷ ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ನಮ್ಮ ನಿಲುವು ಯಾವಾಗಲೂ ಸ್ಪಷ್ಟವಾಗಿದೆ: ಸಂಸತ್ತಿನಲ್ಲಿ ದಕ್ಷಿಣ ಭಾರತದ ಪ್ರಾತಿನಿಧ್ಯ ಕಡಿಮೆಯಾಗಬಾರದು ಮತ್ತು ತೆಲಂಗಾಣಕ್ಕೆ ಯಾವುದೇ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ. ಸಂಸತ್ತಿನಲ್ಲಿ ದಕ್ಷಿಣ ಭಾರತದ ಪ್ರಸ್ತುತ ಶೇ. 24ರಷ್ಟು ಪಾಲನ್ನು ರಕ್ಷಿಸಬೇಕು ಎಂದು ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೆವು ಎಂದು ಅವರು ಹೇಳಿದ್ದಾರೆ.
2051ರವರೆಗೆ ಅಂತರ-ರಾಜ್ಯ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸದಂತೆ ರಕ್ಷಣೆ ನೀಡಿ, ಸ್ಥಾನಗಳಲ್ಲಿ ಶೇ. 50ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆಯು ನಮ್ಮ ಪ್ರಮುಖ ಆತಂಕವನ್ನು ದೂರ ಮಾಡಿದೆ. ಇದರಿಂದ ತೆಲಂಗಾಣದ ಲೋಕಸಭಾ ಸ್ಥಾನಗಳ ಸಂಖ್ಯೆ 17ರಿಂದ 26ಕ್ಕೆ ಏರಿಕೆಯಾಗಲಿದೆ ಎಂದು ಕೆಟಿಆರ್ ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿರುವ ಬಿಆರ್‌ಎಸ್‌ನ ಮೂವರು ಸಂಸದರು ಮಸೂದೆಯ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಸ್ಥಾಪಿತ ಬಿಆರ್‌ಎಸ್ ಪಕ್ಷವು ಪ್ರಸ್ತುತ ಲೋಕಸಭೆಯಲ್ಲಿ ಯಾವುದೇ ಸ್ಥಾನವನ್ನು ಹೊಂದಿಲ್ಲ. ಆದರೆ, ರಾಜ್ಯಸಭೆಯಲ್ಲಿ ವಡ್ಡಿರಾಜು ರವಿಚಂದ್ರ, ದಿವಾಕೊಂಡ ದಾಮೋದರ್ ರಾವ್ ಮತ್ತು ಬಂಡಿ ಪಾರ್ಥಸಾರಥಿ ರೆಡ್ಡಿ ಎಂಬ ಮೂವರು ಸಂಸದರನ್ನು ಹೊಂದಿದೆ. ರಾಜ್ಯಸಭೆಯಲ್ಲಿ ಈ ಮೂವರು ಸಂಸದರು ಮಸೂದೆಯ ಪರವಾಗಿ ಮತ ಚಲಾಯಿಸುವುದರಿಂದ ಮೇಲ್ಮನೆಯಲ್ಲಿ ಕೇಂದ್ರ ಸರ್ಕಾರದ ಬಲ ಮತ್ತಷ್ಟು ಹೆಚ್ಚಾಗಲಿದೆ.
ಬಿಆರ್‌ಎಸ್‌ಗಿಂತ ಮುಂಚಿತವಾಗಿ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಸಹ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ತನ್ನ ಬೆಂಬಲವನ್ನು ಪ್ರಕಟಿಸಿತ್ತು. ಡಿಎಂಕೆಯ ಈ ನಿರ್ಧಾರವು ವಿರೋಧ ಪಕ್ಷಗಳ ಒಕ್ಕೂಟದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಿರುಕುಗಳನ್ನು ಬಹಿರಂಗಪಡಿಸಿದೆ.
ಲೋಕಸಭೆಯಲ್ಲಿ 22 ಸಂಸದರು ಹಾಗೂ ರಾಜ್ಯಸಭೆಯಲ್ಲಿ 8 ಸಂಸದರನ್ನು ಹೊಂದಿರುವ ಡಿಎಂಕೆ ಪಕ್ಷದ ಬೆಂಬಲವು ಕೇಂದ್ರ ಸರ್ಕಾರಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಸಂವಿಧಾನ ತಿದ್ದುಪಡಿಯ ಈ ಮಹತ್ವದ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲು ಮೂರನೇ ಎರಡರಷ್ಟು (2/3) ವಿಶೇಷ ಬಹುಮತದ ಅಗತ್ಯವಿರುವುದರಿಂದ, ಡಿಎಂಕೆ ಮತ್ತು ಬಿಆರ್‌ಎಸ್‌ನಂತಹ ಪ್ರಾದೇಶಿಕ ಪಕ್ಷಗಳ ಬೆಂಬಲವು ಮೋದಿ ಸರ್ಕಾರದ ಹಾದಿಯನ್ನು ಸುಗಮಗೊಳಿಸಿದೆ(ಏಜೆನ್ಸೀಸ್).